ಲೋಕಸಭಾ ಚುನಾವಣೆಯ ಟಿಕೆಟ್ ನೀಡಿಕೆಯಲ್ಲಿ ರಾಜ್ಯದಲ್ಲಿ ಓಬಿಸಿ ಸಮುದಾಯವನ್ನು ನಿರ್ಲಕ್ಷಿಸಬಾರದು – ದೀಪಕ್ ಕೆಳಮನೆ

ಲೋಕಸಭಾ ಚುನಾವಣೆಯ ಟಿಕೆಟ್ ನೀಡಿಕೆಯಲ್ಲಿ ರಾಜ್ಯದಲ್ಲಿ ಓಬಿಸಿ ಸಮುದಾಯವನ್ನು ನಿರ್ಲಕ್ಷಿಸಬಾರದು ಎಂದು ಭಾರತೀಯ ಓಬಿಸಿ ಮಹಾಸಭೆಯ ಕರ್ನಾಟಕ ರಾಜ್ಯ ಅಧ್ಯಕ್ಷ ದೀಪಕ ಕೆಳಮನೆ ಆಗ್ರಹಿಸಿದ್ದಾರೆ.

ಗುಜರಾತ ಹಾಗೂ ಮಧ್ಯಪ್ರದೇಶದಲ್ಲಿ ಓಬಿಸಿ ಅಭ್ಯರ್ಥಿಗಳಿಗೆ ಸುಮಾರು ಮೂರನೇ ಒಂದು ಭಾಗದಷ್ಟು ಟಿಕೆಟ್ ನೀಡಿದ ಪರಿಣಾಮವಾಗಿಯೇ ಆ ಎರಡೂ ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಜಯಗಳಿಸಲು ಸಾಧ್ಯವಾಯಿತು. ಬಿಜೆಪಿ ಹೈಕಮಾಂಡ್ ಇದನ್ನು ಪರಿಗಣಿಸಿ ಓಬಿಸಿ ಸಮುದಾಯಕ್ಕೆ ಟಿಕೆಟ್ ನೀಡಿಕೆಯಲ್ಲಿ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು ಎಂದು ಆಗ್ರಹಿಸುತ್ತಿದ್ದೇನೆ.
ದೇಶದಲ್ಲಿ ಪ್ರತಿ ಚುನಾವಣೆಯಲ್ಲಿಯೂ ಸಾಮಾಜಿಕ ಪ್ರಾತಿನಿಧ್ಯ ತುಂಬಾ ಮಹತ್ವವನ್ನು ಪಡೆದುಕೊಳ್ಳುತ್ತದೆ. ಹಿಂದುಳಿದ ವರ್ಗಗಳು ಆಡಳಿತದಲ್ಲಿ ನ್ಯಾಯಯುತವಾಗಿ ತಮ್ಮ ಪಾಲನ್ನು ಕೇಳುವುದು ತಪ್ಪೇನೂ ಇಲ್ಲ.

ಮುಖ್ಯಮಂತ್ರಿ ಸಿದ್ಧರಾಮಯ್ಯ ಓಬಿಸಿ ಸಮುದಾಯಕ್ಕೆ ಸೇರಿರುವುದರಿಂದ ಟಿಕೆಟ್ ನೀಡುವಾಗ ಬಿಜೆಪಿ ಸೂಕ್ಷ್ಮವಾಗಿ ಹೆಜ್ಜೆ ಇಡಬೇಕು. ಓಬಿಸಿ ಸಮುದಾಯದ ಅಭ್ಯರ್ಥಿಗಳಿಗೆ ಹೆಚ್ಚು ಟಿಕೆಟ್ ನೀಡುವ ಮೂಲಕ ಕಾಂಗ್ರೆಸ್ ಅನ್ನು ಕಟ್ಟಿಹಾಕಲು ಖಂಡಿತಾ ಸಾಧ್ಯವಿದೆ.

2019ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಓಬಿಸಿ ಅಭ್ಯರ್ಥಿಗಳಿಗೆ ಆದ್ಯತೆ ನೀಡಿಲ್ಲ. ಇದು ಈ ಬಾರಿಯೂ ಪುನರಾವರ್ತನೆ ಆಗಬಾರದು. ಸ್ವತಃ ಮುಖ್ಯಮಂತ್ರಿ ಓಬಿಸಿ ಸಮುದಾಯಕ್ಕೆ ಸೇರಿದ್ದರೂ ಕಾಂಗ್ರೆಸ್ ಓಬಿಸಿ ಅಭ್ಯರ್ಥಿಗಳಿಗೆ ಹೆಚ್ಚಿನ ಮಣೆ ಹಾಕುತ್ತಿದೆ.

2019ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಲಿಂಗಾಯತರು 9, ಒಕ್ಕಲಿಗರು 7 ಇದರಲ್ಲಿ ಒಬ್ಬರು ಕಾಂಗ್ರೆಸ್ ಹಾಗೂ ಮತ್ತೊಬ್ಬರು ಜೆಡಿಎಸ್ ಪಕ್ಷಕ್ಕೆ ಸೇರಿದವರು. ಬ್ರಾಹ್ಮಣರು ಸಣ್ಣ ಸಮುದಾಯವಾದರೂ 3 ಸ್ಥಾನ ಪಡೆದುಕೊಂಡಿದ್ದಾರೆ. ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು ಒಟ್ಟಾಗಿ 7 ಸ್ಥಾನ ಪಡೆದುಕೊಂಡಿವೆ. ಸ್ವತಂತ್ರ ಗುಂಪನ್ನು ಪ್ರತಿನಿಧಿಸುವ ನಾಯ್ಡು – ಕಮ್ಮ ಸಮುದಾಯವು ಒಂದು ಸ್ಥಾನ ಗೆದ್ದಿತ್ತು. ಬಲಿಜಿಗ ಸಮುದಾಯ ಸಹ 1 ಸ್ಥಾನ ಪಡೆದುಕೊಂಡಿದೆ. ಆದರೆ ಓಬಿಸಿಯಿಂದ ಬಿಜೆಪಿ ಯಾರಿಗೂ ಪ್ರಾತಿನಿಧ್ಯ ನೀಡಿಲ್ಲ. ಇದು ಬಿಜೆಪಿಯ ಬಗ್ಗೆ ಓಬಿಸಿ ಸಮುದಾಯ ಮುನಿಸಿಕೊಳ್ಳಲು ಕಾರಣವಾಗುವ ಸಾಧ್ಯತೆ ಇದೆ.
ಗುಜರಾತ್ ಹಾಗೂ ಮಧ್ಯಪ್ರದೇಶದಂತೆ ಓಬಿಸಿ ಪ್ರಾತಿನಿಧ್ಯಕ್ಕೆ ಸಂಬಂಧಿಸಿದಂತೆ ಬಿಜೆಪಿಯ ರಾಜ್ಯದಲ್ಲಿ ತನ್ನ ಧೋರಣೆ ಹಾಗೂ ಕಾರ್ಯತಂತ್ರವನ್ನು ಮರು ಪರಿಶೀಲಿಸುವ ಅಗತ್ಯತೆ ಇದೆ. ಓಬಿಸಿ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲೇಬೇಕಾಗಿದೆ. ಹೀಗೆ ಓಬಿಸಿ ಸಮುದಾಯಕ್ಕೆ ಆದ್ಯತೆ ನೀಡಿದಲ್ಲಿ ಅದು ಚುನಾವಣೆಯಲ್ಲಿ ಬಿಜೆಪಿಗೆ ಉತ್ತಮ ಅಸ್ತ್ರವಾಗಬಹುದು. ಅದು ಬಿಜೆಪಿಗೆ ಅನಿವಾರ್ಯವೂ ಹೌದು.
ಈಗಲೇ ಬಿಜೆಪಿ ಈ ಬಗ್ಗೆ ಎಚ್ಚೆತ್ತುಕೊಂಡು ಓಬಿಸಿ ಸಮುದಾಯಕ್ಕೆ ಟಿಕೆಟ್ ಹಂಚಿಕೆಯಲ್ಲಿ ಆದ್ಯತೆ ನೀಡಬೇಕು. ಆ ಮೂಲಕ ಹಿಂದುಳಿದವರ ಪರವಾಗಿ ನಾವಿದ್ದೇವೆ ಎಂಬ ಸಂದೇಶ ಹೋಗುವಂತಾಗಬೇಕು. ಬಿಜೆಪಿ ಇದನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಆಗ್ರಹಿಸುತ್ತಿದ್ದೇನೆ.

Latest Indian news

Popular Stories