ಪಡುಬಿದ್ರಿ: ನಕಲಿ ಚಿನ್ನ ಅಡವಿಟ್ಟು ಮೋಸ ಮಾಡಿದ ದಂಪತಿ: ಓರ್ವ ಬಂಧನ

ಪಡುಬಿದ್ರಿ: ನಕಲಿ ಚಿನ್ನದ ಆಭರಣಗಳನ್ನೇ ಪಡುಬಿದ್ರಿ ಆಸುಪಾಸಿನ ಮೂರು ವಿವಿಧ ಬ್ಯಾಂಕುಗಳಲ್ಲಿ ಅಡವಿಟ್ಟು ೨೯.೯೪ಲಕ್ಷರೂ. ಪಂಗನಾಮ ಹಾಕಿರುವ ಬಗ್ಗೆ ದಂಪತಿಯ ವಿರುದ್ಧ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಪಡುಬಿದ್ರಿ ಕಂಚಿನಡ್ಕ ರಾಘವೇಂದ್ರ ಮಠದ ಬಳಿಯ ರಾಜೀವ್‌ನನ್ನು ಪಡುಬಿದ್ರಿ ಪೊಲೀಸರು ಬಂಧಿಸಿದ್ದು, ಆತನಿಗೆ ಮಾರ್ಚ್ ೭ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಸ್ನೇಹಲತಾಳಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.

ಪಡುಬಿದ್ರಿಯ ಸೌತ್ ಕೆನರಾ ಗೋಲ್ಡ್ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ. ಆಪರೇಟಿವ್ ಬ್ಯಾಂಕ್‌ನ ಪಡುಬಿದ್ರಿ ಶಾಖೆಯಲ್ಲಿ ೨೦೨೨ ಸೆ. ೧ರಿಂದ ಫೆ. ೨೬, ೨೦೨೪ರವರೆಗೆ ಈ ದಂಪತಿ ೧೮೦ಗ್ರಾಂ ನಕಲಿ ಚಿನ್ನವನ್ನಿಟ್ಟು ೮.೦೮ಲಕ್ಷಗಳನ್ನು ಪಡೆದುಕೊಂಡಿದೆ. ಪಡುಬಿದ್ರಿ ವ್ಯವಸಾಯಿಕ ಸಹಕಾರಿ ಸಂಘದ ಪಡುಬಿದ್ರಿ ಶಾಖೆಯಿಂದ ೨ವರ್ಷಗಳ ಅ್ಜವಧಿಯಲ್ಲಿ ೨೩೧ಗ್ರಾಂ ಹಾಗೂ ೧೮೮ಗ್ರಾಂ ನಕಲಿ ಚಿನ್ನವನ್ನು ಅಡವಿಟ್ಟು ೧೯ಲಕ್ಷ ರೂ. ಗಳನ್ನು ಸಾಲವಾಗಿ ಪಡೆದಿದ್ದಾರೆ. ಉಚ್ಚಿಲದ ಎಸ್‌ಸಿಡಿಸಿಸಿ ಬ್ಯಾಂಕ್ ಶಾಖೆಯಿಂದ ಮಾರ್ಚ್ ೨೦೨೩ರಿಂದ ಫೆ. ೨೬, ೨೦೨೪ರ ಅವಧಿಯಲ್ಲಿ ೭೨ಗ್ರಾಂ ಚಿನ್ನ ಅಡವಿಟ್ಟು ೨.೮೬ಲಕ್ಷ ರೂ. ಗಳನ್ನು ಪಡೆದಿದ್ದರು.

ಸಾಲ ಪಡೆದಿರುವ ಈ ದಂಪತಿ ಬಡ್ಡಿ ಕಟ್ಟಲೂ ಮುಂದಾಗಿರಲಿಲ್ಲ. ಬಳಿಕ ಬ್ಯಾಂಕಿನವರು ಪರಿಶೀಲನೆಗಳನ್ನು ನಡೆಸಿದಾಗ ಮೋಸದ ಬಗೆಗೆ ಅರಿವಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿ ಪಡುಬಿದ್ರಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

Latest Indian news

Popular Stories