Featured StoryUdupi
ಪಡುಬಿದ್ರೆ| ರೈಲು ಹಳಿಯ ಕಬ್ಬಿಣ ಹೆಕ್ಕಿದ ಆರೋಪ: ಬಾಲಕರಿಬ್ಬರಿಗೆ ಹೊಡೆದ ರೈಲ್ವೆ ಗ್ಯಾಂಗ್‌ಮ್ಯಾನ್ ವಿರುದ್ಧ ಪ್ರಕರಣ ದಾಖಲು

ಪಡುಬಿದ್ರೆ , ಫೆ.16: ರೈಲು ಹಳಿಯ ಕಬ್ಬಿಣ ಹೆಕ್ಕಿದ ಆರೋಪದಲ್ಲಿ ಬಾಲಕರಿಗೆ ಹಲ್ಲೆ ನಡೆಸಿ, ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿರುವ ಕೊಂಕಣ ರೈಲ್ವೇ ಗ್ಯಾಂಗ್‌ಮ್ಯಾನ್ ವಿರುದ್ಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಲಕನೋರ್ವನ ತಂದೆ ಹೆಜಮಾಡಿಯ ಅಬ್ದುಲ್ ಖಾದರ್ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ಪಲಿಮಾರು ಗ್ರಾಮದ ಅವರಾಲು ಮಟ್ಟು ಎಂಬಲ್ಲಿರುವ ಅಜ್ಜನ ಮನೆಗೆ ಬಾಲಕನೋರ್ವ ತನ್ನ ಗೆಳೆಯನೊಂದಿಗೆ ಹೋಗಿದ್ದನು. ಫೆ.15ರಂದು ಮಧ್ಯಾಹ್ನದ ವೇಳೆಗೆ ಇವರಿಬ್ಬರು ಆಟ ಆಡುತ್ತ ರೈಲು ಹಳಿಯ ಬಳಿ ದೊರೆತ ಕಬ್ಬಿಣದ ತುಂಡನ್ನು ಹೆಕ್ಕಿದ್ದರು ಎನ್ನಲಾಗಿದೆ.
ಇದನ್ನು ನೋಡಿದ ಗ್ಯಾಂಗ್‌ಮ್ಯಾನ್ ಬಾಲಕರನ್ನು ಹಿಡಿದು, ಕೋಲಿನಿಂದ ಒಬ್ಬನ ತಲೆಗೆ ಹಾಗೂ ಮತ್ತೋರ್ವನ ಕಾಲಿಗೆ ಹೊಡೆದಿದ್ದಾನೆ. ಅಲ್ಲದೆ ಇಡೀ ಘಟನೆಯ ವೀಡಿಯೋವನ್ನು ಮಾಡಿ, ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿ ಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.