ಉಡುಪಿ: ಉಡುಪಿ ಜಿಲ್ಲೆಗೆ ಸರಕಾರಿ ವೈದ್ಯಕೀಯ ಕಾಲೇಜು ಒದಗಿಸುವಂತೆ ಆಗ್ರಹಿಸಿ ಮನೋವೈದ್ಯ ಡಾ.ಪಿ.ವಿ.ಭಂಡಾರಿ ನೇತೃತ್ವದಲ್ಲಿ ಉಡುಪಿಯ ಕರಾವಳಿ ಯೂತ್ ಕ್ಲಬ್ ನಿಯೋಗವು ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮನವಿ ಸಲ್ಲಿಸಿತು.
ಉಡುಪಿ ಜಿಲ್ಲೆಯಾಗಿ 2 ವರ್ಷಗಳು ಕಳೆದರು ಜಿಲ್ಲೆಗೆ ಒಂದು ಸರ್ಕಾರಿ ವೈದ್ಯಕೀಯ ಕಾಲೇಜು ಇಲ್ಲದಿರುವುದು ದುರಂತ. ನಮ್ಮ ಜಿಲ್ಲೆ ಸ್ಥಾಪನೆಯಾದ ಸಂದರ್ಭದಲ್ಲಿಯೇ ರಚಿತವಾದ ಜಿಲ್ಲೆಗಳಲ್ಲಿ ಕೊಪ್ಪಳ ಕೂಡ ಒಂದು. ಕೊಪ್ಪಳದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜನ್ನು ನಿರ್ಮಿಸಲಾಗಿದೆ. ಆದರೆ ಉಡುಪಿ ಜಿಲ್ಲೆಗೆ ಈ ಭಾಗ್ಯ ಲಭ್ಯವಾಗಿಲ್ಲದಿರುವುದು ಈ ಭಾಗದ ಜನಪ್ರತಿನಿಧಿ ಗಳ ಅಸಮರ್ಥತೆಯನ್ನು ಎದ್ದು ತೋರಿಸುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಕಳೆದ 2 ವರ್ಷದಿಂದ ಬುದ್ಧಿವಂತ ಜಿಲ್ಲೆ ಎನಿಸಿಕೊಂಡಿರುವ ಉಡುಪಿಗೆ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಯಾರೂ ಯಾವುದೇ ಪ್ರಯತ್ನವನ್ನು ಮಾಡಿರುವುದಿಲ್ಲ. ಕಳೆದ ಬಾರಿಯ ಬಿ.ಜೆ.ಪಿ ಸರ್ಕಾರದ ಅವಧಿಯಲ್ಲಿ ಉಡುಪಿ ಜಿಲ್ಲೆಗೆ ಖಾಸಗಿಯವರ ಜೊತೆ ಒಡಂಬಡಿಕೆ ಮಾಡಿಕೊಂಡು ಪಿಪಿಪಿ ಮಾದರಿಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸುವುದಾಗಿ ಹಿಂದಿನ ಬಿ.ಜೆ.ಪಿ ಸರ್ಕಾರದ ಜನಪ್ರತಿನಿಧಿಗಳು ತಿಳಿಸಿದ್ದರು. ಆದರೆ ಈ ಹೇಳಿಕೆ ಬಗ್ಗೆ ಉಡುಪಿ ಜನತೆಗೆ ಸ್ಪಷ್ಟ ಮಾಹಿತಿ ಹಾಗೂ ದಾಖಲೆಗಳನ್ನು ನೀಡಿರುವುದಿಲ್ಲ.
ಉಡುಪಿ ಜಿಲ್ಲೆಯ ಜನತೆಗೆ ಬೇಕಾಗಿರುವುದು ಸರಕಾರಿ ಸೌಲಭ್ಯವಿರುವ ಸರಕಾರಿ ವೈದ್ಯಕೀಯ ಕಾಲೇಜು ಹೊರತು ಪಿಪಿಪಿ ಅಂದರೆ ಖಾಸಗಿ ಸಹಭಾಗಿತ್ವದ ಸರಕಾರಿ ವೈದ್ಯಕೀಯ ಕಾಲೇಜು ಅಲ್ಲವೇ ಅಲ್ಲ. ಏಕೆಂದರೆ ಪಿಪಿಪಿ ಮಾದರಿ ರಾಜ್ಯದಲ್ಲಿ ಎಲ್ಲಿ ಕೂಡ ಸರಿಯಾಗಿ ಕೆಲಸ ನಿರ್ವಹಿಸಿಲ್ಲ ಹಾಗೂ ಸಂಪೂರ್ಣ ವಿಫಲವಾಗಿದೆ. ಆದುದರಿಂದ ಬಡವರ ಹಿತದೃಷ್ಟಿಯಲ್ಲಿ ವಿಶೇಷ ನಿರ್ಧಾರ ತೆಗೆದುಕೊಂಡು ಉಡುಪಿ ಜಿಲ್ಲೆಯಲ್ಲಿ 1 ನೇ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ