ರಬೀವುಲ್ ಅವ್ವಲ್ ತಿಂಗಳು ಬಂದರೆ ಜಗತ್ತಿನಾದ್ಯಂತ ಸೀರತುನ್ನಬೀ ಅಂದರೆ ಪ್ರವಾದಿ ಮುಹಮ್ಮದ್ (ಸ) ರವರ ಜೀವನ ಮತ್ತು ಸಂದೇಶದ ಮೂಲಕ ಸಮುದಾಯದ ಮಟ್ಟದಲ್ಲಿ ಹಾಗೂ ದೇಶ ಬಾಂಧವರೊಂದಿಗೆ ಪ್ರವಾದಿ ಜೀವನ ಸಂದೇಶವನ್ನು ಸಾರುವ ಮೂಲಕ ಆಚರಿಸಲಾಗುವುದು.
ಪ್ರವಾದಿ ಮುಹಮ್ಮದ್ (ಸ) ರವರು ತಮ್ಮ ಇಡೀ ಬದುಕನ್ನು ಇತರರಿಗೆ ಮಾದರಿಯಾಗಿ ಬದುಕಿದವರು, ಅವರು ಕೇವಲ ಒಂದು ಪ್ರದೇಶಕ್ಕೆ ಅಥವಾ ಜನವರ್ಗಕ್ಕೆ ಸಿಮೀತವಾದವರಲ್ಲ ಅವರು ಬೋಧಿಸಿದ ತತ್ವಗಳು ಮತ್ತು ಮೌಲ್ಯಗಳು ಸಾರ್ವಕಾಲಿವಾದುದು, ಪ್ರವಾದಿವರ್ಯರ ಜನ್ಮದಿನಾಚರಣೆಯನ್ನು ಜಾಗತಿಕ ಮಟ್ಟದಲ್ಲಿ ಎಲ್ಲ ಜನ ಪ್ರದೇಶದ ಜನರು ಮೀಲಾದುನ್ನಬಿ ಹೆಸರಿನಲ್ಲಿ ಆಚರಿಸುವುದು ರೂಢಿಯಲ್ಲಿದೆ.
ಪ್ರವಾದಿ ಮುಹಮ್ಮದ್ (ಸ) ರವರು ಸೃಷ್ಟಿಕರ್ತನಿಂದ ನಿಯುಕ್ತರಾದ ಅಂತಿಮ ಪ್ರವಾದಿಯಾಗಿದ್ದರು, ಅವರು ನಮ್ಮವರಲ್ಲಿಯೆ ಒಬ್ಬರಾಗಿದ್ದರು, ಅವರು ಸಾರಿದ ಸಂದೇಶಗಳಲ್ಲಿ ಏಕದೇವೋಪಾಸನೆ ಮತ್ತು ಪರಲೋಕದ ಕಲ್ಪನೆ ಪ್ರಮುಖವಾದುದು.ಪ್ರವಾದಿ ಮುಹಮ್ಮದ್ (ಸ) ರವರನ್ನು ನಡೆದಾಡುವ ಕುರ್ ಆನ್ ಎಂದು ಕರೆಯುತ್ತಿದ್ದರು, ಅಂದರೆ ಪ್ರವಾದಿವರ್ಯರು ತಮ್ಮ ಜೀವಿತದ ಅವಧಿಯಲ್ಲಿ ದೈವಿಕ ವಾಣಿ ಕುರ್ ಆನ್ ಬೋಧನೆಯಂತೆ ಬದುಕಿದವರು, ಅವರ ನಡೆ-ನುಡಿಯಲ್ಲಿ ಕಿಂಚಿತ್ತೂ ವ್ಯತ್ಯಾಸ ಇರಲಿಲ್ಲ ಎಂಬುದು ಅವರ ಪಾರದರ್ಶಕ ಮತ್ತು ಪ್ರಾಮಾಣಿಕ ಬದುಕಿಗೆ ಕನ್ನಡಿಯಂತಿದೆ.
ರಕ್ತವು ನಮ್ಮ ಜೀವಕ್ಕೆ ಅತ್ಯಗತ್ಯ, ಅನೇಕ ಶಸ್ತ್ರಚಿಕಿತ್ಸೆಗೆ ಮತ್ತು ಆಕಸ್ಮಿಕ ಅಪಘಾತದ ಸಂದರ್ಭದಲ್ಲಿ ರಕ್ತವು ರೋಗಿಯ ಬದುಕನ್ನು ಉಳಿಸುವಲ್ಲಿ ಅಗತ್ಯವಾದುದಾಗಿದೆ, ಈ ನಿಟ್ಟಿನಲ್ಲಿ ರಕ್ತದಾನವು ಬಹಳಷ್ಟು ಮಹತ್ವದ ಕಾರ್ಯವಾಗಿದೆ, ಆದ್ದರಿಂದ ಸೀರತ್ ಅಭಿಯಾನದ ಪ್ರಯುಕ್ತ ಎಸ್.ಐ.ಓ(SIO) ಕರ್ನಾಟಕವು ರಾಜ್ಯಾದ್ಯಂತ “ರಕ್ತದಾನ ಶಿಬಿರ” ಆಯೋಜಿಸುವ ಮೂಲಕ ರಕ್ತದಾನದ ಮಹತ್ವ ಹಾಗೂ ಯುವಜನರಲ್ಲಿ ರಕ್ತದಾನ ಮಾಡುವುದಕ್ಕೆ ಪ್ರೇರಣೆ ನೀಡುವ ಕಾರ್ಯವನ್ನು ಮಾಡುತ್ತಿದೆ.
ನಿಮ್ಮಲ್ಲಿ ಯಾರಾದರೂ ಒಬ್ಬ ವ್ಯಕ್ತಿಯನ್ನು ಅನ್ಯಾಯವಾಗಿ ಕೊಂದರೆ ಇಡೀ ಮನುಕುಲವನ್ನೇ ಕೊಂದಂತೆ, ಒಬ್ಬರು ಇನ್ನೊಬ್ಬರ ಜೀವವನ್ನು ಉಳಿಸಿದರೆ ಇಡೀ ಮಾನವ ಕುಲವನ್ನೇ ರಕ್ಷಿಸಿದಂತೆ ಎಂಬುದನ್ನು ಕುರ್ ಆನ್ ಹೇಳುತ್ತದೆ.
ಅದೇ ರೀತಿ ಭೂಮಿಯ ಮೇಲೆ ಇರುವ ಜೀವಗಳೊಂದಿಗೆ ಕರುಣೆ ತೋರಿದರೆ ಆಕಾಶದಲ್ಲಿ ಇರುವವನು ನಿಮ್ಮ ಮೇಲೆ ಕರುಣೆ ತೋರುತ್ತಾನೆ ಎಂಬುದು ಪ್ರವಾದಿವರ್ಯರ ಬೋಧನೆಯಾಗಿದೆ.
ಭೂಮಿಯಲ್ಲಿರುವ ಎಲ್ಲ ಮನುಷ್ಯ ಸಂಕುಲವು ಆದಮರ ಸಂತತಿ ಆಗಿದ್ದು, ಎಲ್ಲ ಜನ ಸಮುದಾಯಗಳ ಜನರು ಪರಸ್ಪರ ಸಹೋದರರು ಮತ್ತು ಸಮಾನರು ಎಂಬ ಸಮತೆಯ ಹಾಗೂ ಭ್ರಾತೃತ್ವದ ಮೌಲ್ಯಗಳು ಪ್ರವಾದಿವರ್ಯರ ಪ್ರತಿಪಾದನೆಯಾಗಿದೆ.
ಸೃಷ್ಟಿಕರ್ತನು ಮನುಷ್ಯನನ್ನು ಸಮಾಜ ಜೀವಿಯಾಗಿ ಸೃಷ್ಟಿಸಿದ್ದಾರೆ, ಪರಸ್ಪರ ಸಹಕಾರ ಮತ್ತು ಅವಶ್ಯಕತೆಗೆ ಪೂರಕವಾಗಿ ಬದುಕುವುದು ಮನುಷ್ಯನ ಲಕ್ಷಣವಾಗಿದೆ.
ಶಾಂತಿ ಮತ್ತು ಪ್ರೀತಿ ಹಾಗೂ ಸಹಬಾಳ್ವೆಯ ತಳಹದಿಯಲ್ಲಿ ಸಮಾಜವನ್ನು ಕಟ್ಟಲು ಪ್ರವಾದಿವರ್ಯರು ನಮಗೆಲ್ಲ ಪ್ರೇರಕಶಕ್ತಿಯಾಗಿದ್ದು, ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗುವ ಮೂಲಕ ಅವರ ಆಶಯಗಳನ್ನು ಸಾಕಾರಗೊಳಿಸಲು ಯುವ ಜನಾಂಗ ಮುಂದಾಗಬೇಕಿರುವುದು ಈ ಕಾರ್ಯಕ್ರಮದ ಆಶಯವಾಗಿದೆ.