ಉಡುಪಿ | ಬೀದಿ ಪಾಲಾದ ಬಿಎಸ್ಸಿ ಪದವೀಧರ ಮಾನಸಿಕ ಅಸ್ವಸ್ಥನ ರಕ್ಷಣೆ: ಸೂಚನೆ

ಉಡುಪಿ ನ.26: ಕಳೆದ ಒಂದೂವರೆ ವರ್ಷದಿಂದ ಉಡುಪಿ ನಗರದಲ್ಲಿ ಮನ ಬಂದಂತೆ ತಿರುಗಾಡುತ್ತಾ, ಕೂಗುತ್ತಾ ಕೆಲವೊಂದು ಬಾರಿ ಭಯದ ವಾತಾವರಣ ಸೃಷ್ಟಿಸಿ, ಕೊಳಕು ಬಟ್ಟೆ ಕ್ಷೌರ ಸ್ನಾನವನ್ನು ಮಾಡದೆ ಬೀದಿ ಪಾಲಾದ ಬಿಎಸ್ಸಿ ಪದವೀಧರ ವ್ಯಕ್ತಿಯನ್ನು ವಿಶು ಶೆಟ್ಟಿ ಅಂಬಲಪಾಡಿ ರಕ್ಷಿಸಿ ಮಂಜೇಶ್ವರದ ದೈಗೋಳಿ ಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರ ಶ್ರೀ ಸಾಯಿ ಸೇವಾಶ್ರಮ ಕ್ಕೆ ಚಿಕಿತ್ಸೆ ಹಾಗೂ ಪುನರ್ವಸತಿಗೆ ದಾಖಲಿಸಿದ ಮಾನವೀಯ ಘಟನೆ ನಡೆದಿದೆ.

ವ್ಯಕ್ತಿ ತನ್ನ ಹೆಸರು ಪ್ರಶಾಂತ್ ಸಾಲಿಯನ್ (40) ಮಲ್ಪೆ ಪಂದುಬೆಟ್ಟುವಿನ ಮೊಗವೀರ ಸಮಾಜದವರು ಎಂಬ ಮಾಹಿತಿ ನೀಡಿದ್ದಾರೆ. ಬಿಎಸ್ಸಿ ಪದವೀಧರರಾದ ಇವರು ಹಲವು ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದು ಪ್ರತಿಭಾವಂತ ವ್ಯಕ್ತಿಯಾಗಿದ್ದಾರೆ. ಯಾವುದೋ ವಿಷಯಕ್ಕೆ ಮನನೊಂದು ಮಾನಸಿಕ ಅಸ್ವಸ್ತರಾಗಿ ಚಿಕಿತ್ಸೆ ಪಡೆಯದೆ ಬೀದಿ ಪಾಲಾಗಿ ಬದುಕು ನಡೆಸುತ್ತಿದ್ದು ಬಹಳಷ್ಟು ಸಾರ್ವಜನಿಕರು ಕೂಡ ಇವರ ಬಗ್ಗೆ ಅನುಕಂಪ ಹೊಂದಿದ್ದರು.

ಸಾರ್ವಜನಿಕರ ವಿನಂತಿಯ ಮೇರೆಗೆ ವಿಶು ಶೆಟ್ಟಿ ರಕ್ಷಿಸಿ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಆಶ್ರಮದ ಮುಖ್ಯಸ್ಥರಲ್ಲಿ ವಿಶು ಶೆಟ್ಟಿ ಮಾಡಿದ ಮನವಿಗೆ ಅನುಮತಿ ನೀಡಿದ್ದು ತನ್ನ ವಾಹನದಲ್ಲಿ ಆಶ್ರಮಕ್ಕೆ ದಾಖಲು ಮಾಡಿದ್ದಾರೆ.

ಈ ಬಗ್ಗೆ ನಗರ ಠಾಣೆಗೆ ಮಾಹಿತಿ ನೀಡಲಾಗಿದೆ. ರಕ್ಷಣಾ ಕಾರ್ಯದಲ್ಲಿ ಸಾಮಾಜಿಕ ಕಾರ್ಯಕರ್ತರಾದ ಉದ್ಯಾವರದ ಹರೀಶ್ ರಾಮದಾಸ್ ಪಾಲನ್ ಹಾಗೂ ಸಂದೇಶ್ ಉಚ್ಚಿಲ್ ಸಹಕರಿಸಿದ್ದಾರೆ. ಸಂಬಂಧಪಟ್ಟವರು ಹಾಗೂ ಅಧಿಕಾರಿಗಳು ಶ್ರೀ ಸಾಯಿ ಸೇವಾಶ್ರಮ ಸಂಪರ್ಕಿಸುವಂತೆ ವಿಶು ಶೆಟ್ಟಿ ವಿನಂತಿಸಿದ್ದಾರೆ.


 ಸಮಾಜದಲ್ಲಿ ಬಹಳಷ್ಟು ಮಾತೆಯರು ಮಕ್ಕಳ ಮಾನಸಿಕ ತೊಂದರೆಯಿಂದ ಅಸಹಾಯಕರಾಗಿ ಬದುಕಲಾರದ ಬದುಕಿನಲ್ಲಿ ಬದುಕುತ್ತಿದ್ದಾರೆ. ಅದರಲ್ಲಿ‌ಬಹಳಷ್ಟು ಜನ ಆರ್ಥಿಕವಾಗಿಯೂ ಕಷ್ಟದಲ್ಲಿದ್ದು , ಜನ ಬಲವೂ ಇಲ್ಲದೇ ಸಾವಿಗೆ ಶರಣಾಗುವ ಹಂತದಲ್ಲಿದ್ದಾರೆ. ಈ ಬಗ್ಗೆ ಹಲವು ಬಾರಿ ಸರಕಾರ ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಸ್ಪಂದನೆ ಇಲ್ಲ. ಸಂಬಂಧಪಟ್ಟ ಅಧಿಕಾರಿಗಳು ಸ್ವಲ್ಪ ಯೋಚಿಸಿ !

ವಿಶುಶೆಟ್ಟಿ ಅಂಬಲಪಾಡಿ

Latest Indian news

Popular Stories