ಎರಡು ತಿಂಗಳೊಳಗೆ 3000 ಲೈನ್‌ಮೆನ್ಗಳ ನೇಮಕ: ಇಂಧನ ಸಚಿವ ಕೆ.ಜೆ ಜಾರ್ಜ್

ಉಡುಪಿ: ಮೆಸ್ಕಾಂ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರೊಂದಿಗೆ ಹಾಗೂ ಜನಪ್ರತಿನಿಧಿಗಳೊಂದಿಗೆ ಸಂಪರ್ಕದಲ್ಲಿ ಇದ್ದಲ್ಲಿ ಮಾತ್ರ ಸಾರ್ವಜನಿಕ ವಿದ್ಯುತ್ ಸಂಪರ್ಕದ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ. ರಾಜ್ಯದಲ್ಲಿ 6000 ಕ್ಕೂ ಹೆಚ್ಚು ಲೈನ್‌ಮೆನ್‌ಗಳ ಕೊರತೆ ಇದೆ. ಈ ಜಿಲ್ಲೆಯಲ್ಲಿಯೂ ಶೇ. 42 ಕ್ಕಿಂತ ಹೆಚ್ಚು ಕೊರತೆ ಇರುವುದು ಗಮನಕ್ಕೆ ಬಂದಿದೆ. ಮುಂದಿನ ಎರಡು ತಿಂಗಳೊಳಗಾಗಿ 3000 ಲೈನ್‌ಮೆನ್ ಹುದ್ದೆಗಳನ್ನು ತುಂಬಲಾಗುವುದು ಆಗ ಜಿಲ್ಲೆಗೆ ಅಗತ್ಯವಿರುವ ಲೈನ್ ಮ್ಯಾನ್‌ಗಳನ್ನು ನೀಡಲಾಗುವುದು ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ಹೇಳಿದರು.

ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಮೆಸ್ಕಾಂ ಹಾಗೂ ಕೆ.ಪಿ.ಸಿ.ಟಿ.ಎಲ್ ನ ಪ್ರಗತಿ ಪರೀಶಿಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು, ಸಾರ್ವಜನಿಕರು ಸೇರಿದಂತೆ ರೈತರುಗಳಿಗೆ ವಿದ್ಯುತ್ ನಿರಂತರ ಸರಬರಾಜಿನಲ್ಲಿ ವ್ಯತ್ಯಯ ವಾದಾಗ ಮೆಸ್ಕಾಂ ಇಲಾಖೆಯನ್ನು ಸಂಪರ್ಕಿಸುತ್ತಾರೆ. ಇಲಾಖೆ ಶೀಘ್ರದಲ್ಲಿಯೇ ಅವರಿಗೆ ಸಮಸ್ಯೆ ಪರಿಹಾರವಾಗದೇ ಇದ್ದಾಗ ಜನಪ್ರತಿನಿಧಿಗಳನ್ನು ಸಂಪರ್ಕಿಸಿ, ದುರಸ್ಥಿ ಕಾರ್ಯಗಳನ್ನು ಮಾಡಿಕೊಳ್ಳಲು ಮುಂದಾಗುತ್ತಾರೆ. ಅಧಿಕಾರಿಗಳು ಈ ಇಬ್ಬರ ಜೊತೆ ನೇರವಾಗಿ ಸಂಪರ್ಕದಲ್ಲಿದ್ದಾಗ ಮಾತ್ರ ಸಾರ್ವಜನಿಕ ವಿದ್ಯುಚ್ಛಕ್ತಿ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ. ಇದಕ್ಕೆ ಅಧಿಕಾರಿಗಳು ಹೆಚ್ಚು ಒತ್ತು ನೀಡಬೇಕು ಎಂದರು.

ರಾಜ್ಯದಲ್ಲಿ ಪ್ರಸ್ತುತ ವಿದ್ಯುತ್ ಕೊರತೆ ಕಂಡುಬರುತ್ತಿಲ್ಲ. ವಾಣಿಜ್ಯ ಸೇರಿದಂತೆ ಕೈಗಾರಿಕಾ ಪ್ರದೇಶಗಳಿಗೆ ನಿರಂತರವಾಗಿ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ದುರಸ್ಥಿ ಸೇರಿದಂತೆ ನಿರ್ವಹಣಾ ಕಾರ್ಯಗಳನ್ನು ಕೈಗೊಂಡಾಗ ಮಾತ್ರ ವಿದ್ಯುತ್ ಸಂಪರ್ಕಗಳನ್ನು ಕಡಿತಗೊಳಿಸಲಾಗುತ್ತಿದೆ. ಆದರೆ ಅದನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ ಎಂದರು.

ರಾಜ್ಯದಲ್ಲಿ ಉತ್ಪಾದನೆಯಲ್ಲಿ ಕೊರತೆ ಇರುವ ಹಿನ್ನಲೆ ವಿದ್ಯುತ್‌ಚ್ಛಕ್ತಿಯನ್ನು ಪಂಜಾಬ್ ಹಾಗೂ ಉತ್ತರ ಪ್ರದೇಶಗಳಿಂದ ಒಪ್ಪಂದ ಮಾಡಿಕೊಂಡು ಹಾಗೂ ಖಾಸಗಿ ವಿದ್ಯುತ್ ಕಂಪನಿಗಳಿಂದ ಪಡೆದುಕೊಳ್ಳಲಾಗುತ್ತಿದೆ. ಬೆಂಗಳೂರಿನ ಡೀಸೆಲ್ ಚಾಲಿತ ವಿದ್ಯುಚ್ಛಕ್ತಿ ಉತ್ಪಾದನಾ ಕೇಂದ್ರವನ್ನು ಗ್ಯಾಸ್ ಅನ್ನು ಬಳಕೆ ಮಾಡಿಕೊಂಡು ಉತ್ಪಾದಿಸುವ ರೀತಿಯಲ್ಲಿ ನವ ನಿರ್ಮಾಣವನ್ನು ಮಾಡಲಾಗುತ್ತಿದೆ ಹಾಗೂ ಸೌರ ವಿದ್ಯುತ್ ಉತ್ಪಾದನೆಗೂ ಸಹ ಉತ್ತೇಜನ ನೀಡಲಾಗುತ್ತಿದೆ ಎಂದ ಅವರು, ಮಂಗಳೂರಿನಲ್ಲಿ ಗ್ರೀನ್ ಹೈಡ್ರೋಜನ್‌ನಿಂದಲೂ ಉತ್ಪಾದನೆಗೆ ಚಿಂತಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಟ್ರಾನ್ಸ್ ಫಾರ್ಮ್‌ಗಳು ಹಾಳಾದಾಗ ಅವುಗಳನ್ನು 72 ಗಂಟೆಯ ಒಳಗಾಗಿ ಬದಲಾವಣೆಗೆ ಕ್ರಮಕೈಗೊಳ್ಳಬೇಕು ಎಂದು ಈಗಾಗಲೇ ಸೂಚನೆ ನೀಡಲಾಗಿದೆ. ಇದಕ್ಕೆ ಅಗತ್ಯವಿರುವ ಟ್ರಾನ್ಸ್‌ಫಾರ್ಮ್‌ಗಳ ಬ್ಯಾಂಕ್‌ಗಳನ್ನು ಸಹ ದಾಸ್ತಾನು ಇಟ್ಟುಕೊಳ್ಳಲು ತಿಳಿಸಲಾಗಿದೆ. ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಲ್ಲಿ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದರು.
ವಾರಾಹಿ ಯೋಜನೆಯ ನೀರನ್ನು ನೀರಾವರಿಗೆ ಹಾಗೂ ವಿದ್ಯುತ್ ಉತ್ಪಾದನೆಗೆ ಕೈಗೊಳ್ಳಲಾಗುತ್ತಿದೆ. ಇದರ ಜೊತೆಯಲ್ಲಿ ಈ ಯೋಜನೆಗಳಿಗೆ ತೊಂದರೆ ಆಗದಂತೆ 0.3 ಟಿ.ಎಂ.ಸಿ ನೀರನ್ನು ಶೇಖರಿಸುವ ಬ್ಯಾರೇಜ್ ಅನ್ನು ನಿರ್ಮಿಸಿ, ಅದರಿಂದ ವಿದ್ಯುತ್‌ಚ್ಛಕ್ತಿ ತಯಾರಿಸಿ, ವಿದ್ಯುತ್‌ಚ್ಛಕ್ತಿಗೆ ಬಳಕೆಯಾದ ನೀರನ್ನು ಪಂಪ್ ಮೂಲಕ ಮೇಲೆತ್ತಿ ಮರು ಬಳಕೆ ಮಾಡಿಕೊಳ್ಳುವುದರೊಂದಿಗೆ ನಿರಂತರವಾಗಿ ವಿದ್ಯುಚ್ಛಕ್ತಿ ತಯಾರಿಕೆಗೆ ಯೋಜನೆ ರೂಪಿಸಲಾಗುತ್ತಿದೆ ಎಂದರು.

ಮಳೆಗಾಲಕ್ಕೂ ಮುನ್ನವೇ ವಿದ್ಯುತ್‌ಚ್ಛಕ್ತಿ ಸರಬರಾಜಿಗೆ ತೊಂದರೆ ಉಂಟು ಮಾಡುವಂತಹ ಮರಗಳನ್ನು ತೆರವುಗೊಳಿಸಲು ಜಿಲ್ಲಾಡಳಿತ ಅರಣ್ಯ ಇಲಾಖೆ, ಹಾಗೂ ಮೆಸ್ಕಾಂ ಇಲಾಖೆಯ ಅಧಿಕಾರಿಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಿ, ತೆರವುಗೊಳಿಸಲು ಮುಂದಾಗಬೇಕು ಎಂದರು. ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ಪರೀಕ್ಷಾ ಸಮಯದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕು. ಸಬ್ ಸ್ಟೇಷನ್‌ಗಳಿಗೆ ವಾರ್ಷಿಕ ನಿರ್ವಹಣೆಗೆ 6 ಕೋಟಿ ಅನುದಾನ ಬಿಡುಗಡೆ ಮಾಡಬೇಕು ಹಾಗೂ ಹೊಸದಾಗಿ ಮನೆ ನಿರ್ಮಾಣ ಮಾಡಿದಾಗ ಕಡ್ಡಾಯವಾಗಿ ಸೋಲಾರ್ ಹೀಟರ್‌ಗಳನ್ನು ಅಳವಡಿಸಲು ಸೂಚಿಸುವುದು ಒಳಿತು ಎಂದು ಸಚಿವರ ಗಮನಕ್ಕೆ ತಂದರು.
ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಕುಂದಾಪುರ ತಾಲೂಕಿನ ಹಾಲಾಡಿ ಭಾಗದಲ್ಲಿ ಲೋ ವೋಲ್ಟೇಜ್‌ನ ಸಮಸ್ಯೆ ಇದೆ. ಇದನ್ನು ಸರಿಪಡಿಸಬೇಕು. ಟ್ರಾನ್ಸ್‌ಫಾರ್ಮ್‌ಗಳು ಹಾಳಾದಾಗ ಒಂದು ತಿಂಗಳಾದರೂ ಅವುಗಳನ್ನು ಸರಿಪಡಿಸಲು ಅಧಿಕಾರಿಗಳು ಮುಂದಾಗುತ್ತಿಲ್ಲ. ಹಾಗೂ ಹೊಸದಾಗಿ ಸಬ್ ಸ್ಟೇಷನ್ ಗಳನ್ನು ತೆರೆಯಬೇಕೆಂದು ಸಚಿವರ ಗಮನಕ್ಕೆ ತಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಕೆ.ಪಿ.ಟಿ.ಸಿಎಲ್ ನ ವ್ಯಪಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ, ಮೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕಿ ಪದ್ಮಾವತಿ, ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು

Latest Indian news

Popular Stories