ತೈಲ ಬೆಲೆ ಏರಿಕೆ; ಬಿಜೆಪಿಯ ಪ್ರಹಸನ; ಕಾಂಗ್ರೆಸ್ ಸರಕಾರದ ಉದ್ಧಟತನ | ಜನ ಸಾಮಾನ್ಯರಿಗೆ ಕೇಂದ್ರ ಮಾಡಿದ ಗಾಯದ ಮೇಲೆ ರಾಜ್ಯ ಸರ್ಕಾರದ ಬರೆ!

ರಾಜ್ಯದಲ್ಲಿ ಏರಿಕೆಯಾಗಿರುವ ತೈಲ ಬೆಲೆಯಿಂದಾಗಿ ಜನ ಸಾಮಾನ್ಯರಿಗೆ ಕೇಂದ್ರ ಸರಕಾರ ಮಾಡಿದ ಗಾಯದ ಮೇಲೆ ರಾಜ್ಯ ಸರ್ಕಾರ ಬರೆ ಎಳೆದಂತಾಗಿದೆ. ಈಗಾಗಲೇ ಕೇಂದ್ರ ಸರ್ಕಾರದ ತಲೆ ಬುಡ ಇಲ್ಲದ ನೀತಿಯಿಂದ ಪೆಟ್ರೋಲ್ ಬೆಲೆ ಶತಕ ಬರಿಸಿದ್ದರೆ ಡಿಸೇಲ್ ಬೆಲೆಯೂ ನೂರರ ಆಸುಪಾಸು ನೇತಾಡುತ್ತಿದೆ. ಈತನ್ಮಧ್ಯೆ ಕೇಂದ್ರ ಸರ್ಕಾರದ ತೈಲ ಬೆಲೆ ಏರಿಕೆಯ ವಿರುದ್ಧ ಮಾತನಾಡಿ ಗದ್ದುಗೆ ಏರಿದ್ದ ರಾಜ್ಯ ಕಾಂಗ್ರೆಸ್ ಸರಕಾರ ಏಕಾಏಕಿ ತೆರಿಗೆ ಹೆಚ್ಚಿಸಿ ಮತ್ತಷ್ಟು ದುಬಾರಿಗೊಳಿಸಿ ಉದ್ಧಟತನ ಮೆರೆದಿದೆ.

ಇದೆಲ್ಲದೆ ನಡುವೆ ತಮ್ಮದೇ ಕೇಂದ್ರ ಸರಕಾರ ಬೆಲೆ ಏರಿಸಿದಾಗ ಬಿಲ ಸೇರಿದ್ದ ರಾಜ್ಯ ಬಿಜೆಪಿ ನಾಯಕರು, ಕಾರ್ಯಕರ್ತರು ಇದೀಗ ತಕತಕ ಕುಣಿದು ಪ್ರತಿಭಟನೆಯ ಪ್ರಹಸನ ನಡೆಸುತ್ತಿದ್ದಾರೆ. ಇವರ ರಾಜಕೀಯ ಲಾಭದ ಹೊರತು ಎರಡು ಪಕ್ಷಗಳಿಗೆ ಜನರ ನೋವು ಮಾತ್ರ ಅರ್ಥವಾಗುತ್ತಿಲ್ಲ ಎಂಬುದು ವಾಸ್ತವ.

ಕೇಂದ್ರ ಸರ್ಕಾರ ರಾಜ್ಯದ ತೆರಿಗೆ ಪಾಲು ಸರಿಯಾಗಿ ನೀಡದ ಕಾರಣ ತೈಲ ಬೆಲೆಯ ತೆರಿಗೆ ಹೆಚ್ಚಿಸಬೇಕಾಯಿತು ಎಂಬ ಸಾಬೂತು ನೀಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜನರ ಮೇಲೆ ಹೊರೆ ಹಾಕಿ ಜಾರಿಕೊಳ್ಳುವ ಪ್ರಯತ್ನ ಮಾಡಿದ್ದು ಇದನ್ನು ಖಂಡಿತ ಒಪ್ಪಲು ಸಾಧ್ಯವಿಲ್ಲ. ಇನ್ನು ಬಿಜೆಪಿ ಬೀದಿಯಲ್ಲಿ ತಕಾತಕ ಕುಣಿಯುತ್ತ ತೈಲ ಬೆಲೆಯ ವಿರುದ್ಧ ಮಾತನಾಡುತ್ತಿರುವುದೇ ಹಾಸ್ಯಾಸ್ಪದ. ಕೇಂದ್ರ ಬಿಜೆಪಿ ಸರಕಾರ ಮನಸ್ಸಿಗೆ ಬಂದಂತೆ ಪೆಟ್ರೋಲ್, ಡಿಸೇಲ್, ಗ್ಯಾಸ್ ಬೆಲೆ ಏರಿಸಿದಾಗ ಬಾಯಿಗೆ ಬೀಗ ಹಾಕಿ ಕುಳಿತಿದ್ದ ಬಿಜೆಪಿ ನಾಯಕರು ಇದೀಗ ಬೀದಿಯಲ್ಲಿ ಭರತ ನಾಟ್ಯ ಮಾಡುತ್ತಿರುವುದು ಕೇವಲ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ವಿನ್ಹಾ ಜನ ಸಾಮಾನ್ಯರ ಕಾಳಜಿಗಾಗಿ ಅಲ್ಲ ಎಂಬುವುದು ಜಗಜ್ಜಾಹಿರಾಗಿದೆ.

NDA ನೇತೃತ್ವದ ಕೇಂದ್ರ ಸರ್ಕಾರ ಮತ್ತು ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ತಮ್ಮ ತಪ್ಪನ್ನು ಒಪ್ಪಿ ಜನ ಸಾಮಾನ್ಯರ ಮೇಲೆ ವಿಧಿಸಿರುವ ವಿಪರೀತ ತೆರಿಗೆಯನ್ನು ಹಿಂಪಡೆದು ಜನ ಪರ ಆಡಳಿತಕ್ಕೆ ನಾಂದಿ ಹಾಡಿ ಅದು ಬಿಟ್ಟು ನಿಮ್ಮ ಉದ್ಧಟತನ, ಪ್ರಹಸನ ಜನರಿಗೆ ಅರ್ಥವಾಗಿದೆ ಎಂಬುವುದು ವಾಸ್ತವಿಕ!

Latest Indian news

Popular Stories