ಸಾವಿರಾರು ವಾಹನ ಸಂಚರಿಸುವ ಸಂತೆಕಟ್ಟೆ-ಕೆಮ್ಮಣ್ಣು ಮುಖ್ಯ ರಸ್ತೆ ಹದೆಗೆಡುತ್ತಿದೆ; “ಡಾಂಬರೀಕರಣ” ಮಾಡದಿದ್ದರೆ ಮಳೆಗಾಲದಲ್ಲಿ ಸಮಸ್ಯೆ “ಗ್ಯಾರಂಟಿ” – ಶಾಸಕರೇ ಸ್ವಲ್ಪ ಇತ್ತ ಗಮನಿಸಿ!

ಉಡುಪಿ ( THG ವಿಶೇಷ ವರದಿ) : ಸಂತೆಕಟ್ಟೆ-ಕೆಮ್ಮಣ್ಣು ಜಿಲ್ಲಾ ಮುಖ್ಯ ರಸ್ತೆಯು ಹದೆಗೆಡುತ್ತಿದ್ದು ನೇಜಾರಿನಲ್ಲಿ ಹಲವು ಕಡೆ ರಸ್ತೆಯಲ್ಲಿ ಗುಂಡಿಗಳು ಕಾಣಿಸಿಕೊಂಡಿದೆ. ಈ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು ತುರ್ತು ಡಾಂಬರೀಕರಣದ ಅವಶ್ಯಕತೆ ಇದೆ.

ಈ ಮುಂಚೆ ಆಳವಾದ ಗುಂಡಿ ಬಿದ್ದ ಕಡೆಗಳಲ್ಲಿ ತೇಪೆ ಹಾಕಿ ಮುಚ್ಚಲಾಗಿತ್ತು. ಇದೀಗ ಮತ್ತೆ ತೇಪೆ ಹಾಕಿದ ಸ್ಥಳಗಳಲ್ಲಿ ಡಾಂಬರು ಕಿತ್ತುಕೊಂಡು ಹೋಗಿದ್ದು ಭಾರೀ ಗಾತ್ರ ಹೊಂಡಗಳಾಗುವ ಸಾಧ್ಯತೆ ಇದೆ. ನೇಜಾರ್ ಫಿಶ್’ನೆಟ್ ಸಮೀಪ ರಸ್ತೆಯು ತೀರಾ ಹದೆಗೆಡುತ್ತಿದ್ದು ಮಳೆಗಾಲದಲ್ಲಿ ಮತ್ತಷ್ಟು ಸಮಸ್ಯೆ ಸೃಷ್ಟಿಯಾಗಲಿದೆ. ಹೊಂಡಗಳಲ್ಲಿ ನೀರು ನಿಂತು ಗೋಚರಿಸದೆ ಮುಖ್ಯವಾಗಿ ದ್ವಿಚಕ್ರ ವಾಹನಗಳು ಅಪಘಾತಕ್ಕೀಡಾಗುವ ಸಾಧ್ಯತೆ ಹೆಚ್ಚಿದೆ.

ಕೆಮ್ಮಣ್ಣು ಚರ್ಚಿನ ಮುಂಭಾಗದಲ್ಲಿ ದೊಡ್ಡ ಗಾತ್ರದ ಹೊಂಡಗಳು ಕಾಣಿಸಿಕೊಂಡಿದ್ದರೆ, ಕಾರ್ಮೆಲ್ ಶಾಲೆಯ ಎದುರುಗಡೆಯ ರಸ್ತೆಯಲ್ಲಿ ಹೊಂಡ ಬಿದ್ದು ಡಾಂಬರ್ ಕಿತ್ತು ಬರುತ್ತಿದೆ. ನೀರಿನ ಪೈಪ್ ಅಳವಡಿಸಲು ಹಲವು ಕಡೆಗಳಲ್ಲಿ ರಸ್ತೆ ಅಗೆಯಲಾಗಿದೆ‌. ನಂತರ ಸಿಮೆಂಟ್ ಮುಖಾಂತರ ಮುಚ್ಚಿದ್ದರೂ ಅದು ಸರಿಯಾಗಿ ಜೋಡಣೆಯಾಗದ ಪರಿಣಾಮ ಸುಗಮ ಸಂಚಾರಕ್ಕೆ ಆಡಚಣೆ ಉಂಟಾಗುತ್ತಿದೆ‌.

1001127729 Udupi, Civic issues

ಇನ್ನು ಈ ರಸ್ತೆಯು ಜಿಲ್ಲೆಯ ನಾಲ್ಕು ಪ್ರಮುಖ ಪ್ರವಾಸಿ ತಾಣಗಳಾದ ತಿಮ್ಮಣ್ಣು ಕುದ್ರು ತೂಗು ಸೇತುವೆ, ಹೂಡೆ ಬೀಚ್, ಪೆರ್ಲಕಡಿ ಲಾಂಗ್ ಬೀಚ್ ಮತ್ತು ಡೆಲ್ಟಾ ಬೀಚ್’ಗೆ ಪ್ರಮುಖ ಸಂಪರ್ಕ ಸೇತುವಾಗಿದ್ದು ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ‌. ಅದರೊಂದಿಗೆ ರಸ್ತೆಯ ಇಕ್ಕೆಲದ ಊರುಗಳಲ್ಲಿ ದೊಡ್ಡ ಮಟ್ಟದಲ್ಲಿ ಜನ ಸಾಂದ್ರತೆ ಇದ್ದು ವಾಹನ ಸಂಚಾರ ಕೂಡ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಅತೀ ಶೀಘ್ರದಲ್ಲಿ ಈ ರಸ್ತೆಯ “ಫ್ಲೆವರ್ ಫಿನಿಶ್ ಡಾಂಬರೀಕರಣ” ಮಾಡಬೇಕಾಗಿದೆ.

1001127730 Udupi, Civic issues

ಮಾನ್ಸೂನ್ ಮಾರುತಗಳು ಕೇರಳ ಪ್ರವೇಶಿಸಿದ ಕೂಡಲೇ ವಾಡಿಕೆಯಂತೆ ಕರಾವಳಿ ಕರ್ನಾಟಕದಲ್ಲಿ ಭಾರೀ ಮಳೆಯಾಗುವುದು ಸರ್ವೆ ಸಾಮಾನ್ಯ. ವಿಪರೀತ ಮಳೆಯಾದರೆ ರಸ್ತೆಯಲ್ಲಿ ಮತ್ತಷ್ಟು ಗುಂಡಿಗಳು ಬಿದ್ದು ಸಮಸ್ಯೆ ಉಲ್ಬಣವಾಗುವ ಸಾಧ್ಯತೆ ಹೆಚ್ಚಿರುವುದರಿಂದ ಈ ಕುರಿತು ಉಡುಪಿ ಶಾಸಕರು, ಜಿಲ್ಲಾಡಳಿತ, ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ತುರ್ತು ನಿಗಾವಹಿಸಿ ಕಾಮಗಾರಿ ನಡೆಸಲು ಆಸಕ್ತಿ ತೋರಬೇಕೆಂಬುವುದು ಸಾರ್ವಜನಿಕರ ಆಗ್ರಹ.

Latest Indian news

Popular Stories