ಶಿರ್ವ: ಕಟ್ಟಿಂಗೇರಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರ

“ಶಿರ್ವ: ಬೆಳ್ಳೆ ಗ್ರಾ.ಪಂ. ವ್ಯಾಪ್ತಿಯ ಕಟ್ಟಿಂಗೇರಿ ಗ್ರಾಮದ ರಸ್ತೆ, ನೀರು ಸರಬರಾಜು, ದಾರಿದೀಪದ ಅವ್ಯವಸ್ಥೆ, ಸ್ಥಗಿತ ಗೊಂಡ ಬಸ್ ಸಂಚಾರ ಸಹಿತ ಹಲವು ಸಮಸ್ಯೆಗಳಿದ್ದು, ಇದಕ್ಕೆ ಪರಿಹಾರ ಕಂಡುಕೊಳ್ಳುವವರೆಗೆ ಮುಂಬರುವ ಲೋಕ ಸಭಾ ಚುನಾವಣೆಯಲ್ಲಿ ಭಾಗವಹಿಸದೆ ಮತದಾನ ಬಹಿಷ್ಕರಿಸುವ ನಿರ್ಧಾರವನ್ನು ಗ್ರಾಮಸ್ಥರು ತೆಗೆದುಕೊಂಡಿದ್ದಾರೆ.

ಅಭಿವೃದ್ಧಿಯಲ್ಲಿ ಕಟ್ಟಿಂಗೇರಿ ಗ್ರಾಮವನ್ನು ಕಡೆಗಣಿಸಿದ್ದಕ್ಕಾಗಿ ಕಟ್ಟಿಂಗೇರಿ ವಾರ್ಡ್ ಒಂದರ ಮತಗಟ್ಟೆ 104ರ ಮತದಾರರು ಇಂದು ಕಟ್ಟಿಂಗೇರಿ ಅಕ್ಷರ ಕರಾವಳಿ ಅಂಗನವಾಡಿ ಬಳಿ ಕರೆದ ಚುನಾವಣೆ ಬಹಿಷ್ಕಾರ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಯಿತು.

ಕಟ್ಟಿಂಗೇರಿ ಗ್ರಾಮದ 2 ಕಿ.ಮಿ. ಉದ್ದದ ಅಕ್ಷರ ಕರಾವಳಿ ರಸ್ತೆಯು ತೀರಾ ದುಸ್ಥಿತಿಯಲ್ಲಿದ್ದು ಸುಮಾರು 10 ವರ್ಷಗಳಿಂದ ಆಯ್ಕೆಯಾದ ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಸ್ಪಂದನೆ ಸಿಗಲಿಲ್ಲ. ಅದರಲ್ಲಿರುವ 2 ಸೇತುವೆಗಳ ದುಸ್ಥಿತಿಯಿಂದ ಈ ಮಾರ್ಗದಲ್ಲಿ ಸಂಚರಿಸುವ ಬಸ್‌ಗಳನ್ನು ಕಳೆದ 4 ವರ್ಷಗಳಿಂದ ಸ್ಥಗಿತಗೊಳಿಸಲಾಗಿದೆ. ಇದರಿಂದ ಗ್ರಾಮಸ್ಥರು ಪರದಾಡು ವಂತಾಗಿದೆ ಎಂದು ಗ್ರಾಮಸ್ಥರು ಸಭೆಯಲ್ಲಿ ದೂರಿದರು.

ಒಂದು ಕಿ.ಮೀ. ಉದ್ದದ ಕುಮೆರೊಟ್ಟು ರಸ್ತೆ ಹಾಗೂ ನೀರು, ದಾರಿದೀಪ ಮೊದಲಾದ ಸಮಸ್ಯೆಗಳು ಈ ಗ್ರಾಮಸ್ಥರನ್ನು ನಿರಂತರವಾಗಿ ಕಾಡುತ್ತಿದೆ. ಇದೇ ಕಾರಣಕ್ಕಾಗಿ ಮತದಾನ ಬಹಿಷ್ಕಾರಕ್ಕೆ ನಿರ್ಧರಿಸಲಾಗಿದೆ. ಈ ಬಗ್ಗೆ ಜಿಲ್ಲಾಡಳಿತ, ಜಿಲ್ಲಾ ಚುನಾವಣಾಧಿಕಾರಿ, ತಾಲೂಕು ಚುನಾವಣಾಧಿಕಾರಿ ಮತ್ತು ಸಹಾಯಕ ಚುನಾವಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಈವರೆಗೆ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ಅವರು ಆರೋಪಿಸಿದರು.

ಗ್ರಾಮದ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು, ಬಸ್ ಸಂಚಾರ ಆರಂಭಿಸುವವರೆಗೆ ಕಟ್ಟಿಂಗೇರಿ ವಾರ್ಡ್ ಒಂದರ ಗ್ರಾಮಸ್ಥರು ಮುಂದಿನ ಯಾವುದೇ ಚುನಾವಣೆಯಲ್ಲಿ ಮತದಾನ ಮಾಡುವುದಿಲ್ಲ ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು

Latest Indian news

Popular Stories