ಇನ್ಮುಂದೆ ರಾತ್ರಿ 10 ಗಂಟೆಯಿಂದ ಮಣಿಪಾಲದಲ್ಲಿ ಹೊಟೇಲ್ ಬಾರ್ ಸೇರಿದಂತೆ ಅಂಗಡಿಗಳು ಬಂದ್: ಮಾದಕ ದ್ರವ್ಯದ ವಿರುದ್ಧ ಪೊಲೀಸರ ಕಾರ್ಯಾಚರಣೆ

ಉಡುಪಿ, ಮೇ 30: ಉಡುಪಿಯ ನಡುಬೀದಿಯಲ್ಲಿ ನಡೆದ ಗ್ಯಾಂಗ್ ವಾರ್ ಪ್ರಕರಣದ ಹಿನ್ನೆಲೆಯಲ್ಲಿ ಮಾದಕ ದ್ರವ್ಯದ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮಣಿಪಾಲದಲ್ಲಿ ರಾತ್ರಿ 10ಗಂಟೆಯಿಂದ ಹೊಟೇಲ್ ಬಾರ್ ಸೇರಿದಂತೆ ಎಲ್ಲ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡುವಂತೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್ ಸೂಚಿಸಿದ್ದಾರೆ.

ಕಳೆದ ಎರಡು ದಿನಗಳಿಂದ ಮಣಿಪಾಲದ ಬಾರ್, ಹೊಟೇಲ್, ಅಂಗಡಿ ಮಾಲಕರಿಗೆ ರಾತ್ರಿ 10ಗಂಟೆಯೊಳಗೆ ಅಂಗಡಿ ಬಂದ್ ಮಾಡುವಂತೆ ಪೊಲೀಸರು ಸೂಚನೆ ನೀಡುತ್ತಿದ್ದಾರೆ. ಬುಧವಾರ ರಾತ್ರಿ ಭಾಗಃಶ ಅಂಗಡಿ ಮುಗ್ಗಟ್ಟುಗಳು ಬಂದ್ ಮಾಡಿದ್ದವು. ಆದರೆ ಕೆಲವು ಬಾರ್‌ಗಳು ರಾತ್ರಿ 11ಗಂಟೆಯವರೆಗೂ ತೆರೆದಿರುವುದು ಕಂಡುಬಂದವು.

‘ಮಣಿಪಾಲದ ಎಲ್ಲ ಅಂಗಡಿಮುಗ್ಗಟ್ಟುಗಳನ್ನು ಬಂದ್ ಮಾಡಿಸಿ ಡ್ರಗ್ಸ್ ಗಾಂಜಾ ಸೇರಿದಂತೆ ಮಾದಕ ದ್ರವ್ಯ ವಿರುದ್ಧ ಕಾರ್ಯಾಚರಣೆ ನಡೆಸಲಾಗು ವುದು. ಮಣಿಪಾಲದಲ್ಲಿ ಈ ರೀತಿ ಕಾರ್ಯಾಚರಣೆ ಮಾಡಿದರೆ ಡ್ರಗ್ಸ್ ದಂಧೆಯ ಮೂಲಗಳ ಬಗ್ಗೆ ಮಾಹಿತಿ ಸಿಗಲಿದೆ. ಅದರಂತೆ ಮುಂದೆ ಕಟ್ಟುನಿಟ್ಟಿನ ಕ್ರಮ ಜರಗಿಸಲಾಗುವುದು ಎಂದು ಎಸ್ಪಿ ಡಾ.ಕೆ.ಅರುಣ್ ತಿಳಿಸಿದ್ದಾರೆ.

‘ಈಗಾಗಲೇ ಬಾರ್, ಹೊಟೇಲ್, ಅಂಗಡಿಗಳ ಮಾಲಕರನ್ನು ಸೂಚನೆ ನೀಡಲಾಗಿದೆ. ಬುಧವಾರ ರಾತ್ರಿ ಕೆಲವರು 10ಗಂಟೆಗೆ ಬಂದ್ ಮಾಡುವ ಬಗ್ಗೆ ಪೊಲೀಸರೊಂದಿಗೆ ವಾದ ಮಾಡಿದ್ದಾರೆಂಬ ಮಾಹಿತಿ ಸಿಕ್ಕಿದೆ. ಆದರೆ ಇಂದು ರಾತ್ರಿಯಿಂದ ಎಲ್ಲ ಬಂದ್ ಮಾಡಲಿದ್ದಾರೆ. ಸದ್ಯ ಮಣಿಪಾಲದಲ್ಲಿ ಮಾತ್ರ ಬಂದ್ ಇರುತ್ತದೆ. ಉಡುಪಿಯಲ್ಲಿ ಯಾವುದೇ ರೀತಿಯ ಬಂದ್ ಇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

Latest Indian news

Popular Stories