ಉಡುಪಿ: ಮೋಡ ಕವಿದ ವಾತಾವರಣ; ಮಳೆಗಾಗಿ ಕಾತರದಿಂದ ಕಾಯುತ್ತಿರುವ ಜನ!

ಉಡುಪಿ: ಹೌದು! ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುತ್ತಿದೆ. ಆದರೆ ಉಡುಪಿ ಜಿಲ್ಲೆಯ ಕರಾವಳಿ ಭಾಗದಲ್ಲಿ ಮಳೆಯ ವಾತಾವರಣ ಸೃಷ್ಟಿಯಾಗುತ್ತಿದ್ದರೂ ಸೂಕ್ತ ಮಳೆಯಾಗುತ್ತಿಲ್ಲ. ಪಕ್ಕದ ದಕ್ಷಿಣ ಕನ್ನಡ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಗುಡುಗು-ಮಿಂಚು ಸಹಿತ ಮಳೆಯ ವರದಿಯಾಗಿದೆ.

ಉಡುಪಿ ಜಿಲ್ಲೆಯ ಕುಂದಾಪುರ, ಕಾರ್ಕಳ, ಹೆಬ್ರಿ ತಾಲೂಕಿನಲ್ಲಿ ರವಿವಾರ ಮಳೆಯಾಗಿತ್ತು. ಉಡುಪಿ ತಾಲೂಕಿನಲ್ಲಿ ಮುಖ್ಯವಾಗಿ ಅರಬಿ ಸಮುದ್ರದ ತೀರಾ ಪ್ರದೇಶದಲ್ಲಿ ಮೋಡ ಕವಿದ ವಾತಾವರಣ ಇದ್ದು ತುಂತುರು ಮಳೆ ಕೆಲವು ಕ್ಷಣ ಬಂದಿದೆ. ಆದರೆ ಈ ಬೆಳವಣಿಗೆಯಿಂದ ತಾಪಮಾನ ಕಡಿಮೆಯಾಗಿಲ್ಲ. ಉಡುಪಿ ನಗರ ಪ್ರದೇಶಗಳಲ್ಲಿ ಬಜೆ ಡ್ಯಾಮಿನಲ್ಲಿ ನೀರು ಸಂಗ್ರಹ ಕಡಿಮೆಯಾದ ಕಾರಣ ಕುಡಿಯುವ ನೀರಿಗೂ ಸಮಸ್ಯೆಯಾಗಿದೆ. ಇದೀಗ ಉಡುಪಿಯ ಜನತೆ ಮಳೆಯ ಆಗಮನಕ್ಕೆ ಕಾತರದಿಂದ ಕಾಯುತ್ತಿದ್ದಾರೆ.

ಮೋಡ ಮಳೆಯ ನಿರೀಕ್ಷೆ ಹುಟ್ಟಿಸಿದರೂ ಮಳೆ ಮಾತ್ರ ಮರೀಚಿಕೆಯಾಗಿಯೇ ಉಳಿದಿದೆ. ಹವಾಮಾನ ಇಲಾಖೆಯ ವರದಿಯ ಪ್ರಕಾರ ಮೇ12 ನಂತರ ಮಳೆಯಾಗುವ ಸಾಧ್ಯತೆ ಹೆಚ್ಚಿದ್ದು ಪೂರಕವಾಗಿ ಮಳೆಯ ವಾತಾವರಣ ಸೃಷ್ಟಿಯಾಗುತ್ತಿದೆ. ಇನ್ನು ಮಳೆರಾಯ ಧರೆಗಿಳಿದು ಯಾವಾಗ ಬರಲಿದ್ದಾನೆ ಎಂಬುವುದು ಜನರ ಕಾತರವಾಗಿದೆ!

Latest Indian news

Popular Stories