ಉಡುಪಿ: ಮುದ್ರಕರ ಸಂಘದಿಂದ ಹಿರಿಯ ಕಾರ್ಮಿಕರಿಗೆ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ

ಉಡುಪಿ: ಉಡುಪಿ ಜಿಲ್ಲಾ ಮುದ್ರಣಾಲಯಗಳ ಮಾಲಕರ ಸಂಘ (ರಿ.) ವತಿಯಿಂದ ಹಿರಿಯ ಕಾರ್ಮಿಕರಿಗೆ ಸನ್ಮಾನ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವು ಜೂನ್ 23 ರಂದು ಬನ್ನಂಜೆಯ ಶ್ರೀನಾರಾಯಣಗುರು ಸಭಾಭವನದಲ್ಲಿ ನಡೆಯಿತು.

ಸಂಘದ ಜಿಲ್ಲಾಧ್ಯಕ್ಷರಾದ ಪ್ರಕಾಶ್ ಕೊಡವೂರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿದ್ದ ರೋಟರಿ ಮಾಜಿ ಜಿಲ್ಲಾ ಗವರ್ನರ್ ರೊ| ಬಿ. ರಾಜಾರಾಂ ಭಟ್ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ, ಪರಸ್ಪರ ಸಹಕಾರದೊಂದಿಗೆ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಮುದ್ರಕ ಬಾಂಧವರಿಗೆ ಉತ್ತಮ ಭವಿಷ್ಯವಿದೆ ಎನ್ನುತ್ತಾ ಮುದ್ರಕರ ಸಂಘದ ಚಟುವಟಿಕೆಗಳನ್ನು ಶ್ಲಾಘಿಸಿದರು.

ನಿವೃತ್ತ ಶಿಕ್ಷಕರು ಮತ್ತು ಕಲಾವಿದರಾದ ಶ್ರೀ ಎಂ.ಎಸ್ ಭಟ್ ಮಾತನಾಡಿ, ಮುದ್ರಣಾಲಯಗಳ ಹಿರಿಯ ಕಾರ್ಮಿಕರನ್ನು ಗೌರವಿಸುವ ಕಾರ್ಯ ಶ್ಲಾಘನೀಯವಾದುದು. ಪ್ರತಿಭೆಗಳಿಗೆ ನೀಡುವ ಪುರಸ್ಕಾರವು ವಿದ್ಯಾರ್ಥಿಗಳ ಸಾಧನೆಗೆ ನೀಡುವ ಗೌರವ, ಬೆಂಬಲ ಮತ್ತು ಪ್ರೇರಣೆಯಾಗಿರುತ್ತದೆ ಎಂದು ತಿಳಿಸಿದರು.

ಮುದ್ರಕರ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಬಿ.ಜಿ. ಸುಬ್ಬರಾವ್ ಮತ್ತು ಸಂಘಟನೆಯ ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ಪ್ರಕಾಶ್ ಕಲ್ಯಾಣಿ ಅವರು ಸಂದರ್ಭೋಚಿತವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಕಲ್ಯಾಣಿ ಪ್ರೆಸ್ ಪೆರ್ಡೂರು ಇಲ್ಲಿ ಸೇವೆ ಸಲ್ಲಿಸುತ್ತಿರುವ ಶ್ರೀ ಮಂಜುನಾಥ ನಾಯ್ಕ ಅವರನ್ನು ಮುದ್ರಣಾಲಯಗಳ ಹಿರಿಯ ಕಾರ್ಮಿಕರೆಂಬ ನೆಲೆಯಲ್ಲಿ ಸನ್ಮಾನಿಸಲಾಯಿತು. ಶ್ರೀ ಯತೀಶ್ಚಂದ್ರ ಅವರು ಸನ್ಮಾನ ಪತ್ರ ವಾಚಿಸಿದರು. ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಯಲ್ಲಿ ಶ್ರೇಷ್ಠ ಅಂಕಗಳೊಂದಿಗೆ ಉತ್ತೀರ್ಣರಾದ ಮುದ್ರಣಾಲಯದ ಮಾಲಕರ ಮಕ್ಕಳನ್ನು ಪುರಸ್ಕಾರ ನೀಡಿ ಗೌರವಿಸಲಾಯಿತು. ಶ್ರೀ ವಾಸುದೇವ ವರ್ಣ ಮತ್ತು ವಿನೋದ್ ರಾವ್ ವಿದ್ಯಾರ್ಥಿಗಳ ಪಟ್ಟಿಯನ್ನು ವಾಚಿಸಿದರು.

ವಿದ್ಯಾರ್ಥಿ ಸಂದೀಪ್ ಆರ್. ಪೈ ಅವರ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ರಾಜ್ಯ ಮುದ್ರಣಕಾರರ ಸಮನ್ವಯ ಸಮಿತಿಯ ಸಂಚಾಲಕರಾದ ಮಹೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯ ಸಹಸಂಚಾಲಕರಾದ ಅಶೋಕ್ ಶೆಟ್ಟಿ ಸ್ವಾಗತಿಸಿದರು.

ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ಜಿ.ಎಂ. ಶರೀಫ್, ಉಡುಪಿ ವಲಯಾಧ್ಯಕ್ಷರಾದ ಪ್ರಶಾಂತ್ ನಾಯ್ಕ್, ಕಾಪು ವಲಯಾಧ್ಯಕ್ಷರಾದ ಸುಧೀರ್ ಬಂಗೇರ, ಕುಂದಾಪುರ ವಲಯಾಧ್ಯಕ್ಷರಾದ ವಾಸುದೇವ ವರ್ಣ ಮತ್ತು ಕಾರ್ಕಳ ವಲಯಾಧ್ಯಕ್ಷರಾದ ಪ್ರವೀಣ್ ಶೆಣೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಾಜಿ ಅಧ್ಯಕ್ಷರಾದ ಶ್ರೀ ರಮೇಶ ತಿಂಗಳಾಯ ಕಾರ್ಯಕ್ರಮ ನಿರೂಪಿಸಿದರು. ಉಡುಪಿ ತಾಲೂಕು ಕಾರ್ಯದರ್ಶಿ ಶ್ರೀ ಶಿವಪ್ರಸಾದ್ ಶೆಟ್ಟಿ ಕೊನೆಯಲ್ಲಿ ಧನ್ಯವಾದವಿತ್ತರು.


Latest Indian news

Popular Stories