ಉಡುಪಿ:ಅಸಹಾಯಕ ಸ್ಥಿತಿಯಲ್ಲಿದ್ದ ಲೇಖಕನ ರಕ್ಷಣೆ

ಉಡುಪಿ, ಮೇ.18; ನಗರದಲ್ಲಿ ಅಸಹಾಯಕನಾಗಿ ದಯನೀಯ ಸ್ಥಿತಿಯಲ್ಲಿದ್ದ ವ್ಯಕ್ತಿಯ ರಕ್ಷಣೆಯು ಉಡುಪಿ ಜಿಲ್ಲಾ ನಾಗರಿಕ ಸಮಿತಿಯಿಂದ ಶನಿವಾರ ನಡೆದಿದೆ. ಬಳಿಕ ಕಾರ್ಕಳದ ಹೊಸಬೆಳಕು ಅನಾಥಾಶ್ರಮವು ನೆಲೆಯಿಲ್ಲದೆ ನಿರ್ಗತಿಕ ಸ್ಥಿತಿಯಲ್ಲಿದ್ದ ವ್ಯಕ್ತಿಗೆ ಪುರ್ನವಸತಿ ಕಲ್ಪಿಸಿ ಮಾನವೀಯತೆ ಮೆರೆದಿದೆ. ರಕ್ಷಿಸಲ್ಪಟ್ಟ ವ್ಯಕ್ತಿಯು ಸಾಹಿತಿ ಪ್ರಕಾಶ್ (61ವ) ಬೈಂದೂರು ಭಾಗದವರೆಂದು ತಿಳಿದುಬಂದಿದೆ.

ರಕ್ಷಿಸಲ್ಪಟ್ಟ ವ್ಯಕ್ತಿಯು ಲೇಖಕರು, ಅಂಕಣ ಬರಹಗಾರರಾಗಿದ್ದರು. ಅಕ್ಷರ ಮಾಧ್ಯಮದಲ್ಲಿ ಪತ್ರಕರ್ತರಾಗಿದ್ದವರು. ಕನ್ನಡ ನಾಡು ನುಡಿಗೆ, ಸೇವೆ ಸಲ್ಲಿಸಿದವರಾಗಿದ್ದರು. ಕೌಟುಂಬಿಕ ಜೀವನದಲ್ಲಿ ನೊಂದಿದ್ದರಿಂದ, ಕುಟುಂಬ ಸಂಪರ್ಕದಿಂದ ಹೊರಗುಳಿದು ಒಂಟಿಯಾಗಿದ್ದು ಜೀವನ ಸಾಗಿಸುತ್ತಿದ್ದರು. ಆಗಾಗ ಕಾಡುತ್ತಿದ್ದ ಅನಾರೋಗ್ಯ, ಏರಿಳಿತ ಕಾಣುವ ಮಧುಮೇಹ ಕಾಯಿಲೆಯಿಂದ ವೃತ್ತಿ ಬದುಕು ನಿರ್ವಹಿಸಲಾಗದೆ, ಆರ್ಥಿಕ ಸಂಕಷ್ಟದಿಂದ ಅವರಿಗೆ ಜೀವನ ನಿರ್ವಹಣೆ ಅಸಾಧ್ಯವಾಯಿತು. ಹೀಗೆಂದು ರಕ್ಷಿಸಲ್ಪಟ್ಟಿರುವ ವ್ಯಕ್ತಿಯು ನಾಗರಿಕ ಸಮಿತಿಯ ಕಛೇರಿಗೆ ಬಂದು, ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡುವರಲ್ಲಿ ಹೇಳಿಕೊಂಡು, ತಮಗೆ ನೆಲೆ ಕಲ್ಪಿಸುವಂತೆ ಪರಿ ಪರಿಯಾಗಿ ಕೇಳಿಕೊಂಡಿದ್ದರು. ತಕ್ಷಣ ನಿತ್ಯಾನಂದ ಒಳಕಾಡುವರು ಅಸಹಾಯಕ ಸಾಹಿತಿಯ ಅಳಲಿಗೆ ಸ್ಪಂದಿಸಿದರು. ಒಳಕಾಡುವರ ಫೋನ್ ಕರೆಗೆ ಸ್ಪಂದಿಸಿದ ಕಾರ್ಕಳದ ಹೊಸಬೆಳಕು ಆಶ್ರಮದ ಸಂಚಾಲಕಿ ತನುಲಾ ತರುಣ್ ಅವರು ದಯನೀಯ ಸ್ಥಿತಿಗೆ ತುತ್ತಾಗಿರುವ ಲೇಖಕರಿಗೆ ಆಶ್ರಮದಲ್ಲಿ ಆಶ್ರಯ ನೀಡಿದರು.

Latest Indian news

Popular Stories