Udupi | ಅಪ್ತಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ – ಆರೋಪಿಗೆ ಮೂರು ವರ್ಷ ಜೈಲು ಶಿಕ್ಷೆ

ಉಡುಪಿ, ಮೇ 13: ಅಪ್ತಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ನೀಡಿರುವ ಪ್ರಕರಣದ ಆರೋಪಿಗೆ ಉಡುಪಿ ಹೆಚ್ಚುವರಿ ಪೋಕ್ಸೊ ನ್ಯಾಯಾಲಯ ಇಂದು ಮೂರು ವರ್ಷಗಳ ಕಾಲ ಕಠಿಣ ಜೈಲುಶಿಕ್ಷೆ ವಿಧಿಸಿ ಆದೇಶ ನೀಡಿದೆ.

ಮುಹಮ್ಮದ್ ಇಸ್ಮಾಯಿಲ್(54) ಶಿಕ್ಷೆಗೆ ಗುರಿಯಾದ ಆರೋಪಿ. 2023ರ ಮಾರ್ಚ್ ತಿಂಗಳಲ್ಲಿ ನೊಂದ ಬಾಲಕಿ ತನ್ನ ತಂಗಿ, ತಮ್ಮನೊಂದಿಗೆ ಆರೋಪಿ ಮುಹಮ್ಮದ್ ಇಸ್ಮಾಯಿಲ್ ಮನೆಗೆ ಅರೆಬಿಕ್ ಕಲಿಯಲು ಹೋಗುತ್ತಿದ್ದರು. ಈ ವೇಳೆ ಆರೋಪಿಯು ನೊಂದ ಬಾಲಕಿಯುನ್ನು ಬೆಡ್‌ರೂಮಿಗೆ ಕರೆದು ಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡಿದ್ದನು. ಅಲ್ಲದೆ ತನ್ನ ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋ ತೋರಿಸಿ ಬೇರೆಯವರಿಗೆ ತಿಳಿಸದಂತೆ ಬೆದರಿಕೆ ಹಾಕಿದ್ದನು.

ಈ ವಿಚಾರವನ್ನು ನೊಂದ ಬಾಲಕಿ ತನ್ನ ಮನೆಯವರಿಗೆ ತಿಳಿಸಿದ್ದು, ಅದರಂತೆ ಆರೋಪಿ ವಿರುದ್ಧ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಆಗಿನ ಪೊಲೀಸ್ ನಿರೀಕ್ಷಕ ಜಯಾನಂದ ಕೆ. ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.

ಅಭಿಯೋಜನೆಯು ಒಟ್ಟು 20ಸಾಕ್ಷಿಗಳ ಪೈಕಿ 10 ಸಾಕ್ಷಿದ0ಆರರ ವಿಚಾರಣೆ ನಡೆಸಿದ್ದು, ಅದರಂತೆ ಆರೋಪಿ ವಿರುದ್ಧ ಆರೋಪ ಸಾಬೀತಾಗಿದೆ ಎಂದು ನ್ಯಾಯಾಧೀಶ ಶ್ರೀನಿವಾಸ ಸುವರ್ಣ ಮನಗಂಡರು. ನ್ಯಾಯಾಲಯವು ಆರೋಪಿಗೆ ಮೂರು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ಒಟ್ಟು 9ಸಾವಿರ ರೂ. ದಂಡ ವಿಧಿಸಿದೆ.

ದಂಡದ ಮೊತ್ತದಲ್ಲಿ 5ಸಾವಿರ ರೂ. ನೊಂದ ಬಾಲಕಿಗೆ ಪರಿಹಾರ ಮತ್ತು 4ಸಾವಿರ ರೂ. ಸರಕಾರಕ್ಕೆ ಪಾವತಿಸಬೇಕು. ಅಲ್ಲದೆ 25ಸಾವಿರ ರೂ. ನೊಂದ ಬಾಲಕಿಗೆ ಪರಿಹಾರವಾಗಿ ಸರಕಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ.ರಾಘವೇಂದ್ರ ವಾದ ಮಂಡಿಸಿದ್ದರು

Latest Indian news

Popular Stories