ಉಡುಪಿ: 2023 ರಲ್ಲಿ ತೀವ್ರ ಮಳೆ ಅಭಾವದ ಕಾರಣ ಈ ಬಾರಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಹೆಚ್ಚಿದೆ. ಜಿಲ್ಲೆಯ ಅಂತರ್ಜಲ ಮಟ್ಟದಲ್ಲೂ ತೀವ್ರ ಕುಸಿತ ಕಾಣುತ್ತಿದ್ದು ಬೇಕಾ ಬಿಟ್ಟಿ ನೀರು ಪೋಲು ಮಾಡುವುದನ್ನು ತಕ್ಷಣ ನಿಲ್ಲಿಸುವ ಅಗತ್ಯವಿದೆ.
ಜಿಲ್ಲೆಯಲ್ಲಿ ಜನವರಿ ಒಂದೇ ತಿಂಗಳ ಅವಧಿಯಲ್ಲಿ ಅಂತರ್ಜಲ 0.26 ಮೀಟರ್‌ಗಳಷ್ಟು ಕುಸಿದಿರುವ ಕುರಿತು ಆತಂಕ ವ್ಯಕ್ತವಾಗಿದೆ.
ಈಗಾಗಲೇ ನಗರ ಪ್ರದೇಶಗಳಲ್ಲಿ ಟ್ಯಾಂಕರ್ ಗಳಲ್ಲಿ ನೀರು ತುಂಬಿಸಿ ಪೂರೈಸಲಾಗುತ್ತಿದೆ. ಸಮಯೋಚಿತವಾಗಿ ನಿರ್ಧರಿಸಿ ನೀರು ಪೋಲು ಮಾಡದೆ ಬಳಸಿದ್ದಲ್ಲಿ ಸಮಸ್ಯೆಯಿಂದ ಪಾರಾಗಲು ಸಾಧ್ಯ.
ಮಾಹಿತಿಯ ಪ್ರಕಾರ, 2023ರ ಜನವರಿಯಲ್ಲಿ ಅಂತರ್ಜಲ ಮಟ್ಟ 7.79 ಮೀಟರ್ ಇತ್ತು.
ಫೆಬ್ರವರಿಯಲ್ಲಿ 8.35 ಮೀ.ಗೆ ಇಳಿದಿತ್ತು. ಮಾರ್ಚ್‌ನಲ್ಲಿ 9.07 ಮೀ., ಎಪ್ರಿಲ್‌ನಲ್ಲಿ 9.64 ಮೀ., ಮೇ ತಿಂಗಳಿನಲ್ಲಿ 10.2 ಮೀ.ಗೆ ಮುಟ್ಟಿತ್ತು.
ಜೂನ್‌ನಲ್ಲಿ ಬರಬೇಕಾದ ಮಳೆ ತಡವಾಯಿತು. ಜುಲೈ ತಿಂಗಳಿನಲ್ಲಿ ಮಳೆ ಬಂದದ್ದರಿಂದ 3.25 ಮೀ.ಗೆ ಏರಿಕೆಯಾಗಿತ್ತು. ಆಗಸ್ಟ್‌ನಲ್ಲಿ 4.83 ಮೀ.ಗೆ ಇಳಿದಿತ್ತು. ಸೆಪ್ಟಂಬರ್‌ನಲ್ಲಿ 4.93 ಮೀ.ಗೆ ಕುಸಿದಿತ್ತು. ಅಕ್ಟೋಬರ್‌ನಲ್ಲಿ 5.96 ಮೀ.ಗೆ ಇಳಿದು, ನವೆಂಬರ್‌ನಲ್ಲಿ 6.94 ಮೀ.ಗೆ ಕುಸಿದಿತ್ತು. ಡಿಸೆಂಬರ್‌ನಲ್ಲಿ 7.77 ಮೀಟರ್ ಕೆಳಗೆ ಹೋಗಿದೆ.
2024ರ ಜನವರಿಯಲ್ಲಿ 8.03 ಮೀಟರ್‌ಗೆ ಇಳಿದಿದ್ದು, ಕಳೆದ ವರ್ಷಕ್ಕಿಂತ ಕಡಿಮೆ ಪ್ರಮಾಣದಲ್ಲಿದೆ. ಜತೆಗೆ ಮಳೆಯೂ ಒಟ್ಟು ಶೇ. 25ರಷ್ಟು ಕಡಿಮೆಯಾಗಿತ್ತು.
2024ರ ಜನವರಿ ಅಂತ್ಯಕ್ಕೆ ಜಿಲ್ಲೆಯ ಅಂತರ್ಜಲ ಮಟ್ಟ 8.03 ಮೀ. ನಷ್ಟಿದ್ದರೆ, ಕಳೆದ ವರ್ಷ ಇದೇ ವೇಳೆಗೆ 7.79 ಮೀ. ಇತ್ತು. ಅಂದರೆ 0.23 ಮೀ.ನಷ್ಟು ಇಳಿದಿದೆ. ಮಳೆ ಬಾರದೆ ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಅಂತರ್ಜಲ ಇನ್ನಷ್ಟು ಕುಸಿಯುವ ಸಾಧ್ಯತೆಯಿದೆ. ಹಿಂದಿನ ಮಳೆಗಾಲ ದಲ್ಲೂ ಮಳೆ ಕೊರತೆ ಹಿನ್ನೆಲೆಯಲ್ಲಿ ಅಂತರ್ಜಲ ಮಟ್ಟ ನಿರೀಕ್ಷಿತ ಮಟ್ಟದಲ್ಲಿ ಏರಿಕೆಯಾಗಿಲ್ಲ ಎನ್ನುವುದು ಆತಂಕಕ್ಕೆ ಮತ್ತೊಂದು ಕಾರಣ.
“ಹೆಚ್ಚಿನ ಪ್ರಮಾಣದ ನೀರು ಬಳಕೆ ಯಾಗುವ ಶಾಲೆ, ಆಸ್ಪತ್ರೆ, ಸಭಾಭವನ, ಹೊಟೇಲ್‌ಗಳಿಗೆ ನೀರನ್ನು ಮಿತವಾಗಿ ಬಳಸುವಂತೆ ಜಿಲ್ಲಾ ಅಂತರ್ಜಲ ನಿರ್ದೇಶನಾಲಯದಿಂದ ಸುತ್ತೋಲೆ ನೀಡಲಾಗಿದೆ. ಎಲ್ಲಿಯೂ ನೀರು ಮಲಿನ, ಪೋಲಾಗದಂತೆ ಎಚ್ಚರ ವಹಿಸಬೇಕು. ಕೈ, ತಟ್ಟೆ ತೊಳೆದ ನೀರನ್ನು ತೋಟಕ್ಕೆ ಬಳಸುವ ಮೂಲಕ ಸದ್ಬಳಕೆ ಮಾಡಬೇಕು ಎಂದು ಸೂಚಿಸಿದೆ.”
“ಮಳೆ ಕೊರತೆ ಇರುವುದರಿಂದ ಅಂತರ್ಜಲ ಮಟ್ಟ ಕುಸಿದಿದೆ. ನೀರಿನ ಮೂಲಗಳ ಸಂರಕ್ಷಣೆಯ ಜತೆಗೆ ಮಳೆ ನೀರಿನ ಸದ್ಬಳಕೆಯೂ ಆಗಬೇಕು ಹಾಗೂ ಅಗತ್ಯವಾಗಿ ನೀರಿನ ಮಿತ ಬಳಕೆ ಮಾಡಬೇಕು.”
ಡಾ. ಎಂ. ದಿನಕರ ಶೆಟ್ಟಿ
ಹಿರಿಯ ಭೂ ವಿಜ್ಞಾನಿ, ಅಂತರ್ಜಲ ಮತ್ತು ಭೂ ವಿಜ್ಞಾನ ಇಲಾಖೆ, ಉಡುಪಿ
ಮಾಹಿತಿ ಕೃಪೆ: ಉ.ವಾ