ಉಡುಪಿ: ರಸ್ತೆ ಬದಿ ಬೆಳೆದ ಅಣಬೆಯನ್ನು ತಿಂದು ಮೂವರು ಅಸ್ವಸ್ಥ

ಉಡುಪಿ, ಜೂ.13: ರಸ್ತೆ ಬದಿ ಬೆಳೆದ ಅಣಬೆಯನ್ನು ತಿಂದು ಮೂವರು ಅಸ್ವಸ್ಥಗೊಂಡು ಉಡುಪಿ ಸರಕಾರಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮಲ್ಪೆ ಸಮೀಪದ ತೊಟ್ಟಂನಲ್ಲಿ ಬುಧವಾರ ರಾತ್ರಿ 8ಗಂಟೆಗೆ ನಡೆದಿದೆ. ಅಸ್ವಸ್ಥಗೊಂಡವರನ್ನು ತೊಟ್ಟಂನಲ್ಲಿ ವಾಸವಾಗಿರುವ ಗದಗ ಮೂಲದ ಅಣ್ಣಪ್ಪ(45), ಸುಜಾತ(25) ಹಾಗೂ ಸುಜಾತ ಅವರ ಮಗಳು ಸಂಗೀತ(7) ಎಂದು ಗುರುತಿಸಲಾಗಿದೆ. ಇವರಲ್ಲಿ ಅಣ್ಣಪ್ಪ ಮತ್ತು ಸುಜಾತ ಅಜ್ಜರಕಾಡು ಸರಕಾರಿ ಆಸ್ಪತ್ರೆಯಲ್ಲಿ ಹಾಗೂ ಸಂಗೀತ ಉಡುಪಿ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಸ್ತೆ ಬದಿಯ ಅಣಬೆ ತಿಂದು ಅಸ್ವಸ್ಥಗೊಂಡ ಮೂವರನ್ನು ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ ಆಪತ್ಭಾಂಧವ ಈಶ್ವರ್ ಮಲ್ಪೆ ಮತ್ತು ತಂಡ ದಿನಗೂಲಿ ಕೆಲಸ ಮಾಡಿಕೊಂಡಿರುವ ಇವರು, ರಾತ್ರಿ ವೇಳೆ ರಸ್ತೆ ಬದಿಯಲ್ಲಿದ್ದ ಅಣಬೆಯನ್ನು ತಿಂದಿದ್ದರು. ಇದರಿಂದ ಇವರು ತಡರಾತ್ರಿ ವೇಳೆ ತೀವ್ರ ಅಸ್ವಸ್ಥಗೊಂಡಿದ್ದು, ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಆಪತ್ಭಾಂಧವ ಈಶ್ವರ್ ಮಲ್ಪೆಮತ್ತು ತಂಡ ಆಂಬುಲೆನ್ಸ್ ಮೂಲಕ ಈ ಮೂವರನ್ನೂ ಉಡುಪಿಯ ಆಸ್ಪತ್ರೆಗೆ ದಾಖಲಿಸಿದೆ. ತಕ್ಷಣ ವೈದ್ಯಾಧಿಕಾರಿಗಳು ನೀಡಿದ ಚಿಕಿತ್ಸೆಯಿಂದ ಸದ್ಯ ಮೂವರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

Latest Indian news

Popular Stories