ಉಡುಪಿ: ಪ್ರಸವ ಪೂರ್ವ ಹಾಗೂ ಪ್ರಸವ ನಂತರದಲ್ಲಿ ತೆಗೆದುಕೊಳ್ಳಬೇಕಾದ ಆರೈಕೆ ಕ್ರಮಗಳ ಅರಿವು ಮೂಡಿಸುವುದು ಹಾಗೂ ಆರೋಗ್ಯ ಸೇವೆಗಳನ್ನು ನೀಡುವುದರೊಂದಿಗೆ ಜಿಲ್ಲೆಯಲ್ಲಿ ತಾಯಿ ಮತ್ತು ಶಿಶು ಮರಣಕ್ಕೆ ಸಂಬಂಧಿಸಿದ ಯಾವುದೇ ಪ್ರಕರಣಗಳು ಆಗದಂತೆ ಎಚ್ಚರವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು.
ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ತಮ್ಮ ಕಚೇರಿ ಸಭಾಂಣದಲ್ಲಿ ನಡೆದ ಆರೋಗ್ಯ ಇಲಾಖೆಯ ಸಾಮಾಜಿಕ ಸವಲತ್ತುಗಳ ಸಮನ್ವಯ ಸಮಿತಿ ಸಭೆ, ಟಿ.ಬಿ. ಫೋರಂ ಸಮಿತಿ ಸಭೆ, ಜಿಲ್ಲಾ ಮಟ್ಟದ ಲಸಿಕಾ ಕಾರ್ಯಪಡೆ ಸಲಹಾ ಸಮಿತಿ ಸಭೆ, ಜಿಲ್ಲಾ ಕಣ್ಗಾವಲು ಸಮಿತಿ ಸಭೆ, ಜಿಲ್ಲಾ ಖಾಸಗಿ ವೈದ್ಯಕೀಯ ಸಂಸ್ಥೆಗಳ ನೋಂದಣಾ ಪ್ರಾಧಿಕಾರದ ಆಸ್ಪತ್ರೆಗಳ ನೋಂದಣಿ ಮತ್ತು ಕುಂದುಕೊರತೆ ನಿವಾರಣಾ ಸಭೆ, ವಾಲೆಂಟರ್ ಬ್ಲಡದ ಟಾಸ್ಕ್ ಫೋಸ್ ಮೀಟಿಂಗ್ ಹಾಗೂ ವಿವಿಧ ಸಮಿತಿ ಸಭೆಗಳ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಗರ್ಭಿಣಿ ಮಹಿಳೆಯರಿಗೆ ಆರಂಭದಲ್ಲಿಯೇ ತಾಯಿಕಾರ್ಡನ್ನು ವಿತರಿಸಿ, ನಿಯಮಿತ ಆರೋಗ್ಯ ತಪಾಸಣೆಗೆ ಬಂದಾಗ ಅವರಲ್ಲಿರುವ ತೊಡಕುಗಳನ್ನು ಪರಿಣಾಮಕಾರಿಯಾಗಿ ಪ್ರಾರಂಭದಲ್ಲಿಯೇ ಗುರುತಿಸಿ, ಸರಿಯಾದ ಚಿಕಿತ್ಸೆಯನ್ನು ನೀಡಬೇಕು. ಹೆರಿಗೆ ಸಮಯದಲ್ಲಿ ತೊಡಕು ಉಂಟಾದಲ್ಲಿ ಉನ್ನತ ಮಟ್ಟದ ಚಿಕಿತ್ಸೆಗಾಗಿ ಶಿಫಾರಸ್ಸು ಮಾಡಿದಾಗ ತುರ್ತು ಸಿಬ್ಬಂದಿಯೊಂದಿಗೆ ಮೇಲ್ಮಟ್ಟದ ಆಸ್ಪತ್ರೆಗೆ ವರ್ಗಾಯಿಸಬೇಕು. ವರ್ಗಾಯಿಸುವ ಸಂಬಂಧ ದೂರವಾಣಿಯ ಮೂಲಕ ಮೇಲ್ಮಟ್ಟದ ಆಸ್ಪತ್ರೆಗೆ ಮುಂಚಿತವಾಗಿ ತಿಳಿಸಿ, ಚಿಕಿತ್ಸೆ ಒದಗಿಸಲು ಮುಂದಾಗಬೇಕು ಎಂದರು.
ಜಿಲ್ಲೆಯಲ್ಲಿ 2023 ರ ಜುಲೈಯಿಂದ ಡಿಸೆಂಬರ್ ಅಂತ್ಯದವರೆಗೆ 2 ತಾಯಿ ಮರಣ ಹಾಗೂ 51 ಶಿಶು ಮರಣ ಪ್ರಕರಣಗಳು ಉಂಟಾಗಿವೆ. ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ಆಗದಂತೆ ನೋಡಿಕೊಳ್ಳಬೇಕು. 2023 ರ ಏಪ್ರಿಲ್ ನಿಂದ ಡಿಸೆಂಬರ್ ಅಂತ್ಯದವರೆಗೆ 9169 ಹೆರಿಗೆಗಳಾಗಿದ್ದು, ಖಾಸಗಿಯಲ್ಲಿ 6422, ಸರ್ಕಾರಿ ಆಸ್ಪತ್ರೆಗಳಲ್ಲಿ 2747 ಗಳಾಗಿದೆ, 3902 ಸಾಮಾನ್ಯ ಹೆರಿಗೆ ಉಂಟಾದರೆ, 5267 ಶಸ್ತ್ರ ಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಲಾಗಿದೆ. ವೈದ್ಯರು ಸಾಮಾನ್ಯ ಹೆರಿಗೆ ಮಾಡಿಸಲು ಹೆಚ್ಚು ಒತ್ತು ನೀಡಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಈವರೆಗೆ 1954 ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದ್ದು, 2 ಕೋವಿಡ್ ಪ್ರಕರಣಗಳು ಜಿಲ್ಲೆಯ ಗಡಿ ಭಾಗದಲ್ಲಿ ಕಂಡುಬಂದಿವೆ. ರೋಗಿಗಳಿಗೆ ಚಿಕಿತ್ಸೆ ನೀಡಲು ಅಗತ್ಯವಿರುವ ಪ್ರತ್ಯೇಕ ಬೆಡ್‌ಗಳು, ಐ.ಸಿ.ಯು ಸೇರಿದಂತೆ ಆಕ್ಸಿಜನ್‌ನ ವ್ಯವಸ್ಥೆ ಅಗತ್ಯವಿರುವ ಔಷಧಿ ದಾಸ್ತಾನುಗಳನ್ನು ಇಟ್ಟುಕೊಂಡು ಚಿಕಿತ್ಸೆ ನೀಡಲು ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
2025 ಕ್ಕೆ ಕ್ಷಯ ನಿರ್ಮೂಲನಾ ಭಾರತ ನಿರ್ಮಾಣಕ್ಕೆ ಪಣ ತೊಟ್ಟಿದ್ದು, ಇದನ್ನು ಯಶಸ್ವಿಗೊಳಿಸಬೇಕು. ಜಿಲ್ಲೆಯಲ್ಲಿ 32,576 ಜನರಲ್ಲಿ ಕ್ಷಯರೋಗ ತಪಾಸಣೆ ನಡೆಸಿದ್ದು, 1578 ಕ್ಷಯರೋಗ ಪ್ರಕರಣಗಳು ಕಂಡುಬಂದಿರುತ್ತವೆ. ಜಿಲ್ಲೆಯ 153 ಗ್ರಾಮ ಪಂಚಾಯತಿಗಳಲ್ಲಿ 30 ಗ್ರಾಮ ಪಂಚಾಯತಿಗಳನ್ನು ಕ್ಷಯಮುಕ್ತ ಗ್ರಾಮಗಳಾಗಿ ಶೀಘ್ರದಲ್ಲಿಯೇ ಘೋಷಿಸಲಾಗುವುದು. ಕ್ಷಯರೋಗದ ಹರಡುವಿಕೆ, ಅವುಗಳ ಪತ್ತೆ, ಚಿಕಿತ್ಸೆ ಸೇರಿದಂತೆ ಮತ್ತಿತರ ವಿಷಯಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ, ಹೆಚ್ಚಿನ ತಪಾಸಣಾ ಪರೀಕ್ಷೆ ನಡೆಸಬೇಕು. ರೋಗ ಇರುವುದು ಕಂಡುಬಂದಲ್ಲಿ ಸೂಕ್ತ ಚಿಕಿತ್ಸೆ ಪಡೆದು ಗುಣಮುಖರಾಗಲು ಉತ್ತಮ ಚಿಕಿತ್ಸೆ ನೀಡಬೇಕು ಎಂದರು.
ಜಿಲ್ಲೆಯ ಪ್ರತಿಯೊಂದು ಆಸ್ಪತ್ರೆಗಳಲ್ಲಿಯೂ ಕೆ.ಪಿ.ಎಂ.ಇ ಕಾಯ್ದೆಯಂತೆ ವೈದ್ಯಕೀಯ ವೆಚ್ಚಗಳ ವಿವರಗಳನ್ನು ಎದ್ದು ಕಾಣುವ ರೀತಿ ಪ್ರದರ್ಶಿಸಬೇಕು. ಅದರನ್ವಯ ಶುಲ್ಕಗಳನ್ನು ಪಡೆಯಬೇಕು. ಒಂದೊಮ್ಮೆ ಇದನ್ನು ಉಲ್ಲಂಘಿಸಿದ್ದಲ್ಲಿ ನೋಟೀಸ್ ನೀಡಿ, ಕ್ರಮ ಕೈಗೊಳ್ಳಬೇಕು ಎಂದರು.
ಲಿಂಗಾನುಪಾತ 1000 ಪುರುಷರಿದ್ದರೆ, 960 ಹೆಣ್ಣುಮಕ್ಕಳು ಪ್ರಸ್ತುತ ಜನನವಿದೆ. ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಮಾಡುವುದು ಅಪರಾಧವಾಗಿದ್ದು, ಇಂತಹ ಪ್ರಕರಣಗಳು ಎಲ್ಲೂ ಆಗದಂತೆ ಅಗತ್ಯ ಕ್ರಮವಹಿಸಬೇಕು. ಪಿ.ಸಿ.ಪಿ.ಎನ್.ಡಿ.ಟಿ ಸಮಿತಿ ಸಭೆಯನ್ನು ಪ್ರತೀ ಎರಡು ತಿಂಗಳಿಗೊಮ್ಮೆ ಸೇರಿ ಕ್ರಿಯಾಶೀಲವಾಗಿ ಕಾರ್ಯಚಟುವಟಿಕೆಗಳನ್ನು ನಡೆಸಬೇಕು. ಲಿಂಗಾನುಪಾತ ಕಡಿಮೆ ಇರುವ ಗ್ರಾಮ ಪಂಚಾಯತಿಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡಗಳನ್ನು ಅರ್ಹ ಫಲಾನುಭವಿಗಳಿಗೆ ತಪ್ಪದೇ ವಿತರಿಸಬೇಕು. ಜಿಲ್ಲಾ ಆಸ್ಪತ್ರೆಗಳು ಖಾಸಗೀ ಆಸ್ಪತ್ರೆಗಳಲ್ಲಿ ನೀಡುವಷ್ಟೇ ಚಿಕಿತ್ಸೆ ನೀಡಬೇಕು. ಖಾಸಗೀ ಆಸ್ಪತ್ರೆಗಳು ಸರ್ಕಾರದ ನಿಯಮಾನುಸಾರ ಆಯುಷ್ಮಾನ್ ಭಾರತ್ ಆರೋಗ್ಯ ಕಾಡ್ ಹೊಂದಿರುವ ಫಲಾನುಭವಿಗಳಿಗೆ ಬೆಡ್‌ಗಳನ್ನು ಮೀಸಲಿರಿಸಿ, ಸೂಕ್ತ ಚಿಕಿತ್ಸೆ ನೀಡಬೇಕು ಎಂದರು.
ಸರ್ಕಾರ ಹೆಚ್.ಐ.ವಿ ಪೀಡಿತರಿಗೆ ಜಾರಿಗೆ ತಂದಿರುವ ವಿವಿಧ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಪ್ರತಿಶತಃ ನೂರರಷ್ಟು ತಲುಪಿಸಬೇಕು. ವಿಶೇಷ ವರ್ಗ ಯೋಜನೆಯಡಿ ಹೆಚ್.ಐ.ವಿ ಸೋಂಕಿತ ಕುಟುಂಬ ವರ್ಗದವರಿಗೆ ವಸತಿ ನಿಗಮದ ಸಹಯೋಗದಲ್ಲಿ ವಸತಿಗಳನ್ನು ಕಲ್ಪಿಸುವುದರ ಜೊತೆಗೆ ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿಯನ್ನು ವಿಶೇಷ ಪ್ರಕರಣದಡಿಯಲ್ಲಿ ನಿಯಮಾನುಸಾರ ನೀಡಬೇಕು. ಜನಸಾಮಾನ್ಯರಲ್ಲಿ ಹೆಚ್.ಐ.ವಿ ಹರಡುವಿಕೆಯ ಬಗ್ಗೆ ಅರಿವು ಮೂಡಿಸಿ, ರೋಗ ನಿಯಂತ್ರಣಕ್ಕೆ ಮುಂದಾಗಬೇಕು ಎಂದರು.
ಕಳೆದ ಸಾಲಿನ ಏಪ್ರಿಲ್ ನಿಂದ ಡಿಸೆಂಬರ್ ವರೆಗೆ 11250 ಯುನಿಟ್‌ಗಳಷ್ಟು ರಕ್ತ ಸಂಗ್ರಹಕ್ಕೆ ಗುರಿ ಹೊಂದಿ, 22186 ಯೂನಿಟ್ ನಷ್ಟು ಬ್ಲಡ್ ನ್ನು ಶೇಖರಿಸಿ, ಸಾಧನೆ ಮಾಡುವುದರೊಂದಿಗೆ ಜಿಲ್ಲೆಯಲ್ಲಿ ರಕ್ತದ ಕೊರತೆ ಉಂಟಾಗದಂತೆ ಕ್ರಮವಹಿಸಿದೆ. ಹೆಚ್ಚು ಹೆಚ್ಚು ಶಿಬಿರಗಳನ್ನು ನಡೆಸುವುದರೊಂದಿಗೆ ದಾನಿಗಳಿಂದ ರಕ್ತ ಶೇಖರಣೆಗೆ ಮುಂದಾಗಬೇಕು ಎಂದರು.
ಜಿಲ್ಲೆಯಲ್ಲಿ 2022ನೇ ಸಾಲಿನಲ್ಲಿ 13806 ನಾಯಿ ಕಡಿತ ಪ್ರಕರಣಗಳು ದಾಖಲಾದರೆ, ಕಳೆದ ಸಾಲಿನಲ್ಲಿ ಜನವರಿಯಿಂದ ಡಿಸೆಂಬರ್ ವರೆಗೆ 17733 ನಾಯಿ ಕಡಿತ ಪ್ರಕರಣಗಳು ಉಂಟಾಗಿವೆ. ಈ ಸಂಬಂಧ ಹೆಚ್ಚು ದೂರುಗಳು ಸಹ ಕೇಳಿ ಬರುತ್ತಿವೆ. ಇವುಗಳ ನಿಯಂತ್ರಣಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂದ ಅವರು, 314 ಹಾವು ಕಡಿತ ಪ್ರಕರಣಗಳು ಉಂಟಾಗಿವೆ. ಇವುಗಳಿಗೆ ಚಿಕಿತ್ಸೆ ನೀಡಲು ಅಗತ್ಯವಿರುವ ಔಷಧಿ ದಾಸ್ತಾನುಗಳನ್ನು ಇಟ್ಟುಕೊಳ್ಳುವುದರೊಂದಿಗೆ ಸೂಕ್ತ ಚಿಕಿತ್ಸೆ ನೀಡಬೇಕು ಎಂದರು.
ಮಲೇರಿಯಾ, ಇಲಿಜ್ವರ, ಹೆಚ್1ಎನ್1 ರೋಗಗಳು ಸೇರಿದಂತೆ ಮತ್ತಿತರ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಪ್ರಾಣಿಜನ್ಯ ರೋಗಗಳ ಸೋಂಕುಗಳು ಮನುಷ್ಯರಿಗೆ ಹರಡದಂತೆ ಕ್ರಮ ವಹಿಸಬೇಕು ಎಂದರು. ನೀರಿನ ಮೂಲಗಳು ಕುಡಿಯಲು ಯೋಗ್ಯವಾಗಿರುವ ಬಗ್ಗೆ ನೀರಿನ ಗುಣಮಟ್ಟ ಪರೀಕ್ಷೆಯನ್ನು ಕೈಗೊಳ್ಳಬೇಕು. ನೀರು ಶುದ್ಧವಾಗಿರದಿದ್ದಲ್ಲಿ ಫ್ಲೋರಿನೇಷನ್ ಮಾಡಬೇಕು. ಆ ನಂತರದಲ್ಲಿ ಕುಡಿಯಲು ಯೋಗ್ಯವಾಗಿದ್ದಲ್ಲಿ ಮಾತ್ರ ಅವುಗಳ ಬಳಕೆಗೆ ಸೂಚಿಸಬೇಕು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಐ.ಪಿ ಗಡಾಧ್, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಚಿದಾನಂದ ಸಂಜು, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಕೆ. ರಾಮರಾವ್, ಜಿಲ್ಲಾ ಕುಷ್ಟರೋಗ ನಿಯಂತ್ರಣ ಅಧಿಕಾರಿ ಡಾ. ಲತಾ ನಾಯಕ್, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಪ್ರಶಾಂತ್ ಭಟ್, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ನಾಗರತ್ನ, ಡಾ. ಜೋಶ್ನಾ, ತಾಲೂಕು ವೈದ್ಯಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು