ಉಡುಪಿ: ನಿರ್ಭಿತವಾಗಿ ನಾವು ನಿಮ್ಮ ಹಕ್ಕುಗಳ ಪರವಾಗಿ ಮಾತನಾಡುತ್ತೇವೆ – ಎಸ್.ಡಿ.ಪಿ.ಐ ರಾಷ್ಟ್ರೀಯ ಉಪಾಧ್ಯಕ್ಷ ಮುಹಮ್ಮದ್ ಶಫಿ

ಉಡುಪಿ: ನಿರ್ಭಿತವಾಗಿ ನಾವು ನಿಮ್ಮ ಹಕ್ಕುಗಳ ಪರವಾಗಿ ಮಾತನಾಡುತ್ತೇವೆ ಎಂದು ಎಸ್.ಡಿ.ಪಿ ರಾಷ್ಟ್ರೀಯ ಉಪಾಧ್ಯಕ್ಷ ಮುಹಮ್ಮದ್ ಶಫಿ ಹೇಳಿದರು.

ಅವರು ಇಂದು ಉಡುಪಿಯ ಅಮ್ಮಣ್ಣಿ ರಮಣ ಸಭಾಂಗಣದ ಮೈದಾನದಲ್ಲಿ ಆಯೋಜಿಸಿದ ಎಸ್.ಡಿ.ಪಿಐ ಉಡುಪಿ ಜಿಲ್ಲಾ ಮಟ್ಟದ ಪ್ರಜಾಪ್ರಭುತ್ವ ಸಂರಕ್ಷಣಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.

IMG20240308171418 1709909097282 Udupi

“ಪ್ಯಾಲೆಸ್ಟೈನ್ ಗಾಝಾದ ಸಂತ್ರಸ್ಥರು ತಮ್ಮ ಹಕ್ಕಿಗಾಗಿ ಹೋರಾಡುತ್ತ ಹುತಾತ್ಮರಾಗುತ್ತಿದ್ದಾರೆ. ವಿಶ್ವ ಮೌನವಾಗಿದೆ‌. ವಿಶ್ವ ಶಾಂತಿಯನ್ನು ಜಪಿಸುವ ರಾಷ್ಟ್ರಗಳಿಂದ ಇದು ಯಾವ ಶಾಂತಿಯ ಸಂದೇಶವಾಗಿದೆ.ಇಂದು ವಿಶ್ವ ಮಹಿಳಾ ದಿನಾಚರಣೆ. ಗಾಝಾದಲ್ಲಿ 60 ಸಾವಿರ ಗರ್ಭಿಣಿ ಮಹಿಳೆಯರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ವಿಶ್ವ ಸಂಸ್ಥೆ ಏನು ಮಾಡುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮಾನವೀಯತೆಯನ್ನು ಜಾಗೃತಿಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ” ಎಂದು ಹೇಳಿದರು.

“ಭಾರತದಲ್ಲಿನ ಪ್ರಸ್ತುತ ಪರಿಸ್ಥಿತಿಯ ಕುರಿತು ನಮಗೆ ಅರಿವಿದೆ. ವಿವಿಧ ರಾಷ್ಟ್ರಗಳಲ್ಲಿ ಸಮಾನತೆ, ವಸುದೈವ ಕುಟುಂಬಕಂ ಎಂಬ ಆಶಯದೊಂದಿಗೆ ಮಾತನಾಡುವ ಸರಕಾರ ಭಾರತದಲ್ಲಿ ಅದನ್ನು ಪಾಲಿಸುವಲ್ಲಿ ವಿಫಲವಾಗಿದೆ.370 ನೇ ವಿಧಿಯನ್ನು ರದ್ದು ಮಾಡಿ ಕೇಂದ್ರ ಸರಕಾರ ಕಾಶ್ಮೀರದ ಸಹೋದರರ ಹಕ್ಕಿನ ಮೇಲೆ ಪ್ರಹಾರ ನಡೆಸಲಾಗಿದೆ” ಎಂದರು.

ಭಾರತದ ಮೊದಲ ಪ್ರಧಾನಿ ಜವಹರಲಾಲ್ ನೆಹರೂ 370 ನೇ ವಿಧಿಯೊಂದಿಗೆ ಕಾಶ್ಮೀರದ ಜನತೆಗೆ ಎಲ್ಲ ಹಕ್ಕು ನೀಡುವ ವಾಗ್ದಾನ ಮಾಡಿದ್ದರು‌. ಕಾಶ್ಮೀರ ಮತ್ತು ಕಾಶ್ಮೀರಿಗಳು ನಮ್ಮವರು ಎಂದಿದ್ದರು. ಆದರೆ ಇಂದು ನಮ್ಮ ಪ್ರಧಾನಿ ಇದು ಹೊಸ ಕಾಶ್ಮೀರ ಎನ್ನುತ್ತಿದ್ದಾರೆ. ಅಲ್ಲಿ ಈಗ ಭಯದ ವಾತಾವರಣವಿದೆ. ವಾಸ್ತವದಲ್ಲಿ ಭಯವಿಲ್ಲದ ವಾತಾವರಣ ಸೃಷ್ಟಿಸುವುದು ಪ್ರಧಾನಿಯ ಕರ್ತವ್ಯವಾಗಿತ್ತು.

ಇಂದು ಜನರನ್ನು ಸರಕಾರ ಭಯಭೀತರನ್ನಾಗಿಸುತ್ತಿದೆ‌. ಎಸ್.ಡಿ.ಪಿ‌ಐಯನ್ನು ಇಡಿ.ಐಟಿ ಗಳ ದಾಳಿಯ ಮೂಲಕ ಬೆದರಿಸಲಾಯಿತು. ಆದರೆ ನಾವು ಯಾವುದಕ್ಕೂ ಅಂಜದೆ ನಿಮ್ಮ ದನಿಯಾಗಿ ಕಾರ್ಯ ನಿರ್ವಹಿಸುತ್ತೇವೆ. ಯಾವುದೇ ಸಂದಿಗ್ಧ ಪರಿಸ್ಥಿತಿಯಲ್ಲಿ ಜಾತ್ಯತೀತ ಎಂಬ ಪಕ್ಷಗಳು ನಿಮ್ಮ ಪರವಾಗಿ ಧ್ವನಿಯೆತ್ತಿ ರಸ್ತೆಗಿಳಿದಿದೆಯೇ? ನಿರ್ಭಿತವಾಗಿ ನಾವು ನಿಮ್ಮ ಹಕ್ಕುಗಳಿಗಾಗಿ ಮಾತನಾಡುತ್ತೇವೆ. ಇವರಿಗೆ ನಮ್ಮನ್ನು ಭಯ ಪಡಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಈ ಸಂದರ್ಭದಲ್ಲಿ ರಿಯಾಝ್ ಕಡಂಬು, ಭಾಸ್ಕರ್ ಪ್ರಸಾದ್, ತುಲಸಿಧರನ್ ಪಲ್ಲಿಕಲ್, ಫಾ.ವಿಲಿಯಂ ಮಾರ್ಟಿಸ್ ಸೇರಿದಂತೆ ಹಲವು ಗಣ್ಯರು ಮಾತನಾಡಿದರು.

ಎಸ್‌ಡಿ.ಪಿ‌ಐ ಉಡುಪಿ ಜಿಲ್ಲಾಧ್ಯಕ್ಷರಾದ ಶಾಹಿದ್ ಅಲಿ ಪ್ರಸ್ತಾವಿಕ ಭಾಷಣ ಮಾಡಿ ಸ್ವಾಗತಿಸಿದರು. ಹನೀಫ್ ಮುಳೂರು ಧನ್ಯವಾದವಿತ್ತರು, ಯಾಸೀನ್ ಕಾರ್ಯಕ್ರಮ ನಿರೂಪಿಸಿದರು.

Latest Indian news

Popular Stories