ಉಡುಪಿ: ಅಡ್ಡ ಮತದಾನ ಮಾಡಿದವರನ್ನೂ ಉಚ್ಚಾಟಿಸಿಲ್ಲ ಯಾಕೆ? | ಗ್ಯಾಂಗ್’ವಾರ್ ಪ್ರಕರಣ ಉಲ್ಲೇಖಿಸಿ ಹಿಂದೂ ನಾಯಕರಿಗೆ ಬೆದರಿಕೆ ಇದೆ ಎಂದ ಬಿಜೆಪಿ ಬಂಡಾಯ ಅಭ್ಯರ್ಥಿ ರಘುಪತಿ ಭಟ್

ಉಡುಪಿ: ಮಾಜಿ ಶಾಸಕ ರಘುಪತಿ ಭಟ್ ಬಿಜೆಪಿಯಿಂದ ಉಚ್ಚಾಟನೆಗೊಂಡ ಬಳಿಕ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿ, ಉಚ್ಛಾಟನೆಯಾದದ್ದು ಮಾಧ್ಯಮದ ಮೂಲಕ ತಿಳಿಯಿತು ಬೇಸರವಾಯಿತು‌. ಶಿಸ್ತು ಸಮಿತಿಯ ನೋಟಿಸ್ ಈವರೆಗೆ ನನಗೆ ತಲುಪಿಲ್ಲ. ಪಕ್ಷ ಎಂದರೆ ಜೀವ ಬಿಡುವ ಕಾರ್ಯಕರ್ತರಿಗೆ ನಿರಂತರ ನೋವಾಗುತ್ತಿದೆ. ಪಕ್ಷದ ಎಲ್ಲಾ ಹುದ್ದೆಯಿಂದ ವಜಾ ಮಾಡುವುದಾಗಿ ಹೇಳಿದ್ದಾರೆ. ನನ್ನದು ಕಾರ್ಯಕರ್ತ ಹುದ್ದೆ, ಪಕ್ಷದಲ್ಲಿ ನನಗೆ ಯಾವ ಹುದ್ದೆಯನ್ನು ಕೊಟ್ಟಿಲ್ಲ. ಬಿಜೆಪಿ ನನ್ನನ್ನು ಯಾವ ಹುದ್ದೆಯಿಂದ ವಜಾ ಮಾಡಿದೆ ಸ್ಪಷ್ಟಪಡಿಸಬೇಕು ಎಂದರು.

ಟಿಕೆಟ್ ತಪ್ಪಿದಾಗ ಸ್ಥಾನಮಾನ ಕೊಡುತ್ತೇವೆ ಎಂದಿದ್ದರು . ಪಕ್ಷ ನನ್ನನ್ನು ರಾಜ್ಯ ಕಾರ್ಯಕಾರಿ ಸದಸ್ಯನನ್ನೂ ಮಾಡಿಲ್ಲ. ಈ ವಜಾಕ್ಕೆಲ್ಲ ನಾನು ತಲೆ ಬಿಸಿ ಮಾಡಿಕೊಳ್ಳಲ್ಲ. ನಾನು ಮೋದಿಗೆ ಬೈದಿಲ್ಲ.. ರಾಜ್ಯದ ನಾಯಕರಿಗೆ ಬೈದಿಲ್ಲ. ಬಿಜೆಪಿ ಪಕ್ಷದ ವ್ಯವಸ್ಥೆಯ ಬಗ್ಗೆ ನನಗೆ ಅಸಮಾಧಾನವಿದೆ ಎಂದು ಹೇಳಿದರು.

ಪಕ್ಷ ನಾಯಕರನ್ನು ಟೀಕೆ ಮಾಡಿದ ಜಗದೀಶ್ ಶೆಟ್ಟರ್ ಒಂದು ವರ್ಷದಲ್ಲಿ ವಾಪಾಸಾದರು.‌ಪಕ್ಷಕ್ಕೆ ವಾಪಸ್ ಆಗಿ ಲೋಕಸಭಾ ಟಿಕೆಟ್ ಪಡೆದುಕೊಂಡರು. ಇದು ಶಾಶ್ವತ ವಜಾ ಅಲ್ಲ ಪರಿಷತ್ ಚುನಾವಣೆಯಲ್ಲಿ ನಾನು ಗೆದ್ದ ಮೇಲೆ ವಜಾ ರದ್ದಾಗುತ್ತದೆ ಎಂದರು.

ಒಬ್ಬ ಬಿಜೆಪಿ ಕಾರ್ಯಕರ್ತನನ್ನು ವಜಾ ಮಾಡಲು ಸಾಧ್ಯವಿಲ್ಲ. ಬಿಜೆಪಿ ಶಿಸ್ತು ಸಮಿತಿಗೆ ನನ್ನ ಹಲವು ಪ್ರಶ್ನೆ ಇದೆ. ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದವರ ಮೇಲೆ ಏನು ಶಿಸ್ತು ಕ್ರಮವಾಗಿದೆ? ಅಡ್ಡ ಮತದಾನ ಮಾಡಿದ ಇಬ್ಬರೂ ಶಾಸಕರನ್ನ ಏನು ಮಾಡಿದ್ದೀರಿ? ವಜಾ ಮಾಡಿದ್ದೀರಾ? ಎಂದರು.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಬೆಂಬಲಿಸಿದ ಶಾಸಕರನ್ನು ವಜಾ ಮಾಡಿದ್ದೀರಾ? ಅಗೋಚರವಾಗಿ ಬಿಜೆಪಿ ವಿರುದ್ಧ ಕೆಲಸ ಮಾಡುವವರ ಮೇಲೆ ಏನು ಕ್ರಮ ಆಗಿದೆ ಎಂದು ಪ್ರಶ್ನಿಸಿದರು.

ನಾನು ಕೈಹಿಡಿದು ಬೆಳೆಸಿದವರೇ ನನ್ನನ್ನು ವಜಾ ಮಾಡಲು ಶಿಫಾರಸ್ಸು ಮಾಡಿದರು. ಪಕ್ಷದ ದೃಷ್ಟಿಯಿಂದ ಜಿಲ್ಲಾಧ್ಯಕ್ಷರು, ಶಾಸಕರು ಸುನಿಲ್ ಕುಮಾರ್ ಮಾಡುವುದು ಸರಿ ಇದೆ. ಪಕ್ಷದಿಂದ ವಜಾ ಮಾಡುವ ಸಮಾನ ನ್ಯಾಯ ಜಾರಿಗೆ ತನ್ನಿ ಎಂದು ಭಟ್ ಹೇಳಿದರು.

ಬಹಿರಂಗ ಹೇಳಿಕೆ ಕೊಡುವ ಭ್ರಷ್ಟಾಚಾರ ಆರೋಪ ಮಾಡುವ ನಾಯಕರ ಮೇಲೆ ನಿಮ್ಮ ಕ್ರಮ ಏನು ? ಪಕ್ಷದ ಅಧಿಕೃತ ಅಭ್ಯರ್ಥಿಗಳ ಸೋಲಿಸಲು ಯಾರಿಗೆ ಎಷ್ಟು ಹಣ ಹೋಗಿದೆ, ಯಾರು ಕೆಲಸ ಮಾಡಿದ್ದಾರೆ. ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳೇ ಆರೋಪ ಮಾಡುತ್ತಿದ್ದಾರೆ. ವಿಪ್ ಉಲ್ಲಂಘನೆ ಮಾಡಿದವರ ಮೇಲೆ ಏನು ಕ್ರಮ ಕೈಗೊಂಡಿದ್ದೀರಿ? ಎಂದರು.

ನಾನೊಬ್ಬ ಪಾಪದವ, ಬಡಪಾಯಿ ಮಾತ್ರ ನಿಮಗೆ ವಜಾಮಾಡಲು ಸಿಕ್ಕಿದ್ದಾ? ನಾನು ವಿಚಲಿತನಾಗಿಲ್ಲ ಚುನಾವಣೆಗೆದ್ದು ಬಿಜೆಪಿಯ ಶಾಸಕನಾಗುತ್ತೇನೆ. ಜಗದೀಶ್ ಶೆಟ್ಟರ್ ಅವರ ಪ್ರಕರಣವೇ ನನಗೆ ಮಾದರಿ ಎಂದರು.

ಕರಾವಳಿ ಬಿಜೆಪಿ ಕಾರ್ಯಕರ್ತರಿಗೆ ಶಿಸ್ತು ಜಾಸ್ತಿ ಶಿಕ್ಷೆಯೂ ಜಾಸ್ತಿ.‌ಉಡುಪಿಯಲ್ಲಿ ನಾಲ್ವರು ಸಿಟ್ಟಿಂಗ್ ಎಂಎಲ್ಎಗಳನ್ನು ಬದಲಿಸಲಾಯಿತು.‌ಇದನ್ನ ಶಿವಮೊಗ್ಗದಲ್ಲಿ ಬೆಂಗಳೂರಿನಲ್ಲಿ ಬಾಗಲಕೋಟೆ ಹುಬ್ಬಳ್ಳಿಯಲ್ಲಿ ಮಾಡಕ್ಕಾಗುತ್ತಾ? ಉಡುಪಿಯಲ್ಲಿ ಪಾಪದ ಕಾರ್ಯಕರ್ತರು ಸಂಘ ಪಕ್ಷ ಅಂತ ಕೆಲಸ ಮಾಡುತ್ತಾರೆ. ಕರಾವಳಿ ವಿಚಾರದಲದಲ್ಲಿ ಬಿಜೆಪಿ ಮನಬಂದಂತೆ ನಡೆದುಕೊಳ್ಳುತ್ತದೆ. ಕರಾವಳಿಗೆ ಮೀಸಲಿಟ್ಟ ಸ್ಥಾನವನ್ನು ಶಿವಮೊಗ್ಗಕ್ಕೆ ಕೊಟ್ಟಿದ್ದಾರೆ. ಈ ಚುನಾವಣೆಯಲ್ಲಿ ಮತದಾರರು ಕಾರ್ಯಕರ್ತರು ಸರಿಯಾದ ಉತ್ತರ ಕೊಡುತ್ತಾರೆ ಎಂದರು.

ಗ್ಯಾಂಗ್’ವರ್:

ಉಡುಪಿ ನಗರದಲ್ಲಿ ನಡೆದ ಗ್ಯಾಂಗ್ ವಾರ್ ಘಟನೆ ಕುರಿತು ಉಡುಪಿಯಲ್ಲಿ ಮಾಜಿ ಶಾಸಕ ರಘುಪತಿ ಭಟ್ ಕಳವಳ ವ್ಯಕ್ತಪಡಿಸಿದ್ದಾರೆ.

ಉಡುಪಿಯಲ್ಲಿ ಇಂತಹ ಘಟನೆ ನಡೆದಿರುವುದು ನಂಬಲು ಅಸಾಧ್ಯ.ಭಯಾನಕ ವಾತಾವರಣ ಸೃಷ್ಟಿಯಾಗಿದೆ. ಸಿನಿಮಾದಲ್ಲಿ ನಡೆದಂತೆ ಉಡುಪಿಯಲ್ಲಿ ಗ್ಯಾಂಗ್ ವಾರ್ ನಡೆದಿದೆ. ಉಡುಪಿ ನಗರದಲ್ಲಿ ಇದು ಊಹಿಸಲು ಸಾಧ್ಯವಿಲ್ಲದ ಘಟನೆ ಎಂದು‌ ಹೇಳಿದರು.

ಕರಾವಳಿ ಭಾಗದ ಮೂಲಭೂತವಾದಿ ಮುಸ್ಲಿಂ ಸಂಘಟನೆ ಯಾವ ಮಟ್ಟಿಗೆ ಬೆಳೆದಿದ್ದಾರೆ ಗೊತ್ತಾಗುತ್ತೆ. ಹಿಂದೂ ಸಂಘಟನೆ, ಹಿಂದೂ ನಾಯಕರ ಮೇಲೆ ಈ ರೀತಿ ನಡೆದರೆ ಎನ್ನುವ ಭಯ ಇದೆ. ಸರ್ಕಾರ ಗರುಡ ಸಂಘಟನೆಯಲ್ಲಿರುವ ಎಲ್ಲರನ್ನೂ ತನಿಖೆಗೆ ಒಳಪಡಿಸಬೇಕು. ಹಿಂದೂ ನಾಯಕರಿಗೆಲ್ಲ ಬೆದರಿಕೆ ಇದೆ. ಹಿಜಾಬ್ ವಿವಾದದ ವೇಳೆ ನನ್ನ ಹಾಗೂ ಕುಟುಂಬದ ಮೇಲೂ ಬೆದರಿಕೆ ಇತ್ತು ಎಂದರು.

ಗರುಡ ಎಂಬ ಮೂಲಭೂತ ಸಂಘಟನೆ ಗೋ ಸಾಗಾಟಕ್ಕೆ ಬೆಂಬಲ ಕೊಡುವ ಸಂಘಟನೆಯಾಗಿದೆ. ಸಮಗ್ರ ತನಿಖೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳದಿದ್ದಲ್ಲಿ ಕರಾವಳಿಗೆ ಆತಂಕದ ದಿನ ಬರಲಿದೆ. ಡ್ರಗ್ಸ್ ಸೇವಿಸಿದವರೇ ಇಂತಹ ಗ್ಯಾಂಗ್ ವಾರ್ ನಡೆಸಲು ಸಾಧ್ಯ. ಡ್ರಗ್ಸ್ ಜಾಲವನ್ನ ವಿಸ್ತರಿಸಿರುವುದು ಇದೇ ಸಂಘಟನೆ. ಯಾವ ಮೂಲದಿಂದ ಡ್ರಗ್ಸ್ ಬರುವ ಬಗ್ಗೆಯೂ ತನಿಖೆ ನಡೆಯಬೇಕು ಎಂದರು.

ಬ್ರದರ್ಸ್ ಸರ್ಕಾರ ಇರುವುದರಿಂದ ಈ ಸಂಘಟನೆ ಗೆ ಧೈರ್ಯ ಬಂದಿದೆ:

ರಾಜ್ಯದಲ್ಲಿ ಬ್ರದರ್ಸ್ ಸರ್ಕಾರ ಇರುವ ಕಾರಣ ಏನು ಬೇಕಾದ್ರೂ ಮಾಡ್ಬೋದು ಅನ್ನೋ ಧೈರ್ಯ ಇದೆ. ಯೋಗಿಯಂತಹ ಸರ್ಕಾರ ಇದ್ರೆ ಇಂತಹ ಕೃತ್ಯ ನಡೆಯುತ್ತಿರಲಿಲ್ಲ ಎಂದು ರಘುಪತಿ ಭಟ್ ಹೇಳಿದರು.

ಉತ್ತರ ಪ್ರದೇಶದಲ್ಲಿ ಕ್ರಿಮಿನಲ್ ಗಳನ್ನ ಮಟ್ಟ ಹಾಕಲಾಗುತ್ತಿದೆ.ಬಅಲ್ಲಿ ಹಿಂದೂ ಮುಸ್ಲಿಂ ಎಲ್ಲರೂ ಸಂತೋಷದಲ್ಲಿದ್ದಾರೆ. ಇಲ್ಲಿ ಬ್ರದರ್ಸ್ ಸರ್ಕಾರ ಇರುವ ಕಾರಣ ಕ್ರಿಮಿನಲ್ ಗಳು ಹಾರಾಟ ನಡೆಸುತ್ತಿದ್ದಾರೆ ಎಂದರು.

Latest Indian news

Popular Stories