ಮೀನುಗಾರಿಕೆ ದೋಣಿಗಳಿಗೆ ಎಲೆಕ್ಟ್ರಿಕ್ ಇಂಜಿನ್ ಬಳಕೆ ಭವಿಷ್ಯದ ಅನಿವಾರ್ಯ : ಯಶ್ ಪಾಲ್ ಸುವರ್ಣ

ಪರಿಸರ ಮಾಲಿನ್ಯ ನಿಯಂತ್ರಣ ಹಿನ್ನೆಲೆಯಲ್ಲಿ ಸೀಮೆ ಎಣ್ಣೆ ಹಾಗೂ ಡೀಸೆಲ್ ಬಳಕೆ ನಿಷೇಧಕ್ಕೆ ಕೇಂದ್ರ ಸರ್ಕಾರ ಮುಂದಾದಲ್ಲಿ ಭವಿಷ್ಯದ ಮೀನುಗಾರಿಕೆಗೆ ದೋಣಿಗಳಿಗೆ ಎಲೆಕ್ಟ್ರಿಕ್ ಇಂಜಿನ್ ಅಳವಡಿಕೆ ಅನಿವಾರ್ಯವಾಗಲಿದೆ ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಅಭಿಪ್ರಾಯ ವ್ಯಕ್ತಪಡಿಸಿದರು.

ಉಡುಪಿಯಲ್ಲಿ ಶಾಸಕ ಯಶ್ ಪಾಲ್ ಸುವರ್ಣ ರವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಭವಿಷ್ಯದ ಮೀನುಗಾರಿಕೆಗೆ ಎಲೆಕ್ಟ್ರಿಕ್ ಇಂಜಿನ್ ಬಳಕೆಯ ಅನಿವಾರ್ಯತೆ ಹಾಗೂ ಸವಾಲುಗಳ ಬಗ್ಗೆ ಕರಾವಳಿ ಜಿಲ್ಲೆಯ ಮೀನುಗಾರರಿಗೆ ಆಯೋಜಿಸಿದ್ದ ಮಾಹಿತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ಮೀನುಗಾರಿಕಾ ದೋಣಿ ಹಾಗೂ ಬೋಟ್ ಗಳು ಇಂಧನವಾಗಿ ಸೀಮೆ ಎಣ್ಣೆ ಹಾಗೂ ಡೀಸೆಲ್ ಉತ್ಪನ್ನಗಳನ್ನು ಅವಲಂಬಿಸಿದ್ದು, ಸರಕಾರ ಹಂತ ಹಂತವಾಗಿ ಈ ಇಂಧನಗಳನ್ನು ನಿಷೇಧಿಸಿ ಪರ್ಯಾಯವಾಗಿ ಎಲೆಕ್ಟ್ರಿಕ್ ಇಂಜಿನ್ ಅಳವಡಿಕೆಗೆ ಲಭ್ಯವಿರುವ ತಂತ್ರಜ್ಞಾನ ಅಭಿವೃದ್ಧಿ ಹಾಗೂ ಸರ್ಕಾರದ ಮೂಲಕ ಆರ್ಥಿಕ ಸಹಕಾರ ನೀಡಿ ಮೀನುಗಾರಿಕೆಗೆ ಪ್ರೋತ್ಸಾಹ ನೀಡಬೇಕು ಎಂದರು.

ಸಭೆಯಲ್ಲಿ ಖಾಸಗಿ ಕಂಪನಿಯ ಪ್ರತಿನಿಧಿಗಳು ಮೀನುಗಾರಿಕೆಗೆ ಲಭ್ಯವಿರುವ ಎಲೆಕ್ಟ್ರಿಕ್ ಇಂಜಿನ್ ತಂತ್ರಜ್ಞಾನ, ಅನುಕೂಲತೆ ಹಾಗೂ ಲಭ್ಯತೆಗಳ ಬಗ್ಗೆ ಮೀನುಗಾರ ಮುಖಂಡರಿಗೆ ಮಾಹಿತಿ ನೀಡಿ, ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸಿದರು.

ಸಭೆಯಲ್ಲಿ ಕರಾವಳಿ ಮೀನುಗಾರರ ಕ್ರಿಯಾ ಸಮಿತಿ ಅಧ್ಯಕ್ಷರಾದ ಶ್ರೀ ಜಯ ಸಿ. ಕೋಟ್ಯಾನ್, ಮಲ್ಪೆ ಮೀನುಗಾರ ಸಂಘದ ಅಧ್ಯಕ್ಷರಾದ ಶ್ರೀ ದಯಾನಂದ ಸುವರ್ಣ, ಮೀನುಗಾರಿಕೆ ಇಲಾಖೆ ನಿರ್ದೇಶಕರಾದ ಶ್ರೀ ದಿನೇಶ್ ಕಲ್ಲೇರ್ ಹಾಗೂ ಕರಾವಳಿ ಜಿಲ್ಲೆಯ ವಿವಿಧ ಮೀನುಗಾರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

Latest Indian news

Popular Stories