ಉಡುಪಿ, ಮಾ.9: ದೇಶದ ಪ್ರಜಾಪ್ರಭುತ್ವ, ಸಂವಿಧಾನವನ್ನು ಉಳಿಸಿ ಮುಂದಿನ ಪೀಳಿಗೆಗೆ ಒಯ್ಯುಬೇಕಾದ ಅಗತ್ಯ ಇದೆ. ನಾವು ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಹಕ್ಕುಗಳನ್ನು ರಕ್ಷಿಸಿದರೆ ಮಾತ್ರ ನಮ್ಮನ್ನು, ಈ ದೇಶವನ್ನು ಸೇರಿದಂತೆ ಇಡೀ ಜಗತ್ತನ್ನು ರಕ್ಷಿಸಲು ಸಾಧ್ಯ ಇದೆ ಎಂದು ಸಿಕಂದರಾಬಾದ್‌ನ ಸಾಹಿತಿ, ಹೋರಾಟಗಾರ್ತಿ ಡಾ.ಜಿ.ವಿ.ಮೆನ್ನೆಲ ಗದ್ದರ್ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಉಡುಪಿ ವತಿಯಿಂದ ಹಮ್ಮಿಕೊಳ್ಳಲಾದ ‘ಸೊಲ್ಮೆಲು ಸಿರಿಯ ನಾಡಿಗೆ, ಮೈತ್ರಿಯೆಡೆಗೆ ನಮ್ಮ ನಡಿಗೆ’ ಹಕ್ಕೋತ್ತಾಯ ಜಾಥವನ್ನು ಶನಿವಾರ ಅಜ್ಜರಕಾಡು ಹುತಾತ್ಮ ಸ್ಮಾರಕದ ಎದುರು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಸಮಾಜದಲ್ಲಿ ಮಹಿಳೆಯ ಕಾಳಜಿ ಕೇವಲ ಮಹಿಳೆಯರಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ಪುರುಷರ ಬಗ್ಗೆ ಕೂಡ ಇರುತ್ತದೆ. ಮಹಿಳೆಯರು ಕೇವಲ ಹೆಣ್ಣು ಗಂಡಿನ ಬಗ್ಗೆ ಚಿಂತನೆ ಮಾಡದೇ ಇಡೀ ಪರಿಸರ, ಪ್ರಾಣಿ, ಪಕ್ಷಿ ಇಡೀ ಜಗತ್ತಿನ ಬಗ್ಗೆ ಚಿಂತನೆ ಮಾಡುತ್ತಾರೆ. ಇದುವೇ ಆಕೆಯ ನಿಜವಾದ ಸೌಂದರ್ಯ. ನಾವು ಖಂಡಿತವಾಗಿ ಮುಂದಿನ ಜನಾಂಗಕ್ಕಾಗಿ ಸಮಾನತೆ, ಶಾಂತಿ ಹಾಗೂ ಪ್ರೀತಿಯ ಸಮಾಜವನ್ನು ಸೃಷ್ಟಿಸುತ್ತೇವೆ ಎಂದರು.
ವೇದಿಕೆಯಲ್ಲಿ ಚಿಂತಕಿ ಅಮೃತಾ ಆತ್ರಾಡಿ, ರೈತ ಹೋರಾಟಗಾರ್ತಿ ಅನಸೂಯಮ್ಮ ಅಳಾಳುಸಂದ್ರ ಮಾತನಾಡಿದರು. ಈ ಸಂದರ್ಭದಲ್ಲಿ ಮುಂದಿನ ಒಕ್ಕೂಟದ ಮಹಿಳಾ ದಿನಾಚರಣೆಯನ್ನು ಡಾ.ಸುನೀತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ನಾಗಮ್ಮ ಡೋಲು ಬಾರಿಸುವ ಮೂಲಕ ಜಾಥಕ್ಕೆ ಚಾಲನೆ ನೀಡಿದರು. ಅಲ್ಲಿಂದ ಹೊರಟ ಮೆರವಣಿಗೆಯು ಜೋಡುಕಟ್ಟೆ, ಕೋರ್ಟ್ ರೋಡ್, ಕೆಎಂ ಮಾರ್ಗ, ಕ್ಲಾಕ್ ಟವರ್, ಕೆಎಂ ಮಾರ್ಗ, ಮಿಷನ್ ಕಂಪೌಂಡು ಮಾರ್ಗದ ಮೂಲಕ ಬಾಸೆಲ್ ಮಿಷನ್ ಚರ್ಚ್ ಹಾಲ್‌ನಲ್ಲಿ ಸಮಾಪ್ತಿಗೊಂಡಿತು. ರಾಜ್ಯದ ವಿವಿಧ ಕಡೆಗಳಿಂದ ಆಗಮಿಸಿದ ಸಾವಿರಾರು ಮಂದಿ ಮಹಿಳೆಯರು ಈ ಜಾಥದಲ್ಲಿ ಪಾಲ್ಗೊಂಡಿದ್ದರು.