ಕರಾವಳಿ | ಬಾವಿಗೆ ಬಿದ್ದ ಪಂಪ್ ತೆಗೆಯಲು ಬಾವಿಗಿಳಿದ ಮೂವರು ಮೃತ್ಯು

ಯಲ್ಲಾಪುರ: ಬಾವಿಗೆ ಬಿದ್ದಿರುವ ಪಂಪನ್ನು ಮೇಲಕ್ಕೆತ್ತಲು ಬಾವಿಗಿಳಿದ ವ್ಯಕ್ತಿ ಅಸ್ವಸ್ಥಗೊಂಡ ಪರಿಣಾಮ ಆತನ ರಕ್ಷಣೆಗೆ ಇಳಿದ ಮತ್ತಿಬ್ಬರೂ ಸೇರಿ ಒಟ್ಟು ಮೂರು ಮಂದಿ ಮೃತಪಟ್ಟ ಘಟನೆ ಯಲ್ಲಾಪುರ ತಾಲೂಕಿನ ಮಾವಿನಕಟ್ಟಾದ ಭರತನಹಳ್ಳಿಯಲ್ಲಿ ಗುರುವಾರ ನಡೆದಿದೆ.

ಮೃತರನ್ನು ಗೋವಿಂದ ಸೋಮಯ್ಯ ಪೂಜಾರಿ (60) , ಗಣೇಶ ಶೇಟ (22) ಹಾಗೂ ಸುರೇಶ ನಾಯರ (40) ಎನ್ನಲಾಗಿದೆ.

ಭರತನಹಳ್ಳಿಯ ರಾಘವೇಂದ್ರ ನಾಗ ಪೂಜಾರಿ ಅವರ ಮನೆಯ ಬಾವಿಗೆ ಬಿದ್ದಿದ್ದ ಪಂಪನ್ನು ಮೇಲೆತ್ತುವ ಸಂದರ್ಭದಲ್ಲಿ ಓರ್ವ ಬಾವಿಗೆ ಇಳಿದಿದ್ದು ಈ ವೇಳೆ ವ್ಯಕ್ತಿ ಅಸ್ವಸ್ಥಗೊಂಡಿದ್ದಾನೆ ಇದನ್ನು ಕಂಡ ಮತ್ತಿಬ್ಬರು ಆತನ ರಕ್ಷಣೆಗೆ ಬಾವಿಗೆ ಇಳಿದಿದ್ದಾರೆ ಈ ವೇಳೆ ಮೂವರು ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ.

ತಕ್ಷಣವೇ ಶಿರಸಿ ಅಗ್ನಿಶಾಮಕ ಠಾಣೆಯ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಲಂಬೋದರ ವಿ. ಪಟಗಾರ ನೇತೃತ್ವದಲ್ಲಿ ಅಗ್ನಿಶಾಮಕ ಚಾಲಕ ರಮೇಶ್ ಜಂಬಗಿ ಸಿಬಂಧಿಗಳಾದ ಮೋಹನ ನಾಯ್ಕ, ನೀಲಕಂಠ ನಾಯ್ಕ, ಕಾರ್ತಿಕ, ಬಸವರಾಜ ಪಟ್ಟದಕಲ್ಲ, ಮಂಜುನಾಥ ಚೆನ್ನಪಾಗೌಡರ ಅರುಣಕುಮಾರ, ಅಗ್ನಿಶಾಮಕ ಚಾಲಕ ತಂತ್ರಜ್ಞ ಪ್ರವೀಣ ಪಾಟೀಲ ಸ್ಥಳಕ್ಕೆ ಹಾಜರಾಗಿ ಕ್ಷಿಪ್ರ ಕಾರ್ಯಾಚರಣೆ ಮಾಡಿ ಮೂವರು ವ್ಯಕ್ತಿಗಳ ಮೃತ ದೇಹಗಳನ್ನು ಮೆಲಕ್ಕೆತ್ತಿದ್ದಾರೆ. ಕಾರ್ಯಾಚರಣೆಗೆ ಸ್ಥಳೀಯ ಸಂತೋಷ ನೆರವಾದರು.

Latest Indian news

Popular Stories