‌ಮಳೆ ನದಿ ಪ್ರವಾಹಕ್ಕೆ ತತ್ತರಿಸುವ ಜಿಲ್ಲೆಯ 170 ಗ್ರಾಮಗಳು | ಪ್ರಕೃತಿ ವಿಕೋಪ ನಿರ್ವಹಣೆಗೆ ಜಿಲ್ಲಾಡಳಿತ ಸಜ್ಜು | ವರ್ಷದ ಹಿಂದೆಯೇ ಜಿಲ್ಲೆಯಲ್ಲಿ ನೆರೆ ಸಂತ್ರಸ್ತರ ವಾಸಕ್ಕೆ ಆರು ಬೃಹತ್ ಶೆಡ್ ನಿರ್ಮಾಣ – ದಿ ಹಿಂದೂಸ್ತಾನ ಗಝೆಟ್ ವಿಶೇಷ ವರದಿ

ಕಾರವಾರ : ಉತ್ತರ ಕನ್ನಡ ಜಿಲ್ಲೆ ಅರಣ್ಯಕ್ಕೆ ಹೆಸರಾದಂತೆ, ಐದು ನದಿಗಳನ್ನು ಹೊಂದಿದ ಸಮೃದ್ಧ ನಾಡು ಹೌದು. ಕಾಳಿ, ಬೇಡ್ತಿ, ಗಂಗಾವಳಿ, ಶಾಲ್ಮಲಾ, ಅಘನಾಶಿನಿ, ವರದಾ, ಶರಾವತಿ ನದಿಗಳನ್ನು , ಶರಾಬಿ ಹೊಳೆಯನ್ನು ಹೊಂದಿದೆ.

ಕಾಳಿ ಕಣಿವೆಯ ನದಿ ಕದ್ರಾ ದಿಂದ ಕಾರವಾರದತನಕ ನದಿಯ ತಟದ ಹಳ್ಳಿಗಳನ್ನು ನೆರೆಯಲ್ಲಿ ಆಗಾಗ್ಗೆ ಮುಳುಗಿಸಿ ಜನರನ್ನು ನೆರೆ‌ ಸಂತ್ರಸ್ತರನ್ನಾಗಿ ಮಾಡಿದ ಇತಿಹಾಸವೂ ಇದೆ. ಕಾಳಿ ನದಿಗೆ ಕಟ್ಟಿದ ಸುಫಾ,ಕೊಡಸಳ್ಳಿ, ಕದ್ರಾ ಅಣೆಕಟ್ಟುಗಳಿಂದ ಬಿಡುವ ಎರಡು ಲಕ್ಷ ಕ್ಯೂಸೆಕ್ಸ ನೀರಿನಿಂದಾಗಿ ನದಿ ದಂಡೆಯ 26 ಗ್ರಾಮಗಳು ನೆರೆ ಪೀಡಿತವಾಗುವುದು ಸತತ ಮೂರು ವರ್ಷ ನಡೆದಿತ್ತು. ಇದು 2023 ರಲ್ಲಿ ಅಣೆಕಟ್ಟುಗಳ ನೀರಿನ ಸಂಗ್ರಹ ಕಡಿಮೆ ಮಾಡಿ,‌ಮಳೆಗಾಲದಲ್ಲಿ ಪ್ರತಿನಿತ್ಯ ನೀರನ್ನು ಅಣೆಕಟ್ಟು ಗಳಿಂದ ಹೊರಗೆ ಹರಿಸಿದ ಪರಿಣಾಮ ನೆರೆ ಸಮಸ್ಯೆ ತಗ್ಗಿತು.
ಕಾಳಿ ಉಕ್ಕಿ ಹರಿದಾಗ ನದಿ ಪಾತ್ರದ ಜನರಲ್ಲಿ ಆತಂಕ ಮನೆ ಮಾಡುತ್ತದೆ. ಮನೆಗಳಿಗೆ ನೀರು ನುಗ್ಗಿ ಇಡೀ ಬದುಕನ್ನೇ ಹಲವು ಸಲ ಕಸಿದದ್ದು ಇದೆ. ಕದ್ರಾ ,ಮಲ್ಲಾಪುರ, ಕೈಗಾ ಟೌನ್‌ಶಿಪ್ ಸೇರಿದಂತೆ, ವಿರ್ಜೆ, ದೇವಳಮಕ್ಕಿ,‌ಹಳಗಾ, ಉಳಗಾ,‌ ಕಡಿಯೇ, ಭೈರಾ, ಹಣಕೋಣ‌, ಸಿದ್ದರ ‌ಕಿನ್ನರ, ಕಡವಾಡ,ಮದೇವಾಡ ಸಹಿತ 26 ಹಳ್ಳಿಗಳು ಮಳೆಗಾಲದಲ್ಲಿ ನೆರೆ ಭೀತಿ ಅನುಭವಿಸುತ್ತವೆ. ಕದ್ರಾ ಭಾಗದ ಜನರಿಗೆ ಎತ್ತರದ ಪ್ರದೇಶಗಳಲ್ಲಿ ಮನೆ ನಿರ್ಮಿಸಿ‌ ಕೊಡುವ ಯೋಜನೆ ಕಾಗದದಲ್ಲಿ ಉಳಿದಿದೆ. ‌ಕೆಪಿಸಿ ನಿರ್ಮಿಸಿದ ಮನೆಗಳಲ್ಲಿ ನೆರೆ ಸಂತ್ರಸ್ತರು ಈಗಲೂ ಉಳಿದು ಕೊಂಡು ಬದುಕು ದೂಡುತ್ತಿದ್ದಾರೆ.

ಗಂಗಾವಳಿ ನದಿ ಅಂಕೋಲಾ ತಾಲೂಕಿನ 32, ಯಲ್ಲಾಪುರದ 3 ಗ್ರಾಮಗಳ ಜನರನ್ನು ಮಳೆಗಾಲದಲ್ಲಿ ಸಂಕಷ್ಟಕ್ಕೆ ದೂಡುತ್ತದೆ.
ಗಂಗಾವಳಿಗೆ ನೆರೆ ಬಂದರೆ ಅದು ಅಪಾರ ನಷ್ಟ ತರುತ್ತದೆ. 2021 ರ ನೆರೆಯಲ್ಲಿ ಉಂಟಾದ ಮೇಘಸ್ಪೋಟಕ್ಕೆ ಗಂಗಾವಳಿ ನದಿ ರಾಮನಗುಳಿ ಎಂಬಲ್ಲಿ ಒಂದು ಸೇತುವೆಯನ್ನು ಕೊಚ್ಚಿ ಹೋಯ್ದಿತ್ತು. ಹೆದ್ದಾರಿಯ ಸಂಪರ್ಕಗಳೇ ಕುಸಿದು ಬಿದ್ದಿದ್ದವು. ಅನೇಕರ ಮನೆಯಲ್ಲಿ ನದಿ ನೀರಲ್ಲಿ ಮುಳುಗಿ ಬದುಕು ಕಳೆದುಕೊಂಡಿದ್ದರು. ಗಂಗಾವಳಿಗೆ ನೆರೆ ಬಂದರೆ ಡೊಂಗ್ರಿ,‌ ಹೆಗ್ಗಾರ , ಸುಂಕಸಾಳ,‌ಗುಳ್ಳಾಪುರ, ಮಂಜುಗುಣಿ, ಹಡವಾ, ಹೊನ್ನೆಬೈಲ್, ಹಿಚ್ಕಡ,ಕಣಗಿಲ ಹಿಲ್ಲೂರು, ಶಿರಗುಂಜಿ, ಉಳುವೊರೆ, ಕೂರ್ವೆ ದ್ವೀಪ ಸೇರಿ 32 ಗ್ರಾಮಗಳು ನೆರೆ ಪೀಡಿತಕ್ಕೆ ತುತ್ತಾಗುತ್ತವೆ. ಗಂಗಾವಳಿ ಪ್ರತಿ ಮಳೆಗಾಲದಲ್ಲಿ ಒಮ್ಮೆಯಾದರೂ ಕಣ್ಣೀರು ನದಿಯಾಗಿ ಬದಲಾಗಿ ಬಿಡುತ್ತದೆ.

ಪರಿಶುದ್ಧ ನದಿಯಾದ ಅಘನಾಶಿನಿ ನದಿ ಮಳೆಗಾಲದಲ್ಲಿ 23 ಗ್ರಾಮಗಳನ್ನು ಆತಂಕಕ್ಕೆ ದೂಡುತ್ತದೆ. ಹೊನಲಗದ್ದೆ, ಹುಬ್ಬಣಗಿ, ದೀವಗಿ, ಹೆಗಡೆ, ಮಿರ್ಜಾನ್ , ಖೈರೆ, ಉಪ್ಪಿನಪೇಟೆ, ಕಾಗಾಲ್,ಗುಡಕಾಗಾಲ್, ಹೊಳೆಗದ್ದೆ ಸೇರಿ 23 ಗ್ರಾಮಗಳು ಪ್ರವಾಹ ಪೀಡಿತ ವಾಗುತ್ತವೆ.

ಹೊನ್ನಾವರ ತಾಲ್ಲೂಕಿನ ಶರಾವತಿ ಸಹ ಅತೀ ಹೆಚ್ಚು ಹಾನಿ ಮಾಡುವ ನದಿ. ನದಿ ದಂಡೆಯ 54 ಗ್ರಾಮಗಳನ್ನು ಅದು ಮುಳುಗಿಸುತ್ತದೆ. ಗುಂಡಬಾಳ, ಬಳ್ಕೂರು,‌ಹೆಗ್ಗಾರ, ಅನಿಲಗೋಡ, ಮೂಡ್ಕಣಿ,‌ಕೆಳಗಿನ ಮೂಡ್ಕಣಿ,‌ಖಾರ್ವಾ, ಹೊಸಪಟ್ಟಣ, ಕೆಕ್ಕಾರ ಸೇರಿ 54 ಗ್ರಾಮಗಳು ನೆರೆಪೀಡಿತವಾಗುತ್ತವೆ.
ಭಟ್ಕಳದಲ್ಲಿ 6 ಗ್ರಾಮಗಳು , ಶಿರಸಿಯಲ್ಲಿ 2, ಯಲ್ಲಾಪುರದ 3 ಗ್ರಾಮ, ಮುಂಡಗೋಡ1, ಜೊಯಿಡಾದ 1 ಗ್ರಾಮಮಳೆಗಾಲದಲ್ಲಿ‌ ನೆರೆ ಪ್ರವಾಹ ಎದುರಿಸುತ್ತವೆ.

ದಾಂಡೇಲಿ ತಾಲೂಕಿನ ದಾಂಡೇಲಿ, ಹಳೇ ದಾಂಡೇಲಿ,‌ಪಟೇಲ್ ನಗರ, ಬೈಲಪಾರ, ಕೋಗಿಲಬನ, ಐಪಿಎಂ ಕಾಲೂನಿ, ಬೊಮ್ಮನಹಳ್ಳಿ,‌ಕೆಗದಾಳ, ಡೊಣಶಿನಗೇರಿ ಸೇರಿ ಒಟ್ಟು 12 ಗ್ರಾಮ‌, ಹಳಿಯಾಳದ ಕೆಸರೊಳ್ಳಿ, ಅರ್ಲವಾಡ, ಹುಣಸವಾಡ, ಭಗವತಿ ಸೇರಿ 7 ಗ್ರಾಮಗಳು ಮಳೆಗಾಲದಲ್ಲಿ ಭೀತಿ ಎದುರಿಸುತ್ತವೆ.

ಎನ್ ಸಿ ಆರ್ ಎಫ್ ನಿಧಿ ನಲ್ಲಿ 6 ಶೆಲ್ಟರ್ ನಿರ್ಮಾಣ:

ನೆರೆ ನಿರ್ವಹಣೆ ಅನುಭವ ಇರುವ ಜಿಲ್ಲಾಡಳಿತ ಜಿಲ್ಲೆಯ 170 ಗ್ರಾಮಗಳನ್ನು ನೆರೆ ಬಾದಿತ ಹಳ್ಳಿ, ಪಟ್ಟಣಗಳನ್ನು ಗುರುತಿಸಿದೆ. ನೆರೆ ಸಂತ್ರಸ್ತರನ್ನು ಉಳಿಸಲು ಶಾಲೆಗಳಲ್ಲಿ ಕಾಳಜಿ ಕೇಂದ್ರ ಕಟ್ಟಲಾಗಿದೆ. ನೆರೆ ಪೀಡಿತರು ಎರಡು ಮೂರು ದಿನ ಉಳಿದರೂ , ಅವರ ಸಂಖ್ಯೆ ಸಾವಿರದಷ್ಟಿದ್ದರೂ ಅದರ ನಿರ್ವಹಣೆಗೆ ಶಾಶ್ವತ ಶೆಲ್ಟರ್ ಕಟ್ಟಲಾಗಿದೆ.‌ ರಾಷ್ಟ್ರೀಯ ಚಂಡಮಾರುತ ನಿರ್ವಹಣಾ ನಿಧಿಯಲ್ಲಿ ಕಾರವಾರದ ಅಮದಳ್ಳಿಯಲ್ಲಿ ಒಂದು, ಅಂಕೋಲಾದ‌ ಪೂಜಗೇರಿ,‌ಬೇಲೇಕೆರಿಯಲ್ಲಿ ತಲಾ‌ ಒಂದರಂತೆ , ಕುಮಟಾದಲ್ಲಿ ಒಂದು, ಭಟ್ಕಳದ‌ ಬೆಳ್ಕೆಯಲ್ಲಿ ಒಂದು , ಭಟ್ಕಳ ನಗರದಲ್ಲಿ ಒಂದು ನಿರಾಶ್ರಿತರ ಶೆಲ್ಟರ್ ನಿರ್ಮಿಸಲಾಗಿದೆ.

ಪ್ರಕೃತಿಯಲ್ಲಿ ಭಾರಿ ಮಳೆಯಾಗಿ ಪ್ರವಾಹ ಸಂದರ್ಭದಲ್ಲಿ ಬೇಕಾಗುವ ಬೋಟ್, ಲೈಫ್ ಜಾಕೆಟ್ , ಹಗ್ಗ, ಬ್ಯಾಟರಿ, ಬೆಳಕಿನ ವ್ಯವಸ್ಥೆ ಎಲ್ಲವೂ ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ. ಪ್ರಕೃತಿ ವಿಕೋಪ ಮಾಹಿತಿ ಮತ್ತು ದೂರು ಆಲಿಸಲು ಜಿಲ್ಲಾಧಿಕಾರಿ ಕಚೇರಿಯಲ್ಲಿ 24 ತಾಸೂ ಕಾರ್ಯನಿರ್ವಹಿಸುವ ಪ್ರತ್ಯೇಕ ಕಚೇರಿ, ಸಿಬ್ಬಂದಿ ನಿಯೋಜಿಸಲಾಗಿದೆ. ಈ ವ್ಯವಸ್ಥೆ ಕಳೆದ ಎರಡು ವರ್ಷದಿಂದ ಜಾರಿಯಲ್ಲಿದೆ. ಅಣೆಕಟ್ಟುಗಳ ನೀರಿನ ಸಂಗ್ರಹ ಮತ್ತು ನೀರು ಹೊರ ಬಿಡುವ ಪದ್ಧತಿಯಲ್ಲಿ ಒಂದು ಶಿಸ್ತುಬದ್ಧ ನಿಯಮ ರೂಪಿಸಲಾಗಿದೆ. ಹಾಗಾಗಿ ಜಿಲ್ಲೆಯಲ್ಲಿ ನೆರೆ ಪ್ರವಾಹ ನಿರ್ವಹಣೆಗೆ ಒಂದು ನಿರ್ದಿಷ್ಟ ನಿರ್ಬಂಧ ಯೋಜನೆ ಆದಂತಾಗಿದೆ. ಈ ಪ್ರಯುಕ್ತ ನೆರೆ ಹಾನಿಯ ಸಂದರ್ಭದಲ್ಲಿ ಜೀವ ಹಾನಿ ಪ್ರಮಾಣ ಇಳಿಮುಖವಾಗಿದೆ. ಆದರೆ ಭೌತಿಕ ಹಾನಿ, ಬೆಳೆ ಹಾನಿ ಅಧಿಕಾರಿಗಳ ಯೋಜನೆಗೆ ದಕ್ಕದ ಸಂಗತಿಯಾಗಿದೆ.
……

Latest Indian news

Popular Stories