ಕಾರವಾರ : ಉತ್ತರ ಕನ್ನಡ ಜಿಲ್ಲೆ ಯಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್ ರಾಜಿ ಸಂಧಾನದಲ್ಲಿ 29,235 ಪ್ರಕರಣಗಳು ಇತ್ಯರ್ಥವಾಗಿವೆ. ಪರಿಹಾರ ಮತ್ತು ಚೆಕ್ ಬೌನ್ಸ ಪ್ರಕರಣ ಸೇರಿ ಸಂಗ್ರಹ ಮೊತ್ತ ಸೇರಿ 24 ಕೋಟಿ ಪರಿಹಾರ ಸಂಬಂಧಿತರಿಗೆ ದೊರೆತಿದೆ.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಸೆ. 14 ಶನಿವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರವಾರ ಹಾಗೂ ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕು ಕಾನೂನು ಸೇವಾ ಸಮಿತಿಗಳ ಆಶ್ರಯದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಳ್ಳಲಾಯಿತು.
ಜಿಲ್ಲೆಯಾದ್ಯಂತ ಒಟ್ಟೂ 30 ಪೀಠಗಳಲ್ಲಿ 25,152 ವ್ಯಾಜ್ಯ ಪೂರ್ವ ಪ್ರಕರಣಗಳು ಹಾಗೂ ನ್ಯಾಯಾಲಯಗಳಲ್ಲಿ ಬಾಕಿ ಇರುವ 4,083 ಪ್ರಕರಣಗಳಲ್ಲಿ ಸೇರಿದಂತೆ ಒಟ್ಟೂ 29,235 ಪ್ರಕರಣಗಳು ರಾಷ್ಟ್ರೀಯ ಲೋಕ ಅದಾಲತ್‍ನಲ್ಲಿ ಇತ್ಯರ್ಥ ಮಾಡಲಾಯಿತು.
ಹಾಗೂ ಸದರಿ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಸಾಲ ಮರುಪಾವತಿ, ಪರಿಹಾರ, ದಂಡ ಹಾಗೂ ಇತ್ಯಾದಿ ಹಣಕಾಸಿನ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಒಟ್ಟು 24,09,92,905.00 ರೂಪಾಯಿ ಸಂಗ್ರಹ ಮತ್ತು ಪಾವತಿಯಾಗಿದೆ.
ನ್ಯಾಯಾಲಯದ ಮೆಟ್ಟಿಲೇರಿದ 1 ಕೌಟುಂಬಿಕ ಪ್ರಕರಣ ಕಾರವಾರ ನಗರದ 1ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ರಾಜಿಯಾಗಿ ದಂಪತಿಗಳು ಒಟ್ಟಿಗೆ ಜೀವನ ನಡೆಸಲು ಒಪ್ಪಿಕೊಂಡು ಕೂಡಿ ಹೋಗಿರುವ ಒಳ್ಳೆಯ ಬೆಳವಣಿಗೆಯು ಕೂಡ ನ್ಯಾಯಾಲಯದ ಲೋಕ ಅದಾಲತನಲ್ಲಿ ನಡೆಯಿತು.
ಈ ಬಾರಿಯ ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ಜಿಲ್ಲೆಯ ಒಟ್ಟು 17 ಕುಟುಂಬದ ಆಸ್ತಿ ವಿಭಜನೆಯ ಪ್ರಕರಣಗಳು ಹಾಗೂ 348 ಚೆಕ್ ಬೋನ್ಸ್ ಪ್ರಕರಣಗಳು ಮತ್ತು 30 ಮೋಟಾರು ಅಪಘಾತ ಪರಿಹಾರ ಪ್ರಕರಣಗಳು ಸೇರಿದಂತೆ ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜಿಯಾಗಿ ಇತ್ಯರ್ಥಗೊಂಡಿರುವುದು ವಿಶೇಷವಾಗಿದೆ.
ರಾಷ್ಟ್ರೀಯ ಲೋಕ ಅದಾಲತ್‍ನಲ್ಲಿ ಹೆಚ್ಚಿನ ಪ್ರಕರಣಗಳು ರಾಜಿಯಾಗಲು ಸಹಕರಿಸಿದ ಜಿಲ್ಲೆಯ ಎಲ್ಲಾ ನ್ಯಾಯಾಧೀಶರುಗಳಿಗೆ, ಎಲ್ಲಾ ವಕೀಲರುಗಳಿಗೆ, ಸರಕಾರಿ ಅಭಿಯೋಜಕರಿಗೆ, ಪೊಲೀಸ್ ಇಲಾಖೆಯವರಿಗೆ, ಜಿಲ್ಲಾ ಗ್ರಾಹಕರ ವೇದಿಕೆ, ಕಾರ್ಮಿಕ ಇಲಾಖೆಯವರಿಗೆ,ನಗರಸಭೆ ಆಯಕ್ತರಿಗೆ, ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ, ಇತರೇ ಇಲಾಖೆ ಅಧಿಕಾರಿಗಳಿಗೆ,ನ್ಯಾಯಾಲಯದ ಸಿಬ್ಬಂದಿಗಳಿಗೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಿಬ್ಬಂದಿಗಳಿಗೆ,ಕಕ್ಷಿದಾರರಿಗೆ,ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಿ. ಎಸ್. ವಿಜಯಕುಮಾರ್ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ‍್ಯ ಕಾರ್ಯದರ್ಶಿ ದಿವ್ಯಶ್ರೀ ಸಿ.ಎಮ್ ಅಭಿನಂದಿಸಿದ್ದಾರೆ.