ಸುಪಾ ಡ್ಯಾಂಗಳಲ್ಲಿ 34. 00 ಟಿಎಂಸಿ ನೀರು | ವಿದ್ಯುತ್ ಉತ್ಪಾದನೆಗಿಲ್ಲ ಆತಂಕ | ವಿಶೇಷ ವರದಿ

ವಿಶೇಷ ವರದಿ (ದಿ ಹಿಂದುಸ್ತಾನ್ ಗಝೆಟ್)

ಕಾರವಾರ : ಕರ್ನಾಟಕದ ಬಹುತೇಕ ಅಣೆಕಟ್ಟುಗಳ ನೀರಿನ ಸಂಗ್ರಹ ತಳಹಂತ ತಲುಪಿದ್ದರೆ, ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ಸುಫಾ ಅಣೆಕಟ್ಟು 34.00 ಟಿಎಂಸಿ ಯಷ್ಟು ನೀರು ಸಂಗ್ರಹ ಹೊಂದಿದ್ದು, ಮೇ‌ ತಿಂಗಳ ಅಂತ್ಯದ ತನಕ ವಿದ್ಯುತ್ ಉತ್ಪಾದನೆಗೆ ಯಾವುದೇ ಅಡಚಣೆ ಇಲ್ಲ ಎಂದು ಕರ್ನಾಟಕ ಪವರ್ ಕಾರ್ಪೊರೇಷನ್ ಹೇಳುತ್ತಿದೆ. ಸುಫಾ ಜಲಾಶಯ ರಾಜ್ಯದಲ್ಲಿ ಅತೀ ಎತ್ತರದ ಹಾಗೂ ವಿಸ್ತಾರದ ಅಣೆಕಟ್ಟು. ಇಲ್ಲಿ 147.50 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಅಣೆಕಟ್ಟು ಸಮುದ್ರ ಮಟ್ಟದಿಂದ 564 ಮೀಟರ್ ಎತ್ತರವಿದ್ದು, ಪ್ರಸ್ತುತ ಜಲಾಶಯದಲ್ಲಿ 13 ಮೇ 2024 ಕ್ಕೆ 529.33 ಮೀಟರ್ ವರೆಗೆ ನೀರು ಸಂಗ್ರಹವಿದೆ. ಸುಫಾ ಕಾಳಿ ನದಿಗೆ ಕಟ್ಟಿದ ಮೊದಲ ಅಣೆಕಟ್ಟು .‌ಇದೇ ನದಿಗೆ ಎರಡು ಪಿಕ್ ಅಪ್ ಡ್ಯಾಂಗಳನ್ನು ಬೊಮ್ಮನಹಳ್ಳಿ, ತಟ್ಟಿಹಳ್ಳದಲ್ಲಿ ನಿರ್ಮಿಸಲಾಗಿದೆ. ಸುಫಾದಲ್ಲಿ ವಿದ್ಯುತ್ ಉತ್ಪಾದನೆಗೆ ಬಳಸಿದ ನೀರು ವ್ಯರ್ಥವಾಗಿ ನದಿ ಸೇರದೆ ನಾಘಝರಿ ಪವರ್ ಹೌಸ್ ತಲುಪಿ ಅಲ್ಲಿ ಎರಡನೇ‌ ಹಂತದಲ್ಲಿ ವಿದ್ಯುತ್ ಉತ್ಪದನೆಯಾಗುತ್ತದೆ. ಇದಕ್ಕೆ ಬೊಮ್ಮನಹಳ್ಳಿ ಅಣೆಕಟ್ಟು ನೀರು ಬಳಕೆಯಾಗುತ್ತದೆ. ನಂತರ ಇಲ್ಲಿಂದ ಕಾಳಿ ನದಿಗೆ ಸೇರುವ ನೀರು, ಕೊಡಸಳ್ಳಿ‌ ಮತ್ತು ಕದ್ರಾ ಅಣೆಕಟ್ಟು ಸೇರಿ ಅಲ್ಲಿ 3 ಮತ್ತು 4 ನೇ ಹಂತದಲ್ಲಿ ವಿದ್ಯುತ್ ಉತ್ಪಾದನೆಗೆ ನೆರವಾಗುತ್ತದೆ. ನಂತರ ಕಾಳಿ ನದಿ ಒಡಲು ಸೇರಿ ಕದ್ರಾದಿಂದ 40 ಕಿ.ಮಿ. ಹರಿದು ಕಾರವಾರ ಬಳಿ ಅರಬ್ಬೀ ಸಮುದ್ರ ಸೇರುತ್ತದೆ. ಒಂದೇ ನದಿಯ ಐದು ಅಣೆಕಟ್ಟುಗಳು ವಿದ್ಯುತ್ ಉತ್ಪಾದಿಸಿ ರಾಜ್ಯಕ್ಕೆ ವಿದ್ಯುತ್ ಪೂರೈಸುತ್ತವೆ ‌. ಹಾಗಾಗಿ ಕಾಳಿ‌ನದಿಯನ್ನು ಬೆಳಕಿನ ನದಿ ಎಂದು ಕರೆಯಲಾಗುತ್ತದೆ.

ಕಾಳಿ ನದಿ ಈಚಿನ ವರ್ಷಗಳಲ್ಲಿ ನೆರೆ ಉಂಟು ಮಾಡುತ್ತಿರುವ ಕಾರಣ ಯಾವ ಅಣೆಕಟ್ಟುಗಳು ಸಹ ಪೂರ್ಣ ತುಂಬಿಸದಂತೆ, ಅಣೆಕಟ್ಟು ಗಳಲ್ಲಿ ಎಷ್ಟು ನೀರು ಸಂಗ್ರಹಿಸಬೇಕೆಂದು ಜಿಲ್ಲಾಡಳಿತ ಅಣೆಕಟ್ಟು ವಿಭಾಗದ ಸಿವಿಲ್ ವಿಭಾಗಕ್ಕೆ ನಿರ್ಬಂಧ ಹೇರುವ ಕೆಲಸ ನಡೆದಿದೆ. ಅಣೆಕಟ್ಟು ಭರ್ತಿಗೆ ಎರಡು ಮೀಟರ್ ಇರುವಾಗಲೇ ಅಣೆಕಟ್ಟುಗಳ ಕ್ರಸ್ಟ್‌ ಗೇಟ್ ತೆರೆದು ನದಿಗೆ ನೀರು ಹರಿಸಲಾಗುತ್ತಿದೆ. ಇದು ಬೇಸಿಗೆಯಲ್ಲಿ ವಿದ್ಯುತ್ ಉತ್ಪಾದನೆಯ ಮೇಲೆ‌ ಪರಿಣಾಮ ಬೀರಬಹುದು ಎಂದು ಆತಂಕ ಇದ್ದರೂ ಸಹ ಸುಫಾ ಅಣೆಕಟ್ಟು ವಿಶಾಲವಾಗಿರುವ ಕಾರಣ , ವಿದ್ಯುತ್ ಉತ್ಪಾದನೆ ಖೊತಾ ಆಗಿಲ್ಲ. ಇದು ಕರ್ನಾಟಕ ಪವರ್ ಕಾರ್ಪೊರೇಷನ್ ಗೆ ಒಂಚೂರು ಸಮಾಧಾನ ತಂದಿದೆ.

ಯಾವ ಅಣೆಕಟ್ಟುಗಳಲ್ಲಿ ಎಷ್ಟು ನೀರು:

ಕದ್ರಾ ಅಣೆಕಟ್ಟು 34.50 ಮೀಟರ್ ಎತ್ತರ ಇದ್ದು, ಇವತ್ತಿನ ದಿನಕ್ಕೆ ( ಮೇ‌ 13 ) ,ಅಣೆಕಟ್ಟಿನಲ್ಲಿ 30. 27 ಮೀಟರ್ ಎತ್ತರಕ್ಕೆ ನೀರು ಸಂಗ್ರಹ ಇತ್ತು. ಕೊಡಸಳ್ಳಿ ಅಣೆಕಟ್ಟು 75.5. ಮೀಟರ್ ಎತ್ತರವಿದ್ದು, ಇಂದಿಗೆ 73.80 ಮೀಟರ್ ನೀರಿನ ಸಂಗ್ರಹ ಜಲಾಶಯದಲ್ಲಿದೆ.
ಬೊಮ್ಮನಹಳ್ಳಿ ‌,ತಟ್ಟಿಹಳ್ಳದಲ್ಲಿ ಸಹ ಸುಫಾ ದಿಂದ ಹರಿದ ನೀರು ಸಂಗ್ರಹವಾಗುತ್ತದೆ. ಹನಿ ನೀರು ಸಹ ವ್ಯರ್ಥವಾಗದಂತೆ ಬಳಸುವ ನದಿ ರಾಜ್ಯದಲ್ಲಿ ಇದ್ದರೆ ಅದು ಕಾಳಿ ನದಿಯ ನೀರು‌ . ಕಾಳಿ ನದಿಯ ನೀರು ದಾಂಡೇಲಿ ಮೌಳಂಗಿಯಲ್ಲಿ ಸಂಗ್ರಹಿಸಿ ದಾಂಡೇಲಿ, ಹಳಿಯಾಳ ಹಾಗೂ ಸುತ್ತಲ ಹಳ್ಳಿಗಳಿಗೆ ಕುಡಿಯುವ ನೀರಿಗೆ ಸಹ ಬಳಸಲಾಗುತ್ತದೆ.
ಕಾಳಿ ನದಿ ನೀರು ಕೈಗಾ ಪರಮಾಣು ವಿದ್ಯುತ್ ಸ್ಥಾವರದ ಅವಶ್ಯಕತೆಗೆ ಸಹ ಬಳಕೆಯಾಗುತ್ತಿದೆ.

*ದಿನವೂ ಮಿಲಿಯನ್ ಗಟ್ಟಲೆ ಯುನಿಟ್ ಉತ್ಪಾದನೆ :*
ರಾಜ್ಯದ ಬೇಡಿಕೆಗೆ ಅನುಗುಣವಾಗಿ ದಿನವೂ ಹತ್ತಾರು ಮಿಲಿಯನ್ ಯುನಿಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ ‌. ಅಂಬಿಕಾನಗರದಲ್ಲಿರುವ ನಾಗಝರಿ ಪವರ್ ಹೌಸ್ ನಲ್ಲಿ ನಿನ್ನೆ 13 ಮಿಲಿಯನ್ ಯುನಿಟ್ ಉತ್ಪಾದನೆಯಾಗಿದೆ. ಇದು ಒಂದು ದಿನದ ಲೆಕ್ಕ. ಇವತ್ತು ಹಗಲು ಐದು ಮಿಲಿಯನ್ ಯುನಿಟ್ ಉತ್ಪಾದನೆಯಾಗಿದೆ.‌ ರಾತ್ರಿ ಮತ್ತೆ ಅಷ್ಟೇ ಯುನಿಟ್ ಬೇಡಿಕೆ ಹುಬ್ಬಳ್ಳಿ ಹತ್ತಿರದ ನರೇಂದ್ರ ಗ್ರಿಡ್ ನಿಂದ ಬಂದಿದೆ.‌ ಇದು ಪ್ರತಿದಿನದ ಪ್ರಕ್ರಿಯೆ ‌. ಫೆಬ್ರವರಿ ,ಮಾರ್ಚ್, ಎಪ್ರಿಲ್, ಮೇ ತಿಂಗಳಲ್ಲಿ ಪ್ರತಿ ದಿನ ಹೆಚ್ಚು ಕಡಿಮೆ ಮಿಲಿಯನ್ ಗಟ್ಟಲೆ ಯುನಿಟ್ ಬೇಡಿಕೆ ಇರುತ್ತದೆ‌ .ಈ ಬೇಡಿಕೆಯನ್ನು ಕಾಳಿ ನದಿ ಜಲಾಶಯಗಳು ಪೂರೈಸುತ್ತಿವೆ. ಮಳೆಗಾಲದಲ್ಲಿ ಸಹಜವಾಗಿ ವಿದ್ಯುತ್ ಬೇಡಿಕೆ ಇಳಿಮುಖವಾಗಿದ್ದು, ಆ ದಿನಗಳಲ್ಲಿ ಪ್ರತಿದಿನ ಒಂದು ರಿಂದ ಮೂರು ಮಿಲಿಯನ್ ಯುನಿಟ್ ಬೇಡಿಕೆ ಇದ್ದೇ ಇರುತ್ತದೆ. ಕರ್ನಾಟಕ ಪವರ್ ಕಾರ್ಪೊರೇಷನ್ ಮಟ್ಟಿಗೆ ಕಾಳಿ ನದಿಯ ಅಣೆಕಟ್ಟುಗಳು ಚಿನ್ನದ ಮೊಟ್ಟೆ ಇಡುವ ಜಲಾಶಯಗಳಾಗಿವೆ. ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದರೂ, ಕಾಳಿ ಕಣಿವೆ ನೀರಿನಿಂದ ಸಹ್ಯಾದ್ರಿ ಕಣಿವೆ ಕಂಗೊಳಿಸುತ್ತಿದೆ.
….

ಉತ್ತರ ಕನ್ನಡ ಪ್ರತಿನಿಧಿ

Latest Indian news

Popular Stories