ಜಿಲ್ಲಾ ಪಂಚಾಯತ್ ನ 350.58 ಕೋಟಿ ರೂ. ವೆಚ್ಚದ ಕ್ರಿಯಾ ಯೋಜನೆಗೆ ಅನುಮೋದನೆ : ರಿತೇಶ್ ಕುಮಾರ್ ಸಿಂಗ್

ಪೋಟೋ : ಜಿ.ಪಂ.ಸಾಮಾನ್ಯ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಕ್ರಿಯಾಯೋಜನೆ ಮಂಡಿಸಿದರು.‌

ಕಾರವಾರ : ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ಗೆ 2024-25 ನೇ ಸಾಲಿನಲ್ಲಿ ಲಿಂಕ್ ಡಾಕ್ಯುಮೆಂಟ್ ಅಧೀನ ಇಲಾಖೆಗಳಿಗೆ ಹಂಚಿಕೆಯಾದ 350.58 ಕೋಟಿ ರೂ ಮೊತ್ತದ ಕ್ರಿಯಾಯೋಜನೆಗೆ ಜಿಲ್ಲಾ ಪಂಚಾಯತ್ ನ ಆಡಳಿತಾಧಿಕಾರಿಗಳು ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಗುರುವಾರ ನಡೆದ ಜಿಲ್ಲಾ ಪಂಚಾಯತ್ ನ ಸಾಮಾನ್ಯ ಸಭೆಯಲ್ಲಿ ಅನುಮೋದನೆ ನೀಡಿದರು.

2024-25 ನೇ ಸಾಲಿನಲ್ಲಿ ಜಿಲ್ಲಾ ಪಂಚಾಯತ್ ವತಿಯಿಂದ, ಅಧೀನ ಇಲಾಖೆಗಳಲ್ಲಿ 4011.05 ಲಕ್ಷ ರೂ ವೆಚ್ಚದಲ್ಲಿ ಫಲಾನುಭವಿ ಕಾರ್ಯಕ್ರಮಗಳು, 26810.88 ಲಕ್ಷ ರೂ ವೆಚ್ಚದಲ್ಲಿ ವೇತನ, ಹೊರಗುತ್ತಿಗೆ, ದಿನಗೂಲಿ ಸಿಬ್ಬಂದಿ ವೇತನ ಮತ್ತು ಕಚೇರಿ ವೆಚ್ಚ, 1421.99 ಲಕ್ಷ ರೂ ಮೊತ್ತದಲ್ಲಿ ವಿವಿಧ ಅಭಿವೃಧ್ದಿ ಕಾಮಗಾರಿಗಳು, ಹಾಗೂ 1014.13 ಲಕ್ಷ ರೂ ವೆಚ್ಚದಲ್ಲಿ ಇತರೇ ಕಾರ್ಯಕ್ರಮಗಳು ಸೇರಿದಂತೆ ಒಟ್ಟು 35058.05 ಲಕ್ಷ ರೂ ಗಳ ಕ್ರಿಯಾ ಯೋಜನೆಯನ್ನು ರೂಪಿಸಲಾಗಿದೆ ಎಂದರು.

ಈ ಕ್ರಿಯಾ ಯೋಜನೆಯ ಅನುಷ್ಠಾನ ಸಂದರ್ಭದಲ್ಲಿ ಫಲಾನುಭವಿಗಳಿಗೆ ನೆರವು ನಿಡುವಂತಹ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಆದ್ಯತೆ ನೀಡುವಂತೆ ತಿಳಿಸಿದ ಅವರು, ಸರ್ಕಾರಿ ಇಲಾಖೆಗಳ ಹೊಸ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಬದಲಾಗಿ, ಶಾಲೆ, ಅಂಗನವಾಡಿ, ಆಸ್ಪತೆ ಮತ್ತು ಹಾಸ್ಟೆಲ್ ಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಹೆಚ್ಚಿನ ಒತ್ತು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕ್ರಿಯಾ ಯೋಜನೆಯಲ್ಲಿ ರೂಪಿಸಿರುವ ಎಲ್ಲಾ ಕಾರ್ಯಕ್ರಮಗಳನ್ನು, ನಿಗಧಿತ ಅವಧಿಯೊಳಗೆ ಪೂರ್ಣಗೊಳಿಸಿ, ಯೋಜನೆಯ ಸಂಪೂರ್ಣ ಗುರಿ ಸಾಧಿಸುವಂತೆ ಸೂಚನೆ ನೀಡಿದರು.

ಸಭೆಯಲ್ಲಿ ಕರ್ನಾಟಕ ಮಾರ್ಕೆಟಿಂಗ್ ಕನ್ಸಲ್ಟೆಂಟ್ ಅಂಡ್ ಏಜೆನ್ಸಿಸ್ ನ ಅಧ್ಯಕ್ಷ ಹಾಗೂ ಶಾಸಕ ಸತೀಶ್ ಸೈಲ್, ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕುಮಾರ್ ಕಾಂದೂ ಹಾಗೂ ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
……….

Latest Indian news

Popular Stories