‘ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ರಾಸಾಯನಿಕ ಬಳಕೆ ಕುರಿತು ವ್ಯಾಪಕವಾಗಿ ಪರಿಶೀಲಿಸಿ’ : ಡಿ.ಸಿ. ಗಂಗೂಬಾಯಿ

ಕಾರವಾರ : ಜಿಲ್ಲೆಯಲ್ಲಿನ ಆಹಾರ ತಯಾರಿಕಾ ಘಟಕಗಳು, ಬೀದಿ ಬದಿ ವ್ಯಾಪಾರಿಗಳು ತಯಾರಿಸುವ ಆಹಾರ ಪದಾರ್ಥಗಳಲ್ಲಿ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ನಿಷೇಧಿತ ರಾಸಾಯನಿಕ ಬಳಕೆ, ಬಣ್ಣಗಳ ಬಳಕೆ ಮಾಡುತ್ತಿರುವ ಕುರಿತಂತೆ ಪರಿಶೀಲಿಸಿ,ಅವುಗಳ ಗುಣಮಟ್ಟದ ಮಾದರಿಗಳನ್ನು ಸಂಗ್ರಹಿಸಿ, ವ್ಯಾಪಕ ರೀತಿಯಲ್ಲಿ ಪರಿಶೀಲನೆ ನಡೆಸುವಂತೆ ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಸೂಚನೆ ನೀಡಿದರು.
ಅವರು ಶನಿವಾರ, ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿಗಳ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಾರ್ವಜನಿಕರು ತಮ್ಮ ಮನೆಯಿಂದ ಹೊರಗಡೆ, ವಿವಿಧ ಆಹಾರ ಪದಾರ್ಥಗಳನ್ನು ಸಿದ್ದಪಡಿಸುವ ಹಾಗೂ ಮಾರಾಟದ ಸ್ಥಳಗಳಲ್ಲಿ ಸೇವಿಸುವ ಆಹಾರ ಪದಾರ್ಥಗಳಲ್ಲಿ ಕೃತಕ ಬಣ್ಣ ಮತ್ತು ರುಚಿ ಹೆಚ್ಚಿಸುವ ನಿಷೇಧಿತ ಮತ್ತು ಅಪಾಯಕಾರಿ ರಾಸಾಯನಿಕಗಳ ಬಳಕೆ ನಡೆಯುತ್ತಿರುವ ಕುರಿತಂತೆ, ಆಹಾರ ತಯಾರಿಕಾ ಸ್ಥಳಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಆಹಾರದ ಮಾದರಿಗಳನ್ನು ಸಂಗ್ರಹಿಸಿ, ಪ್ರಯೋಗಾಲಯದ ಮೂಲಕ ವರದಿ ಸಂಗ್ರಹಿಸಿ, ತಪ್ಪಿತಸ್ಥರ ವಿರುದ್ದ ಕಾನೂನಿನಂತೆ ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಸಾರ್ವಜನಿಕ ಸ್ಥಳಗಳಲ್ಲಿ ಮಾತ್ರವಲ್ಲದೇ, ಜಿಲ್ಲೆಯ ವಿವಿಧ ಸರ್ಕಾರಿ ಹಾಸ್ಟೆಲ್ ಗಳಲ್ಲಿ ವಿದ್ಯಾರ್ಥಿಗಳಿಗೆ ಸಿದ್ದಪಡಿಸುವ ಆಹಾರ ಪದಾರ್ಥಗಳ ಗುಣಮಟ್ಟವನ್ನು ಕೂಡ ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿದರು.

ತಂಬಾಕು ಉತ್ಪನ್ನಗಳ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ತಂಬಾಕು ಉತ್ಪನ್ನಗಳ ಮಾರಾಟ ಸ್ಥಳಗಳ ಮೇಲೆ ಅನಿರೀಕ್ಷಿತ ದಾಳಿಗಳನ್ನು ನಡೆಸುವಂತೆ ಮತ್ತು ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವವರಿಂದ ದಂಡ ವಸೂಲಿ ಮಾಡುವಂತೆ ತಿಳಿಸಿದರು.

ಕೋಟ್ಪಾ ಅಡಿಯಲ್ಲಿ 954 ಪ್ರಕರಣ ದಾಖಲು :
ಜಿಲ್ಲೆಯಲ್ಲಿ ಏಪ್ರಿಲ್ 23 ರಿಂದ ಮಾರ್ಚ್ 24 ರ ವರೆಗೆ ಕೋಟ್ಪಾ ಅಡಿಯಲ್ಲಿ 954 ಪ್ರಕರಣಗಳನ್ನು ದಾಖಲಿಸಿದ್ದು, ರೂ. 1,48,290 ದಂಡ ವಸೂಲಿ ಮಾಡಲಾಗಿದೆ ಆದರೂ ಸಹ ತಂಬಾಕು ಉತ್ಪನ್ನಗಳ ಅನಧಿಕೃತ ಮಾರಾಟ ಕಡಿಮೆಯಗಿಲ್ಲ ಗ್ರಾಮೀಣ ಪ್ರದೇಶದಲ್ಲಿ ಕೂಡ ಹೆಚ್ಚಿನ ಪ್ರಮಾಣದಲ್ಲಿ ತಂಬಾಕು ಉತ್ಪನ್ನಗಳ ಅನಧೀಕೃತ ಮಾರಾಟ ನಡೆಯುತ್ತಿದ್ದು, ಆ ಪ್ರದೇಶದಲ್ಲೂ ದಾಳಿಗಳನ್ನು ನಡೆಸಿ, ಎಚ್ಚರ ಮೂಡಿಸಿ ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನೀರಜ್, , ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ರಮೇಶ್ ರಾವ್ ಉಪಸ್ಥಿತರಿದ್ದರು.
……

Latest Indian news

Popular Stories