ಕಾರವಾರ: ಕಾರವಾರ ಗ್ರಾಮೀಣ ವ್ಯಾಪ್ತಿಯ ಶಿರವಾಡ ರೈಲ್ವೆ ಸ್ಟೇಶನ್ ಸಮೀಪದ ಅರಣ್ಯದಲ್ಲಿ ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಮಹಿಳೆಯ ಶವದ ಸಮೀಪ ಆಕೆಯ ಬ್ಯಾಗ್ ಹಾಗೂ ಅದರಲ್ಲಿದ್ದ ಆಧಾರ್ ಕಾರ್ಡ ಸಹಾಯದಿಂದ ಮೃತ ಮಹಿಳೆಯ ಗುರುತು ಪತ್ತೆಯಾಗಿದೆ ಎಂದು ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯ ಮೂಲಗಳು ತಿಳಿಸಿವೆ.
ಸುಟ್ಟ ಸ್ಥಿತಿಯಲ್ಲಿ ಸಿಕ್ಕ ಮಹಿಳೆ ಕಿನ್ನರ ಗ್ರಾಮದ ಸಂಜನಾ ತಳೇಕರ್ (36) ಎಂದು ತಿಳಿದು ಬಂದಿದೆ. ಮಹಿಳೆಯ ಸಾವು ಹೇಗೆ ನಡೆದಿರಬಹುದೆಂದು ಪೊಲೀಸರು ಶ್ವಾನ ದಳದೊಂದಿಗೆ ಆಗಮಿಸಿ ತನಿಖೆ ಪ್ರಾರಂಭಿಸಿದ್ದಾರೆ.
ಬೆಂಕಿಯಿಂದ ಮಹಿಳೆಯ ಬಟ್ಟೆ, ತಲೆ ಕೂದಲು ಹಾಗೂ ಬೆನ್ನಿನ ಭಾಗದಲ್ಲಿ ಸುಟ್ಟಿದೆ. ಘಟನಾ ಸ್ಥಳಕ್ಕೆ ಕಾರವಾರ ಗ್ರಾಮೀಣ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಧಾರ್ ಕಾರ್ಡ್ ಮೂಲಕ ಮೃತಳ ಗಂಡನನ್ನು ಪೊಲೀಸರು ಸಂಪರ್ಕಿಸಿದ್ದಾರೆ. ಸಂಜನಾ ಪತಿ ಗಜಾನನ ತಳೆಕರ ಎಸ್ .ಆರ್.ಎಸ್. ಟ್ರಾವೆಲ್ಸನಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಮೃತದೇಹವನ್ನು ಮೆಡಿಕಲ್ ಕಾಲೇಜು ಅಧೀನದ ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ರವಾನೆ ಮಾಡಲಾಗಿದ್ದು, ಗಜಾನನ ತಳೆಕರನನ್ನು ವಶಕ್ಕೆ ಪಡೆದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
…..