ಜಿಲ್ಲೆಯ ಮಾಜಿ ಸೈನಿಕರು, ಅಶಕ್ತರಿಗೆ ಭೂಮಿ ಒದಗಿಸಲು ಕ್ರಮ: ಜಿಲ್ಲಾಧಿಕಾರಿ

ಕಾರವಾರ : ಜಿಲ್ಲೆಯಲ್ಲಿನ ಮಾಜಿ ಯೋಧರು, ಅಶಕ್ತರು ಮತ್ತು ವಸತಿಹೀನರಿಗೆ ಜೀವನ ನಿರ್ವಹಣೆಗೆ ಭೂಮಿ ಒದಗಿಸುವ ಕುರಿತಂತೆ ಜಿಲ್ಲೆಯ ಎಲ್ಲಾ ತಾಲುಕುಗಳ ತಹಸೀಲ್ದಾರ್ ಗಳು ತಮ್ಮ ವ್ಯಾಪ್ತಿಯಲ್ಲಿ ಲಭ್ಯವಿರುವ ಖಾಲಿ ಜಮೀನಿನ ಕುರಿತು ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಸೂಚಿಸಿದರು.

ಅವರು ಶುಕ್ರವಾರ, ಜಿಲ್ಲೆಯ ಎಲ್ಲಾ ತಹಸೀಲ್ದಾರ್ ಗಳೊಂದಿಗೆ ನಡೆದ, ವಿಡಿಯೋ ಕಾನ್ಫರೆನ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಪ್ರತೀ ವರ್ಷ ಜುಲೈ 1 ಕ್ಕೆ ಜಿಲ್ಲೆಯಲ್ಲಿ ಲಭ್ಯವಿರುವ ಖಾಲಿ ಜಮೀನಿನ ಕುರಿತಂತೆ ಘೋಷಣೇ ಮಾಡುವುದು ಅತ್ಯಗತ್ಯವಾಗಿದ್ದು, ಇದರಿಂದಾಗಿ ಲಭ್ಯವಾಗುವ ಖಾಲಿ ಭೂಮಿಯನ್ನು, ದೇಶ ಸೇವೆಗಾಗಿ ಜೀವನ ಮುಡಿಪಾಗಿಟ್ಟು ನಿವೃತ್ತರಾದ ಮತ್ತು ವಿವಿಧ ಕಾರ್ಯಚರಣೆಗಳಲ್ಲಿ ಭಾಗವಹಿಸಿ ವಿಕಲಚೇತನರಾದ ಜಿಲ್ಲೆಯ ಮಾಜಿ ಸೈನಿಕರು ಹಾಗೂ ಜಿಲ್ಲೆಯಲ್ಲಿನ ಅಶಕ್ತರು ಮತ್ತು ವಸತಿಹೀನರಿಗೆ ಅವರು ಕೋರಿಕಗೆ ತಕ್ಕಂತೆ ಅಲ್ಲವಾದರೂ ಕನಿಷ್ಠ ಅವಶ್ಯಕತೆ ಪೂರೈಸಿಕೊಳ್ಳಲು ಅಗತ್ಯವಿರುವ ಪ್ರಮಾಣದ ಭೂಮಿ ನೀಡಲು ಸಾದ್ಯವಾಗುತ್ತದೆ.

ಆದ್ದರಿಂದ ಜಿಲ್ಲೆಯ ಎಲ್ಲಾ ತಹಸೀಲ್ದಾರ್ ಗಳು ಜುಲೈ 1 ರೊಳಗೆ ತಮ್ಮ ವ್ಯಾಪ್ತಿಯಲ್ಲಿ ಲಭ್ಯವಿರುವ ಖಾಲಿ ಜಮೀನಿನ ಘೋಷಣೆ ಮಾಡುವಂತೆ ತಿಳಿಸಿದರು.
ತಹಸೀಲ್ದಾರ್‌ಗಳು ತಮ್ಮ ವ್ಯಾಪ್ತಿಯಲ್ಲಿನ ಖಾಲಿ ಇರುವ ಸರಕಾರಿ ಭೂಮಿಯನ್ನು ಸರಕಾರಿ ಉದ್ದೇಶಗಳಿಗೆ ಅಗತ್ಯವಿದ್ದಲ್ಲಿ , ಆ ಯೋಜನೆಗೆ ಅಗತ್ಯವಿರುವ ಪ್ರಮಾಣದ ಭೂಮಿಯನ್ನು ಕಾಯ್ದಿರಿಸಿ, ಉಳಿದ ಭೂಮಿಯನ್ನು ಘೋಷಣೆ ಮಾಡುವಂತೆ ಹಾಗೂ ಯಾವುದೇ ಕಾರಣಕ್ಕೂ ಲಭ್ಯ ಜಮೀನಿನ ಮಾಹಿತಿಯನ್ನು ಮರೆ ಮಾಚದಂತೆ ಸೂಚಿಸಿದರು.

ಜಿಲ್ಲೆಯಲ್ಲಿ ಶೇ.80 ರಷ್ಟು ಅರಣ್ಯ ಪ್ರದೇಶವಿದ್ದು, ಶೇ.20 ರಷ್ಟು ಮಾತ್ರ ಭೂ ಪ್ರದೇಶವಿದ್ದು, ಇರುವ ಭೂ ಪ್ರದೇಶವನ್ನು ಅರ್ಹರಿಗೆ , ನ್ಯಾಯಯುತವಾಗಿ ,ಸಾಧ್ಯವಾದಷ್ಟು ಪ್ರಮಾಣದಲ್ಲಿ ಹಂಚಿಕೆ ಮಾಡುವಲ್ಲಿ ಹೆಚ್ಚಿನ ಮುತುವರ್ಜಿ ವಹಿಸುವಂತೆ ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ್ ಹಾಗೂ ಜಿಲ್ಲೆಯ ಎಲ್ಲಾ ತಹಸೀಲ್ದಾರ್ ಗಳು ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರಿದ್ದರು.
…….

Latest Indian news

Popular Stories