ಕೃಷಿ ವಿಶೇಷ | ಇಸ್ರೇಲ್ ಮಾದರಿ ಕೃಷಿಯಲ್ಲಿ ಕಲ್ಲಂಗಡಿ ಬೆಳೆದ ರೈತ ರಾಮಚಂದ್ರ

ಕಾರವಾರ : ಕಾರವಾರ ತಾಲ್ಲೂಕಿನಲ್ಲಿ ಕೃಷಿ ಕೆಲಸದಲ್ಲಿ ತೊಡಗುವುದು ವಿರಳ . ಹಾಗಾಗಿ
ನೂರಾರು ಎಕರೆ ಕೃಷಿ ಭೂಮಿ ಪಾಳುಬಿದ್ದುಕೊಂಡಿದೆ. ಜಮೀನಿದ್ದರೂ ಕೃಷಿ ಮಾಡಲು ನಿರಾಸಕ್ತಿ ಹೆಚ್ಚು . ಆದರೆ, ಹೋಟೆಗಾಳಿ ಗ್ರಾಮದ ರೈತರೊಬ್ಬರು ಪಾಳುಬಿದ್ದ ಜಮೀನನ್ನು ಗೇಣಿ ಪಡೆದು ಇಸ್ರೆಲ್ ಮಾದರಿಯ ಪದ್ಧತಿಯಲ್ಲಿ ಕಲ್ಲಂಗಡಿ ಬೆಳೆದಿದ್ದಾರೆ. ಬಿರು ಬೇಸಿಗೆಯಲ್ಲೂ ಭೂಮಿತಾಯಿ
ಹಸಿರಿನಿಂದ ಕಂಗೊಳಿಸುವಂತೆ ಮಾಡಿದ್ದಾರೆ‌.
ಕಲ್ಲಂಗಡಿ ಬೆಳೆಗೆ ಇಸ್ರೇಲ್ ಪದ್ಧತಿಯನ್ನು ಅಳವಡಿಸಿಕೊಂಡಿರುವ ರಾಮಚಂದ್ರ ಕಲ್ಲಂಗಡಿ ಸಸಿಗಳಿಗೆ ಪ್ಲಾಸ್ಟಿಕ್ ಮಲ್ಚಿಂಗ್ ಹೊದಿಸುವ ಜತೆಗೆ ಹನಿ ನೀರಾವರಿ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಪಂಪ್ ಮೂಲಕ ನೀರಿನ ಜತೆ ಗೊಬ್ಬರ ಹಾಯಿಸುತ್ತಾರೆ. ಇದರಿಂದ ನೀರು ಹೆಚ್ಚು ಬೇಕಿಲ್ಲ. ಕೆಲಸ ಸಹ ಕಡಿಮೆಯಾಗಲಿದೆ. ಅಲ್ಲದೆ, ಬೆಳೆಗೆ ರೋಗಗಳೂ ಕಡಿಮೆ ಎಂಬುದು ಅವರ ಅನುಭವ.

IMG 20240515 WA0049 Uttara Kannada, INFORAMATION

ರಾಮಚಂದ್ರ ಕೊಳಂಬಕರ ಪಾಳುಬಿದ್ದ ಭೂಮಿಗೆ ಹೊಸ ಜೀವ ಕೊಡುತ್ತಿರುವ ರೈತ. ಮೀನು ವ್ಯಾಪಾರಿಯಾಗಿರುವ ಅವರು ವರ್ಷದ ಆರು ತಿಂಗಳನ್ನು ಕೃಷಿಗೆ ಮೀಸಲಿಡುತ್ತಿದ್ದಾರೆ. ಮುಡಗೇರಿ, ಹೋಟೆಗಾಳಿ ಗ್ರಾಮದ ಹತ್ತಾರು ಎಕರೆ ಹೊಲದಲ್ಲಿ ಕಲ್ಲಂಗಡಿ ಬೆಳೆದು, ಇತರರನ್ನೂ ಕೃಷಿಯತ್ತ ಕರೆತರಲು ಪ್ರಯತ್ನಿಸುತ್ತಿದ್ದಾರೆ.

ಕಳೆದ ಸುಮಾರು ಒಂಬತ್ತು ವರ್ಷದಿಂದ ಬೇರೆಯವರ ಜಮೀನನ್ನು ಗೇಣಿಗೆ ಪಡೆದು ಅಲ್ಲಿ ವಾರ್ಷಿಕವಾಗಿ ಹತ್ತಾರು ಟನ್ ಕಲ್ಲಂಗಡಿ ಬೆಳೆದು ಮಾರಾಟ ಮಾಡುತ್ತಿದ್ದಾರೆ. ಕೃಷಿಯಿಂದ ಬರುವ ಆದಾಯವನ್ನು ಕೃಷಿಗೆ ಮರು ವಿನಿಯೋಗಿಸುವುದು ಅವರ ಜೀವನ ಪ್ರೀತಿ .

ಹೋಟೆಗಾಳಿ ಮತ್ತು ಸುತ್ತಮುತ್ತಲ ಗ್ರಾಮದಲ್ಲಿ ಮೀನು ವ್ಯಾಪಾರ ನಡೆಸುವುದು ಮೂಲ ಉದ್ಯೋಗವಾಗಿದೆ. ಕೆಲ ವರ್ಷಗಳ ಹಿಂದೆ ಪಾಳು ಬಿದ್ದ ಗದ್ದೆಗಳನ್ನು ನೋಡಿ ಬೇಸರವಾಗುತ್ತಿತ್ತು. ಅಲ್ಲಿ ಕೃಷಿ ಚಟುವಟಿಕೆ ನಡೆಸಬೇಕು ಎಂಬ ಆಸೆ ಉಂಟಾಗಿತ್ತು. ಮುಡಗೇರಿಯಲ್ಲಿ ಪಾಳುಬಿದ್ದ ಜಮೀನಿನ ಮಾಲೀಕರನ್ನು ಸಂಪರ್ಕಿಸಿ ಕೃಷಿ ಮಾಡುವ ಬಯಕೆ ತೋಡಿಕೊಂಡೆ. ಗೇಣಿ ಆಧಾರದಲ್ಲಿ ಜಾಗ ಪಡೆದು ಕಲ್ಲಂಗಡಿ ಬೆಳೆಯಲಾರಂಭಿಸಿದೆ ಎಂದು ರಾಮಚಂದ್ರ ಕೊಳಂಬಕರ ತಮ್ಮ ಕೃಷಿ ಅನುಭವ ವಿವರಿಸಿದರು.

ಪ್ರತಿ ವರ್ಷ ಮಳೆಗಾಲ ಮತ್ತು ಬೇಸಿಗೆ ಕಾಲದಲ್ಲಿ ಕಲ್ಲಂಗಡಿ ಬೆಳೆಯುತ್ತಿದ್ದೇನೆ. ಆಗಸ್ಟ್ ಬಳಿಕ ಹಾಗೂ ಫೆಬ್ರವರಿ ಬಳಿಕ ಎರಡು ಅವಧಿಯಲ್ಲಿ ಪ್ರತಿ ಮೃಉ ತಿಂಗಳು ಕೃಷಿ ಚಟುವಟಿಕೆ ನಡೆಯುತ್ತದೆ. ಹವಾಮಾನ ಸರಿಯಾಗಿದ್ದು, ಕಲ್ಲಂಗಡಿ ಬಳ್ಳಿಗೆ ರೋಗಬಾಧೆ ಕಾಡದಿದ್ದರೆ ಉತ್ತಮ ಫಸಲು ಸಿಗುತ್ತದೆ. ಜತೆಗೆ ಒಳ್ಳೆಯ ದರಕ್ಕೆ ಹಣ್ಣು ಮಾರಾಟವಾಗುತ್ತದೆ. ಕೇರಳ, ಗೋವಾ ಸೇರಿದಂತೆ ವಿವಿಧೆಡೆಯ ಮಾರುಕಟ್ಟೆಗೆ ಹಣ್ಣು ರವಾನೆಯಾಗುತ್ತದೆ. ಸ್ಥಳೀಯವಾಗಿಯೂ ಸಾಕಷ್ಟು ಬೇಡಿಕೆ ಇದೆ ಎಂದು ನುಡಿದರು.

ಮುಡಗೇರಿ ಬಳಿಕ ಕಳೆದ ವರ್ಷದಿಂದ ಹೋಟೆಗಾಳಿ ಗ್ರಾಮದಲ್ಲಿಯೂ ಜಾಗ ಗೇಣಿಗೆ ಪಡೆದು ಕಲ್ಲಂಗಡಿ ಬೆಳೆಯಲಾರಂಭಿಸಿದ್ದೇನೆ. ಪ್ರತಿ ಟನ್‍ಗೆ ರೂ. 11 ರಿಂದ 13 ಸಾವಿರ ದರ ಸಿಗುತ್ತಿದೆ. ಬಂದ ಆದಾಯದಲ್ಲಿ ಕೃಷಿ ಚಟುವಟಿಕೆಗೆ ಹೆಚ್ಚು ವ್ಯಯವಾಗುತ್ತದೆ. ಉಳಿದ ಲಾಭಾಂಶದಲ್ಲಿಯೂ ಬಹುಪಾಲು ಮುಂದಿನ ವರ್ಷದ ಕೃಷಿ ಚಟುವಟಿಕೆಗೆ ಮೀಸಲಿಟ್ಟುಕೊಳ್ಳುತ್ತೇನೆ ಎನ್ನುತ್ತಾರೆ ರೈತ ರಾಮಚಂದ್ರ.

……….

Latest Indian news

Popular Stories