ಉಪ ಲೋಕಾಯುಕ್ತರ ನೇಮಕದ ಜೊತೆಗೆ ಮತ್ತಿಬ್ಬರು ಉಪ ಲೋಕಾಯುಕ್ತ ಹುದ್ದೆ ಸೃಷ್ಟಿಸಿದರೆ ಒಳ್ಳೆಯದು : ಉಪ ಲೋಕಾಯುಕ್ತ ಫಣೀಂದ್ರ ಅಭಿಮತ

ಕಾರವಾರ: ಈಗ ಖಾಲಿ ಇರುವ ಉಪಲೋಕಾಯುಕ್ತ -೨ ಹುದ್ದೆಯ ಜೊತೆಗೆ ಮತ್ತಿಬ್ಬರು ಉಪ ಲೋಕಾಯುಕ್ತರನ್ನು ಸರ್ಕಾರ ನೇಮಕ ಮಾಡಿದರೆ ಒಳ್ಳೆಯದು ಎಂದು ಉಪಲೋಕಾಯುಕ್ತರಾದ ನ್ಯಾಯಮೂರ್ತಿ ಫಣೀಂದ್ರ ಅಭಿಪ್ರಾಯಪಟ್ಟರು‌.

ಕಾರವಾರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಬೆಂಗಳೂರು ಗ್ರಾಮಾಂತರ ಭಾಗಕ್ಕೆ ಒಬ್ಬ ಉಪ ಲೋಕಾಯುಕ್ತರು ಬೇಕು. ಬೆಂಗಳೂರು ಗ್ರಾಮಾಂತರ ‌, ಕೋಲಾರ,‌ ರಾಮನಗರದಿಂದ ದೂರುಗಳು ಹೆಚ್ಚು. ಗುಲ್ಬರ್ಗಾ ವಿಭಾಗ ಮತ್ತು ಧಾರವಾಡ ಹುಬ್ಬಳ್ಳಿ ವಿಭಾಗಕ್ಕೆ ಒಬ್ಬೊಬ್ಬರು ಉಪ ಲೋಕಾಯುಕ್ತರು ಇದ್ದರೆ ಒಳ್ಳೆಯದು. ಮುಖ್ಯ ಲೋಕಾಯುಕ್ತರ ಜೊತೆಗೆ ಒಟ್ಟು ನಾಲ್ಕು ಉಪ ಲೋಕಾಯುಕ್ತರು ಇದ್ದರೆ , ಈ ಸಂಸ್ಥೆಗೆ ಇನ್ನಷ್ಟು ಬಲ ತುಂಬಬಹುದು ಎಂದರು‌.

ಕರ್ನಾಟಕದಲ್ಲಿ ಲೋಕಾಯುಕ್ತ ಉತ್ತಮವಾಗಿದೆ‌ . ಇತರೆ ರಾಜ್ಯಗಳ ಲೋಕಾಯುಕ್ತ ಸಂಸ್ಥೆಗಳಿಗಿಂತ ಕರ್ನಾಟಕದ‌ ಲೋಕಾಯುಕ್ತದ ತೀರ್ಪುಗಳನ್ನು ರಾಜ್ಯ ಸರ್ಕಾರ ಶೇ. 90 ರಷ್ಟು ಅನುಷ್ಠಾನಕ್ಕೆ ತರುತ್ತಿದೆ ಎಂದರು. ಲೋಕಾಯುಕ್ತಕ್ಕೆ ಪ್ರತ್ಯೇಕ ಸಿಬ್ಬಂದಿ ಇದೆ. ಪ್ರತಿ ಜಿಲ್ಲೆಯಲ್ಲಿ ಲೋಕಾಯುಕ್ತ ಎಸ್ಪಿ , ಇನ್ಸ್ಪೆಕ್ಟರ್ ದರ್ಜೆಯ ವ್ಯವಸ್ಥೆ ಇದೆ ಎಂದು ನ್ಯಾಯಮೂರ್ತಿ ಫಣೀಂದ್ರ ಹೇಳಿದರು‌ .

ಉತ್ತರ ಕನ್ನಡ ಜಿಲ್ಲೆಯ ಅನುಭವಗಳನ್ನು ಹಂಚಿಕೊಂಡ ಅವರು ಈ ಜಿಲ್ಲೆಯಲ್ಲಿ ದೂರುಗಳು ಕಡಿಮೆ. ಬಂದ ದೂರುಗಳಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಕಾಮಗಾರಿ ಮಾಡದೆ ಹಣ ಲಪಾಟಿಯಿಸಿರುವುದು, ಕಳಪೆ ಕಾಮಗಾರಿ , ಒಂದೇ ಕೆಲಸಕ್ಕೆ ಎರಡು ಬಿಲ್ ಹಾಕಿರುವ ದೂರುಗಳೇ ಹೆಚ್ಚು ಹಾಗೂ ಒತ್ತುವರಿ ಪ್ರಕರಣ , ಖಾತಾ ಬದಲಾವಣೆ ವಿಳಂಬ ಮಾಡುವುದು, ಯಾರದೋ ಆಸ್ತಿಗೆ ಇನ್ನಾರದೂ ಹೆಸರು ಬರೆಯುವ ಪ್ರಕರಣದ ದೂರುಗಳು ಹೆಚ್ಚಾಗಿದ್ದವು ಎಂದರು.
ಜಿಲ್ಲೆಯಿಂದ ಲೋಕಾಯುಕ್ತರ ಎದುರು 199 ಪ್ರಕರಣಗಳಿವೆ‌ . ಕಳೆದ ಮೂರು ದಿನಗಳಲ್ಲಿ ಬಂದ ದೂರುಗಳು 120. ಇದರಲ್ಲಿ ನಮ್ಮ ವ್ಯಾಪ್ತಿಗೆ ಬರುವ 33 ಪ್ರಕರಣ ದಾಖಲಿಸಿಕೊಂಡಿದ್ದೇವೆ. 17 ಪ್ರಕರಣ ಇತ್ಯರ್ಥವಾಗಿವೆ. ಕೆಲ ಪ್ರಕರಣ ಗಳಲ್ಲಿ ವಾರ ಹದಿನೈದು ದಿನದ ಗಡುವು ನೀಡಿದ್ದೇವೆ. 10 ಪ್ರಕರಣ ಜಿಲ್ಲಾಧಿಕಾರಿಗೆ ವರ್ಗಾಯಿಸಿದ್ದೇವೆ, 11 ಪ್ರಕರಣಗಳನ್ನು ಕಾನೂನು ಸೇವಾ ಪ್ರಾಧಿಕಾರಕ್ಕೆ ನೀಡಿದ್ದೇವೆ. ಸಿಇಒ ಅವರಿಗೆ 3 , ಪೊಲೀಸ್ ಪ್ರಾಧಿಕಾರಕ್ಕೆ ಬರುವ 7 ಪ್ರಕರಣ ಗಳನ್ನು ಅವರಿಗೆ ನೀಡಿದ್ದೇವೆ ಎಂದರು.

ಕರ್ನಾಟಕ ಲೋಕಾಯುಕ್ತದ ಎದುರು 16901 ಪ್ರಕರಣಗಳಿವೆ. ಲೋಕಾಯುಕ್ತ ನ್ಯಾಯಾಧೀಶರ ಎದುರು 5098, ಉಪ ಲೋಕಾಯುಕ್ತ -1 ರ ಬಳಿ 6221, ಉಪ ಲೋಕಾಯುಕ್ತ -2 ಬಳಿ 5582 ಪ್ರಕರಣಗಳಿವೆ. ದಿನಕ್ಕೆ 250 ದೂರು ಅರ್ಜಿ ಪರಿಶೀಲಿಸಬೇಕು. ಜಿಲ್ಲೆಗಳ ಪ್ರವಾಸ ಸಹ ಮಾಡಬೇಕು‌ .ಈಗಾಗಲೇ 13 ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದು, ಆಡಳಿತ ಯಂತ್ರ ಚುರುಕುಗೊಳಿಸಲು ಹಾಗೂ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುಲು ಸಹಾಯಕ ಎಂದು ನ್ಯಾಯಮೂರ್ತಿ ಫಣೀಂದ್ರ ಅಭಿಪ್ರಾಯಪಟ್ಟರು. ಅವರ ಜೊತೆ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರೇಣುಕಾ ರಾಯ್ಕರ್, ಉಪ ಲೋಕಾಯುಕ್ತರ ಕಾರ್ಯದರ್ಶಿ ಕಿರಣ್ ಪಾಟೀಲ್ ಇದ್ದರು.
….

Latest Indian news

Popular Stories