ಎಲ್ಲರ ಮನ, ಮನೆಗಳಲ್ಲಿ ಸಂವಿಧಾನದ ಜಾಗೃತಿ ಮೂಡಬೇಕು

ವಿಶೇಷ ಲೇಖನ

ಗಂಗೂಬಾಯಿ ಮಾನಕರ

(ಲೇಖಕರು : ಜಿಲ್ಲಾಧಿಕಾರಿಗಳು, ಉತ್ತರ ಕನ್ನಡ ಜಿಲ್ಲೆ.)

ಕಾರವಾರ : ನಮ್ಮ ಭಾರತ ಸಂವಿಧಾನ, ನಮ್ಮ ಹೆಮ್ಮೆಯ ಗೌರವದ ಸಂವಿಧಾನ . ಇಡೀ ವಿಶ್ವದ ಅತ್ಯಂತ ಬೃಹತ್ ಲಿಖಿತ ಸಂವಿಧಾನ,. ವಿಶ್ವದಲ್ಲಿಯೇ ಅತೀ ಉತ್ತಮವಾದ ಸಂವಿಧಾನ ಹೊಂದಿರುವ ನಾವು , ನಮ್ಮ ಸಂವಿಧಾನದ ಮೂಲ ತತ್ವಗಳನ್ನು ಸಂಪೂರ್ಣವಾಗಿ ತಿಳಿದು, ಅವುಗಳನ್ನು ಪ್ರತಿಯೊಬ್ಬರ ಮನೆ ಮನಗಳಲ್ಲಿ ಅಳವಡಿಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ.

ನಮ್ಮ ದೇಶದ ಸಂವಿಧಾನ ಜಾರಿಗೆ ಬಂದು 75 ವರ್ಷಗಳಾಗಿವೆ. ಪ್ರಪಂಚದ ಎಲ್ಲಾ ಸಂವಿಧಾನಗಳನ್ನು ಆಧ್ಯಯನ ಮಾಡಿ, ನಮ್ಮ ದೇಶದ ಇತಿಹಾಸ, ಪರಂಪರೆ, ಧಾರ್ಮಿಕತೆ ಸೇರಿದಂತೆ ಪ್ರತಿಯೊಂದನ್ನೂ ರಕ್ಷಿಸುವ , ದೇಶದ ಪ್ರತಿಯೊಬ್ಬ ವ್ಯಕಿಗೂ ಗೌರವ, ಸ್ಥಾನಮಾನ, ಸಮಾನತೆ ದೊರಕಿಸುವ ಮತ್ತು ದೇಶದ ಏಕತೆ ಹಾಗೂ ಸಮಗ್ರತೆಯ ಉದ್ದೇಶದಿಂದ ಹಲವು ವರ್ಷಗಳ ಕಾಲ ಅಧ್ಯಯನ ಮಾಡಿ, ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನೇತೃತ್ವದಲ್ಲಿ ಜಾರಿಗೆ ಬಂದ ನಮ್ಮ ಸಂವಿಧಾನವನ್ನು ಅದರ ಪೀಠಿಕೆಯಲ್ಲಿ ತಿಳಿಸಿರುವಂತೆ ನಮಗೆ ನಾವೇ ಅಂಗೀಕರಿಸಿಕೊಂಡು,ಶಾಸನವಾಗಿ ವಿಧಿಸಿಕೊಂಡಿದ್ದೇವೆ.
ನಮ್ಮ ಸಂವಿಧಾನ ನಮಗೆ ನೀಡಿರುವ ಹಕ್ಕು ಮತ್ತು ಕರ್ತವ್ಯಗಳನ್ನು ಪ್ರತಿಯೊಬ್ಬ ನಾಗರೀಕರು ಅರಿತು ಈ ಬಗ್ಗೆ ಸದಾ ಜಾಗೃತಿ ಹೊಂದಬೇಕು. ಪ್ರಸ್ತುತ ರಾಜ್ಯ ಸರ್ಕಾರ ಸಂವಿಧಾನ ಜಾಗೃತಿ ಕುರಿತ ಜಾಥಾವನ್ನು ರಾಜ್ಯಾದ್ಯಂತ ಆಯೋಜಿಸಿದ್ದು, ನಮ್ಮ ಜಿಲ್ಲೆಯಲ್ಲಿಯೂ ಸಹ ಈಗಾಗಲೇ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ಜಿಲ್ಲೆಯ ಪ್ರತಿಯೊಂದು ಗ್ರಾಮಗಳಿಗೂ ಸಂಚರಿಸುವ ಈ ಜಾಥಾದ ಮೂಲಕ ಜಿಲ್ಲೆಯ ಪ್ರತಿಯೊಂದು ಮನೆ ಮತ್ತು ಪ್ರತಿ ಸಾರ್ವಜನಿಕರ ಮನಗಳಲ್ಲಿ ಸಂವಿಧಾನದ ಮಹತ್ವದ ಕುರಿತು ವ್ಯಾಪಕ ಅರಿವು ಮೂಡಿಸಲಾಗುತ್ತಿದೆ.

ಭಾರತದ ಪ್ರಜೆಗಳಾದ ನಾವು ಮೂಲಭೂತವಾಗಿ ಪಾಲಿಸಬೇಕಾದ ಕರ್ತವ್ಯಗಳೆಂದರೆ , ಸಂವಿಧಾನಕ್ಕೆ ಬದ್ಧವಾಗಿರುವುದು ಹಾಗೂ ಅದರ ಆದರ್ಶಗಳನ್ನು ಮತ್ತು ಸಂಸ್ಥೆಗಳನ್ನು, ರಾಷ್ಟ್ರಧ್ವಜವನ್ನು ಹಾಗೂ ರಾಷ್ಟ್ರಗೀತೆಯನ್ನು ಗೌರವಿಸುವುದು; ನಮ್ಮ ರಾಷ್ಟ್ರೀಯ ಸ್ವಾತಂತ್ರ‍್ಯ ಸಂಗ್ರಾಮಕ್ಕೆ ಸ್ಫೂರ್ತಿದಾಯಕವಾಗಿದ್ದ ಉದಾತ್ತ ಆದರ್ಶಗಳನ್ನು ಗೌರವಿಸುವುದು ಮತ್ತು ಅನುಸರಿಸುವುದು; ಭಾರತದ ಸಾರ್ವಭೌಮತ್ವವನ್ನು, ಐಕ್ಯತೆಯನ್ನು ಮತ್ತು ಅಖಂಡತೆಯನ್ನು ಎತ್ತಿ ಹಿಡಿಯುವುದು ಹಾಗೂ ಸಂರಕ್ಷಿಸುವುದು; ದೇಶವನ್ನು ರಕ್ಷಿಸುವುದು ಮತ್ತು ಕರೆಬಂದಾಗ ರಾಷ್ಟ್ರಕ್ಕೆ ಸೇವೆ ಸಲ್ಲಿಸುವುದು; ಧಾರ್ಮಿಕ, ಭಾಷಾ ಮತ್ತು ಪ್ರಾದೇಶಿಕ ಅಥವಾ ಜಾತಿ ಪಂಗಡಗಳ ಭೇದಭಾವಗಳಿಂದ ಅತೀತವಾಗಿ, ಭಾರತದ ಎಲ್ಲಾ ಜನತೆಯಲ್ಲಿ ಸಾಮರಸ್ಯವನ್ನು ಮತ್ತು ಸಮಾನ ಭ್ರಾತೃತ್ವದ ಭಾವನೆಯನ್ನು ಬೆಳೆಸುವುದು ಮತ್ತು ಸ್ತ್ರೀಯರ ಗೌರವಕ್ಕೆ ಕುಂದುಂಟುಮಾಡುವ ಆಚರಣೆಗಳನ್ನು ಬಿಟ್ಟುಬಿಡುವುದು; ನಮ್ಮ ಸಮ್ಮಿಶ್ರ ಸಂಸ್ಕೃತಿಯ ಭವ್ಯಪರಂಪರೆಯನ್ನು ಗೌರವಿಸುವುದು ಹಾಗೂ ಕಾಪಾಡುವುದು; ಅರಣ್ಯಗಳು, ಸರೋವರಗಳು, ನದಿಗಳು ಮತ್ತು ವನ್ಯಜೀವಿಗಳು ಸೇರಿದಂತೆ ನೈಸರ್ಗಿಕ ಪರಿಸರವನ್ನು ಸಂರಕ್ಷಿಸುವುದು ಹಾಗೂ ಅಭಿವೃದ್ಧಿಗೊಳಿಸುವುದು ಮತ್ತು ಪ್ರಾಣಿಗಳಿಗೆ ಅನುಕಂಪ ತೋರಿಸುವುದು; ವೈಜ್ಞಾನಿಕ ಮನೋಭಾವನೆ, ಮಾನವೀಯತೆ, ಜಿಜ್ಞಾಸೆಯ ಮತ್ತು ಸುಧಾರಣೆಯ ಪ್ರವೃತ್ತಿಗಳನ್ನು ಬೆಳೆಸುವುದು; ಸಾರ್ವಜನಿಕ ಸ್ವತ್ತನ್ನು ರಕ್ಷಿಸುವುದು ಮತ್ತು ಹಿಂಸೆಯನ್ನು ತ್ಯಜಿಸುವುದು; ರಾಷ್ಟ್ರವು ನಿರಂತರವಾಗಿ ಸಾಧನೆಯ ಮತ್ತು ಸಿದ್ಧಿಯ ಉನ್ನತ ಮಟ್ಟಗಳನ್ನು ತಲುಪಲು ವೈಯಕ್ತಿಕ ಹಾಗೂ ಸಾಮೂಹಿಕ ಚಟುವಟಿಕೆಯ ಎಲ್ಲಾ ಕಾರ್ಯಕ್ಷೇತ್ರಗಳಲ್ಲಿ ಉನ್ನತಿಗಾಗಿ ಶ್ರಮಿಸುವುದು. ತಂದೆ- ತಾಯಿ ಅಥವಾ ಪೋಷಕರು, ಆರರಿಂದ ಹದಿನಾಲ್ಕು ವಯಸ್ಸಿನ ತಮ್ಮ ಮಗುವಿಗೆ ಅಥವಾ ತಮ್ಮ ಪರಿಪಾಲಿತ ಮಗುವಿಗೆ ಶಿಕ್ಷಣ ಪಡೆಯಲು ಅವಕಾಶಗಳನ್ನು ಒದಗಿಸುವುದು ನಮ್ಮ ಮೂಲಭೂತ ಕರ್ತವ್ಯವಾಗಿದೆ.

ಅಲ್ಲದೇ ನಮ್ಮ ಸಂವಿಧಾನವು ನಮಗೆ ನೀಡಿರುವ ಮೂಲಭೂತ ಹಕ್ಕುಗಳ ಬಗ್ಗೆ ದೇಶದ ಎಲ್ಲಾ ನಾಗರೀಕರು ತಿಳಿದುಕೊಳ್ಳುವ ಮೂಲಕ ಸಂವಿಧಾನದ ಅತೀ ಮುಖ್ಯವಾದ ಮಹತ್ವವನ್ನು ಅರಿಯಬೇಕಿದೆ. ಸಂವಿಧಾನ ನೀಡಿರುವ ಈ ಹಕ್ಕುಗಳಿಗೆ ಯಾವುದೇ ಚ್ಯುತಿ ಬಂದಲ್ಲಿ ಯಾವುದೇ ವ್ಯಕ್ತಿ ಅವುಗಳಿಗೆ ಕಾನೂನಿನ ರಕ್ಷಣೆ ಕೂಡ ಪಡೆಯಬಹುದಾಗಿದ್ದು, ದಿನ ನಿತ್ಯದ ಜೀವನದಲ್ಲಿ ಪ್ರತಿಯೊಬ್ಬರಿಗೂ ಈ ಹಕ್ಕುಗಳು ನೆರವು ನೀಡಲಿವೆ.

ಸಮಾನತೆಯ ಹಕ್ಕು, ಸ್ವಾತಂತ್ರ್ಯದ ಹಕ್ಕು, ಶೋಷಣೆಯ ವಿರುದ್ದದ ಹಕ್ಕು, ಧಾರ್ಮಿಕ ಸ್ವಾತಂತ್ರ್ಯದ ಹಕ್ಕು, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕು, ಸಂವಿಧಾನಾತ್ಮಕ ಪರಿಹಾರದ ಹಕ್ಕುಗಳನ್ನು ಸಂವಿಧಾನ ನಮಗೆ ನೀಡಿದ್ದು, ಈ ಹಕ್ಕುಗಳು ಪ್ರಜಾಪ್ರಭುತ್ವ ವ್ಯವಸ್ಥೆಯ ಆಧಾರ ಸ್ಥಂಬಗಳಾಗಿದ್ದು, ವೈಯಕ್ತಿಕ ಸ್ವಾತಂತ್ರ್ಯದ ರಕ್ಷಣೆ, ಜಾತ್ಯಾತೀಯ ತಳಹದಿಯನ್ನು ಬಲಪಡಿಸುವ, ಅಲ್ಪ ಸಂಖ್ಯಾತರ ಹಿತಾಸಕ್ತಿ ರಕ್ಷಿಸುವ ಮತ್ತು ಸಾಮಾಜಿಕ ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕೆ ಆಧಾರವಾಗಿದ್ದು,ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿ ಗೌರವ ಮತ್ತು ಘನತೆಯನ್ನು ಹೆಚ್ಚಿಸುತ್ತವೆ.

ನಮ್ಮ ಸಂವಿಧಾನವು ಪ್ರಜೆಗಳಿಗೆ ಹಕ್ಕು ಮತ್ತು ಸ್ವಾತಂತ್ರö್ಯಗಳ ಜೊತೆಗೆ ಮತದಾನದ ಹಕ್ಕು ಕೂಡಾ ಕೂಡಾ ನೀಡಿದ್ದು, ತಮ್ಮ ಇಚ್ಛೆಯ ಜನಪ್ರತಿನಿಧಿಯನ್ನು ಆಯ್ಕೆ ಮಾಡುವ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿದೆ. ಸಾರ್ವಜನಿಕರು ನಮ್ಮ ದಿನನಿತ್ಯದ ಜೀವನದಲ್ಲಿ ನೆಮ್ಮದಿಯ ಜೀವನ ನಡೆಸಲು ಅನುಕೂಲವಾದ ವಾತಾವರಣವನ್ನು ಸಂವಿಧಾನವು ಒದಗಿಸಿದ್ದು, ಸಂವಿಧಾನದ ತತ್ವಗಳು ಮತ್ತು ಮಹತ್ವದ ಬಗ್ಗೆ ದೇಶದ ಪ್ರತಿಯೊಬ್ಬ ವ್ಯಕ್ತಿಯೂ ಅರಿಯುವುದು ಮತ್ತು ಜಾಗೃತರಾಗಿರುವುದು ಅತ್ಯಂತ ಅಗತ್ಯವಾಗಿದೆ ಈ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಸಂಚರಿಸುತ್ತಿರುವ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಭಾಗವಹಿಸಿ ಇನ್ನು ಹೆಚ್ಚಿನ ಅರಿವು ಪಡೆಯಬಹುದಾಗಿದೆ.
ಜಿಲ್ಲೆಯಲ್ಲಿ ಸಂವಿಧಾನ ಜಾಗೃತಿ ಜಾಥಾವು ಜನವರಿ 26 ರಿಂದ ಆರಂಭಗೊಂಡಿದ್ದು, ಜಿಲ್ಲೆಯ 229 ಗ್ರಾಮ ಪಂಚಾಯತ್ ಗಳಲ್ಲಿ ಜಾಥಾ ಸಂಚರಿಸಲಿದ್ದು, ಇದುವರೆಗೆ ಒಟ್ಟು 115 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಜಾಥಾ ಕಾರ್ಯಕ್ರಮಗಳನ್ನು ಆಯೋಜಿಸಿ, ಸಂವಿಧಾನದ ಮಹತ್ವದ ಕುರಿತು ಅರಿವು ಮತ್ತು ಜಘರತಿ ಮೂಡಿಸಲಾಗಿದೆ. ಜಾಥಾದಲ್ಲಿ ಸ್ಥಬ್ಧ ಚಿತ್ರಗಳು, ಆಕರ್ಷಕ ಮೆರವಣಿಗೆಗಳು, ಬೈಕ್ ಮತ್ತು ಸೈಕಲ್ ರ‍್ಯಾಲಿಗಳು, ಯಕ್ಷಗಾನ ಪ್ರದರ್ಶನಗಳು, ಡಮಾಮಿ ನೃತ್ಯ , ವಿದ್ಯಾರ್ಥಿಗಳಿಂದ ನೃತ್ಯ ರೂಪಕಗಳು, ಭಾಷಣ ಸ್ಪರ್ಧೆಗಳು, ಸಂವಿಧಾನ ಪೀಠಿಕೆಯ ಭೋದನೆ, ಪ್ರತಿಜ್ಞಾ ವಚನ ಸ್ವೀಕಾರ ಸೇರಿದಂತೆ ಹಲವು ವೈವಿಧ್ಯಮಯ ಚಟುಚಟಿಕೆಗಳನ್ನು ನಿರತಂತರವಾಗಿ ನಡೆಸಲಾಗುತ್ತಿದೆ.
………………..

Latest Indian news

Popular Stories