ಮೂರೇ ದಿನದಲ್ಲಿ ನಿಷ್ಕ್ರಿಯ ಗೊಂಡಿದ್ದ 5774 ರೈತರ ಬ್ಯಾಂಕ್ ಖಾತೆ ಸಕ್ರಿಯ

ಕಾರವಾರ : ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಉಂಟಾದ ಬರ ಪರಿಸ್ಥಿತಿಯಿಂದ ಉಂಟಾದ ಬೆಳೆ ಹಾನಿಯ ಪರಿಹಾರದ ಮೊತ್ತವನ್ನು ಪಡೆಯಲು ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದ್ದ ಜಿಲ್ಲೆಯ 5774 ರೈತರ ಬ್ಯಾಂಕ್ ಖಾತೆಗಳಲ್ಲಿನ ಹಲವು ನ್ಯೂನತೆಗಳನ್ನು , 3 ದಿನಗಳ ಕಾಲ ಅವಿರತವಾಗಿ ಶ್ರಮಿಸಿ, ಸಮಸ್ಯೆಗಳನ್ನು ಸರಿಪಡಿಸಿರುವ ಜಿಲ್ಲಾಡಳಿತ, ಈ ಎಲ್ಲಾ ರೈತರ ಬ್ಯಾಂಕ್ ಖಾತೆಗಳಿಗೆ ಇದುವರೆಗೆ ಬಾಕಿ ಇರುವ ಬೆಳೆ ಪರಿಹಾರದ ಸಂಪೂರ್ಣ ಮೊತ್ತವನ್ನು ಪಾವತಿಸುವಂತೆ ಬ್ಯಾಂಕ್ ಗಳಿಗೆ ಸೂಚನೆ ನೀಡಿದೆ.

ಜಿಲ್ಲೆಯ ರೈತರಿಗೆ ಇದುವರೆಗೆ ಒಟ್ಟು 36.06 ಕೋಟಿ ರೂ ಗಳ ಬರ ಪರಿಹಾರ ಮೊತ್ತವು ಡಿಬಿಟಿ ಮೂಲಕ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಆಗಿದ್ದು, ಪ್ರಸ್ತುತ ಬ್ಯಾಂಕ್ ಖಾತೆ ಸಮಸ್ಯೆಯಿಂದ ಮುಕ್ತವಾಗಿರುವ ಅರ್ಹ ರೈತರಿಗೆ ಕೂಡಾ ನಿಗಧಿತ ಪರಿಹಾರದ ಮೊತ್ತ ಅವರ ಖಾತೆಗಳಿಗೆ ಜಮೆ ಆಗಲಿದೆ.

ಜಿಲ್ಲೆಯ ಬರ ಪೀಡಿತ ತಾಲೂಕುಗಳಾದ, ಕಾರವಾರದಲ್ಲಿ 134, ಜೋಯಿಡಾದ 233, ಹಳಿಯಾಳದ 1266, ಯಲ್ಲಾಪುರದ 269, ಮುಂಡಗೋಡದ 412, ಶಿರಸಿಯ 422, ಅಂಕೋಲದ 1052, ಕುಮಟಾದ 813, ಸಿದ್ದಾಪುರದ 572, ಭಟ್ಕಳದ 544 ಹಾಗೂ ದಾಂಡೇಲಿಯ 57 ರೈತರ ಬ್ಯಾಂಕ್ ಖಾತೆಗಳು ಸೇರಿದಂತೆ ಒಟ್ಟು, 5774 ರೈತರಿಗೆ ಅವರ ಬ್ಯಾಂಕ್ ಖಾತೆಯಲ್ಲಿನ ನ್ಯೂನತೆ, ಆಧಾರ್ ಮ್ಯಾಪ್ ಆಗದೇ ಇರುವುದು, ಆಧಾರ್ ಸೀಡಿಂಗ್ ಸಮಸ್ಯೆ, ಹೆಸರುಗಳ ಮಿಸ್ ಮ್ಯಾಚ್, ಅಕೌಂಟ್ ಕ್ಲೋಸ್, ಅಕೌಂಟ್ ಬ್ಲಾಕ್ ಆಗಿರುವುದು, ಪ್ರೂಟ್ಸ್ ತಂತ್ರಾAಶ ಮತ್ತು ಆಧಾರ್‌ನಲ್ಲಿನ ಹೆಸರುಗಳ ಹೋಲಿಕೆಯಾಗದೇ ಇರುವುದು, ಸೇರಿದಂತೆ ವಿವಿಧ ತಾಂತ್ರಿಕ ಕಾರಣಗಳಿಂದ ಬ್ಯಾಂಕ್ ಖಾತೆಗೆ ಬೆಳೆ ಪರಿಹಾರದ ಮೊತ್ತ ಇದುವರೆಗೆ ಜಮೆ ಆಗಿಲ್ಲದಿರುವುದು ಕಂಡು ಬಂದಿತ್ತು.

ಈ ಸಮಸ್ಯೆಗಳ ನಿವಾರಣೆಗೆ ಜಿಲ್ಲೆಯ ಬರ ಪೀಡಿತ 11 ತಾಲ್ಲೂಕುಗಳಲ್ಲಿನ ತಹಶೀಲ್ದಾರ್ ಕಚೇರಿಗಳಲ್ಲಿ ರೈತರ ಸಲಹಾ ಕೇಂದ್ರವನ್ನು ತೆರೆಯುವ ಮೂಲಕ ರೈತರ ನೆರವಿಗೆ ಜಿಲ್ಲಾಡಳಿತ ಮುಂದಾಗಿತ್ತು. ಅಲ್ಲದೇ ಇದುವರೆಗೆ ವಿವಿಧ ಕಾರಣಗಳಿಂದ ಪರಿಹಾರ ಜಮೆ ಆಗದ ರೈತರ ಪಟ್ಟಿ ಮಾಡಿ, ಅವರ ಪೋನ್ ಕರೆ ಮಾಡಿ, ಮನೆಗಳಿಗೆ ವೈಯಕ್ತಿಕವಾಗಿ ಭೇಟಿ ನೀಡಿ, ಬ್ಯಾಂಕ್ ಖಾತೆ ಸಂಬಂಧಸಿದ ಎಲ್ಲಾ ತಾಂತ್ರಿಕ ಸಮಸ್ಯೆಗಳನ್ನು ಪರಿಶೀಲಿಸಿ, ದಾಖಲೆಗಳನ್ನು ಪಡೆದು, ಫಲಾನುಭವಿಗಳನ್ನು ಜೊತೆಯಲ್ಲಿಯೇ ಬ್ಯಾಂಕ್ ಗಳಿಗೆ ಕರೆದುಕೊಂಡು ಹೋಗಿ, ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲಾಗಿದೆ.

ಜಿಲ್ಲೆಯ ರೈತರಿಗೆ ಬರ ಪರಿಹಾರದ ಮೊತ್ತವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಬ್ಯಾಂಕ್ ಖಾತೆಯ ಸಮಸ್ಯೆ ಸೇರಿದಂತೆ ಕೆಲವು ತಾಂತ್ರಿಕ ಸಮಸ್ಯೆಗಳಿಂದ ಬೆಳೆ ಪರಿಹಾರದ ಮೊತ್ತವು ಬ್ಯಾಂಕ್ ಖಾತೆಗಳಿಗೆ ಜಮೆ ಆಗಿಲ್ಲದೇ ಇದ್ದ, 5774 ರೈತರನ್ನು ಗುರುತಿಸಲಾಗಿತ್ತು. ಈ ಎಲ್ಲಾ ರೈತರನ್ನು ಕಂದಾಯ ಇಲಾಖೆಯ ಗ್ರಾಮ ಸಹಾಯಕರು ಮತ್ತು ಗ್ರಾಮ ಆಡಳಿತಾಧಿಕಾರಿಗಳು ವೈಯಕ್ತಿಕವಾಗಿ ಸಂಪರ್ಕಿಸಿ, ಅವರ ಸೂಕ್ತ ದಾಖಲೆಗಳನ್ನು ಸಂಗ್ರಹಿಸಿ, ಸದ್ರಿ ದಾಖಲೆಗಳೊಂದಿಗೆ ಅವರನ್ನು ಬ್ಯಾಂಕ್ ಗಳಿಗೆ ಕರೆದುಕೊಂಡು ಹೋಗಿ, ಎಲ್ಲಾ ಸಮಸ್ಯೆಗಳನ್ನು ಸಂಪೂರ್ಣವಾಗಿ ಬಗೆಹರಿಸಿ, ಅವರೆಲ್ಲರಿಗೆ ಬೆಳೆ ಪರಿಹಾರದ ಮೊತ್ತ ದೊರೆಯುವಂತೆ ಮಾಡಲಾಗಿದೆ.

ಈ ಮೂಲಕ ಜಿಲ್ಲೆಯ ಎಲ್ಲಾ ಅರ್ಹ ರೈತರಿಗೆ ಬೆಳೆ ಪರಿಹಾರದ ಮೊತ್ತವನ್ನು ದೊರೆಯುವಂತೆ ಮಾಡಲು 3 ದಿನಗಳ ಕಾಲ ಜಿಲ್ಲಾಡಳಿತದಿಂದ ಸಮರೋಪಾದಿಯಲ್ಲಿ ಕರ್ತವ್ಯ ನಿರ್ವಹಿಸಲಾಗಿದೆ.

– ಗಂಗೂಬಾಯಿ ಮಾನಕರ, ಜಿಲ್ಲಾಧಿಕಾರಿಗಳು.ಕಾರವಾರ
……….

Latest Indian news

Popular Stories