ಸಂವಿಧಾನ ಬದಲಿಸುತ್ತೇವೆನ್ನುವ ಬಿಜೆಪಿಗರಿಗೆ ಚುನಾವಣೆಗೆ ಸ್ಪರ್ಧಿಸುವ ನೈತಿಕ ಹಕ್ಕಿಲ್ಲ: ದೇಶಪಾಂಡೆ ವಾಗ್ದಾಳಿ*

ಕಾರವಾರ : ಸಂವಿಧಾನ ಬದಲಾಯಿಸುವ ಬಗ್ಗೆ ಹೇಳಿಕೆ ನೀಡುವ ಬಿಜೆಪಿಗರಿಗೆ ಸಂವಿಧಾನದಡಿ ನಡೆಯುವ ಚುನಾವಣೆಗೆ ಸ್ಪರ್ಧಿಸುವ ನೈತಿಕತೆಯೇ ಇಲ್ಲ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರೂ ಆದ ಶಾಸಕ ಆರ್.ವಿ.ದೇಶಪಾಂಡೆ ವಾಗ್ದಾಳಿ ನಡೆಸಿದರು.

ಸಿದ್ದಾಪುರದಲ್ಲಿ ಹಮ್ಮಿಕೊಂಡಿದ್ದ ಉತ್ತರಕನ್ನಡ ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ಬಲಪಡಿಸುವ ಕಾರ್ಯವಾಗಬೇಕಿದೆ. ಆದರೆ ಪ್ರಜಾಪ್ರಭುತ್ವಕ್ಕೆ ಪ್ರಶ್ನೆಯೊಡ್ಡುವ ಬಗ್ಗೆ ಕೆಲವು ಬಿಜೆಪಿ ಸ್ನೇಹಿತರು ಮಾತನಾಡುತ್ತಾರೆ. ೪೦೦ಕ್ಕೂ ಅಧಿಕ ಸೀಟು ಬಂದರೆ ಸಂವಿಧಾನ ಬದಲಾವಣೆ ಮಾಡುತ್ತೇವೆನ್ನುತ್ತಾರೆ. ಹೀಗೆ ಹೇಳುವ ಅವರು ಮೂರ್ಖರು.

ಮತ ಕೇಳುವ ಅಧಿಕಾರ ಇದೆಯಾ ಇವರಿಗೆ ? ಚುನಾವಣೆ ನಡೆಯುತ್ತಿರುವುದೇ ಸಂವಿಧಾನದ ಮೇಲೆ‌. ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡುವವವರಿಗೆ ಚುನಾವಣೆಗೆ ನಿಲ್ಲುವ ನೈತಿಕ ಹಕ್ಕಿಲ್ಲ. ಒಂದುವೇಳೆ ಎನ್.ಡಿ.ಎ. ಸರ್ಕಾರದ ಗುರಿ ಇದೇಯಾದರೆ ಮುಂದೆ ಬಹಳ ದೊಡ್ಡ ಗಂಡಾಂತರ ಕಾದಿದೆ. ಮತ್ತೆ ಚುನಾವಣೆ ನಡೆಯಲಿಕ್ಕಿಲ್ಲ, ಇದೇ ಕೊನೆಯ ಚುನಾವಣೆ ಆಗಲೂಬಹುದು. ಆದರೆ ರಾಷ್ಟ್ರದ ಜನ ಪ್ರಜ್ಞಾವಂತರು. ಜವಾಬ್ದಾರಿಯಿಂದ ಮತ ಚಲಾಯಿಸಲಿದ್ದಾರೆ‌ಂಬ ನಂಬಿಕೆ ಇದೆ ಎಂದರು.

ನಮ್ಮ ಜಿಲ್ಲೆಯ ಇತಿಹಾಸದಲ್ಲಿ ಮಹಿಳೆಯರಿಗೆ ಅವಕಾಶ ಸಿಕ್ಕಿರುವುದು ಕಡಿಮೆ. ಮಾರ್ಗರೇಟ್ ಆಳ್ವಾ ಬಳಿಕ ಓರ್ವ ಮಹಿಳೆಗೆ ಅವಕಾಶ ಸಿಕ್ಕಿರುವುದು ಡಾ.ಅಂಜಲಿ ನಿಂಬಾಳ್ಕರ್ ಅವರಿಗೆ. ಹೀಗಾಗಿ ಮಹಿಳೆಯರ ಜವಾಬ್ದಾರಿ ಹೆಚ್ಚಿದೆ. ಮನೆಮನೆಗೆ ತೆರಳಿ ನಮ್ಮ ಅಭ್ಯರ್ಥಿಯನ್ನ ಗೆಲ್ಲಿಸುತ್ತೇವೆಂದು ಕಂಕಣಬದ್ಧರಾಗಬೇಕಿದೆ ಎಂದು‌ ದೇಶಪಾಂಡೆ ಹೇಳಿದರು.

ಆರು ಬಾರಿ ಆಯ್ಕೆಯಾದ ಲೋಕಸಭಾ ಸಂಸದರು ಜಿಲ್ಲೆಗಾಗಿ ಏನು ಮಾಡಿದ್ದಾರೆ? ಮೂರು ದಶಕಗಳಲ್ಲಿ ಕೇಂದ್ರದ ಯಾವ ಯೋಜನೆ ಜಿಲ್ಲೆಗೆ ಬಂದಿದೆ? ತಾಳಗುಪ್ಪ- ಸಿದ್ದಾಪುರ ರೈಲ್ವೆ ಬಂತಾ? ಅರಣ್ಯ ಭೂಮಿ ಅತಿಕ್ರಮಣ ಸಮಸ್ಯೆ ಪರಿಹಾರವಾಯಿತಾ? ಎಂದು ಪ್ರಶ್ನಿಸಿದ ಅವರು, ಸೀಬರ್ಡ್, ಕೈಗಾ ಸ್ಥಾವರ, ಕೊಂಕಣ ರೈಲ್ವೆ ಯೋಜನೆ ಬಂದಿದ್ದು ನಮ್ಮ ಸರ್ಕಾರದ ಅವಧಿಯಲ್ಲಿ. ೩೦ ವರ್ಷದಲ್ಲಿ ಅಗಿರುವ ಒಂದೇ ಒಂದು ಯೋಜನೆ ಇದ್ದರೆ ತೋರಿಸಲಿ ಎಂದು ಮಾಜಿ ಸಚಿವ ಆರ್. ವಿ.ದೇಶಪಾಂಡೆ ಸವಾಲೆಸೆದರು.

ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮಾತನಾಡಿ, ಸುಳ್ಳು ಹೇಳಿಕೊಂಡೇ ೧೦ ವರ್ಷ ಅಧಿಕಾರ ಮಾಡಿದ ಬಿಜೆಪಿಗರಿಗೆ ಮತ ಕೇಳುವ ನೈತಿಕತೆ ಇಲ್ಲ ಎಂದರು.

ಶಿರಸಿ ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಅಧಿಕಾರಕ್ಕಾಗಿ ಜಾತಿ, ಧರ್ಮಗಳ ನಡುವೆ ಬಿಜೆಪಿ ಕಿಚ್ಚು ಹಚ್ಚಿದಂತೆ ಕಾಂಗ್ರೆಸ್ ಯಾವತ್ತೂ ಮಾಡಿಲ್ಲ. ಅತಿಕ್ರಮಣ ಸಕ್ರಮಾತಿ ಮಾಡಲು ಜಿಪಿಎಸ್ ಮಾಡಲು ಮುಂದಾಗಿದ್ದು ಕಾಂಗ್ರೆಸ್ ಸರ್ಕಾರ. ಪ್ರಧಾನಿ ಮೋದಿ ಸರ್ಕಾರಕ್ಕೆ ಬಡವರ ಮೇಲೆ ಕಿಂಚಿತ್ತೂ ಕನಿಕರವಿಲ್ಲ. ರಾಜ್ಯದಿಂದ ಆಯ್ಕೆಯಾದ ಸಂಸದರುಗಳಲ್ಲೂ ಯಾರೂ ಸಂಸತ್ ನಲ್ಲಿ ಅತಿಕ್ರಮಣ, ಕಸ್ತೂರಿ ರಂಗನ್ ವರದಿ ಬಗ್ಗೆ ಧ್ವನಿ ಎತ್ತಿಲ್ಲ ಎಂದರು.

ಸಂವಿಧಾನ ಬದಲು ಮಾಡುತ್ತೇವೆಂಬ ಹುಚ್ಚು ಕನಸು ಬಿಜೆಪಿಯದ್ದು. ಇಡೀ‌ ಜಗತ್ತೇ ಮೆಚ್ಚಿದ ಸಂವಿಧಾನವನ್ನ ಬದಲಿಸುತ್ತೇವೆನ್ನುವ ಬಿಜೆಪಿಗೆ ಮತ ನೀಡಬೇಕೆ ? ಎಂದು ಪ್ರಶ್ನಿಸಿದರು.

ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಮಾತನಾಡಿ, ಕಾಂಗ್ರೆಸ್ ಇವತ್ತು, ನಿನ್ನೆ ಹುಟ್ಟಿದ ಪಕ್ಷವಲ್ಲ; ನೂರಾರು ವರ್ಷಗಳ ಇತಿಹಾಸವಿದೆ. ೬೦ ವರ್ಷ ಕಾಂಗ್ರೆಸ್ ಏನು ಮಾಡಿದೆ ಎಂದು ಬಿಜೆಪಿಗರು ಕೇಳುತ್ತಾರೆ. ಬಿಜೆಪಿ ನಾಯಕರು ಹುಟ್ಟಿದ ಆಸ್ಪತ್ರೆಗಳನ್ನ ಕಟ್ಟಿಸಿದ್ದು, ಅವರು ಕಲಿತ ಹಳ್ಳಿಯ ಶಾಲೆಗಳು ನಿರ್ಮಾಣವಾಗಿದ್ದು ಕಾಂಗ್ರೆಸ್ ಆಡಳಿತದಲ್ಲಿ. ಸುಳ್ಳು ಘೋಷಣೆ ಮಾಡಿ, ಚುನಾವಣೆ ಬಂದಾಗ ಕೈಕಾಲು ಹಿಡಿದು ನಮಸ್ಕರಿಸುವವರು ನಾವಲ್ಲ ಎಂದರು.
ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ್ ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಮನ್ಮನೆ, ವಿ.ಎನ್.ನಾಯ್ಕ, ಬಿ.ಆರ್.ನಾಯ್ಕ, ನಾಸೀರ್ ವಲ್ಲಿಖಾನ್, ಗಾಂಧೀಜಿ, ಪಾಂಡುರಂಗ ನಾಯ್ಕ, ಗಂಗಾಧರ ಮಡಿವಾಳ, ಮನೋಹರ್ ಗುರಿಕಾರ್, ರಾಜೇಶ್ ಕತ್ತಿ, ಜಯರಾಮ್ ನಾಯ್ಕ, ಪದ್ಮಾಕರ, ಕೆ.ಜಿ.ನಾಯ್ಕ, ಲೀನಾ ಫರ್ನಾಂಡೀಸ್ ಮುಂತಾದವರಿದ್ದರು.
***

Latest Indian news

Popular Stories