ಶಿರಸಿಯಲ್ಲಿ ಮೂವರು ನಕಲಿ ಪತ್ರಕರ್ತ ರಿಂದ ಬ್ಲಾಕ್ ಮೇಲ್ : ಬಂಗಾರ ಆಭರಣ ಅಂಗಡಿ ಮಾಲೀಕ ಆತ್ಮಹತ್ಯೆ

ಆರೋಪಿಗಳ ಪರ ನಿಂತ ಪಿಎಸ್ ಐ ವಿರುದ್ಧ ಕ್ರಮಕ್ಕೆ ಎಐಸಿಸಿ ಓಬಿಸಿ ಸೆಲ್ ರಾಷ್ಟ್ರೀಯ ಕಾರ್ಯದರ್ಶಿ ಆಗ್ರಹ

ಕಾರವಾರ : ಶಿರಸಿಯಲ್ಲಿ ಬಂಗಾರ ಆಭರಣ ಅಂಗಡಿ ಮಾಲೀಕ ಪ್ರೀತಮ್ ಆತ್ಮಹತ್ಯೆಗೆ ಕಾರಣವಾದ ಮೂವರು ನಕಲಿ ಪತ್ರಕರ್ತರ ಬಂಧನ ಮಾಡುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಎಐಸಿಸಿ ಓಬಿಸಿ ಸೆಲ್ ರಾಷ್ಟ್ರೀಯ ಕಾರ್ಯದರ್ಶಿ ನಾಗರಾಜ ನಾರ್ವೇಕರ್ ಆಗ್ರಹಿಸಿದರು.

ಕಾರವಾರದ ಪತ್ರಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಟಿಯನ್ನ ಉದ್ದೇಶಿಸಿ ಮಾತನಾಡಿದ ಅವರು ಪತ್ರಿಕಾರಂಗಕ್ಕೆ ತನ್ನದೇ ಆದ ಗೌರವವಿದೆ. ಆದರೆ ಕೆಲ ನಕಲಿ ಪತ್ರಕರ್ತರಿಂದ ಇಡೀ ಪತ್ರಕರ್ತರಿಗೆ ಕೆಟ್ಟ ಹೆಸರು ಬರುವಂತೆ ಮಾಡಿದೆ.‌ ಇದಕ್ಕೆ ಕಡಿವಾಣ ಹಾಕಲು ಶಿರಸಿಯ ನಕಲಿ ಪತ್ರಕರ್ತರನ್ನ ಬಂಧಿಸಬೇಕು ಎಂದರು. ಪ್ರೀತಮ್ ಆತ್ಮಹತ್ಯೆಗೆ ಕಾರಣ ತಿಳಿಯಬೇಕಿದೆ. ಅವರ ಐ ಪೋನ್ ಲಾಕ್ ಆಗಿದ್ದು, ಐ ಪೋನ್ ಓಪನ್ ಆದರೆ ಸತ್ಯ ಸಂಗತಿ ಹೊರಬರಲಿದೆ ಎಂದರು.

ಶಿರಸಿಯ ಮೂವರು ನಕಲಿ ಪತ್ರಕರ್ತರು ಪ್ರೀತಮ್ ಎಂಬಾತನಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದರು. ಕೆಲ ತಿಂಗಳ ಹಿಂದೆ ಖುದ್ದಾಗಿ ನನಗೆ ಫೋನ್ ಮಾಡಿ, ತನಗೆ ಮೂವರು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಇದರಿಂದ ಸಾಕಷ್ಟು ಕಿರುಕುಳ ಆಗಿದೆ ಎಂದು ಹೇಳಿದ್ದ. ಬ್ಲಾಕ್ ಮೇಲ್ ಮಾಡಿದವರಿಗೆ ನಾಲ್ಕು ಲಕ್ಷ ಕೊಟ್ಟಿದ್ದರು, ಇನ್ನು 25 ಲಕ್ಷ ಹಣ ಕೇಳುತ್ತಿದ್ದಾರೆ. ಬ್ಲಾಕ್ ಮೇಲ್ ನಡೆಯುತ್ತಲೇ ಇದೆ ಎಂದು ಹೇಳಿದ್ದನು. ಆದರೆ ಆಗ ನಾನು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯನ್ನು ಕಂಡು ದೂರು ಕೊಡುವಂತೆ ತಿಳಿಸಿದ್ದೆ.

ಇದಾದ ನಂತರ ಆತ 16 ದಿನದ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶಿರಸಿಯ ಹೊಸ ಮಾರುಕಟ್ಟೆ ಠಾಣೆಯ ಪಿಎಸ್ಐ ಮೃತನ ಅಣ್ಣ, ಅಥವಾ ತಂದೆ ದೂರು ಕೊಡಲು ಹೋದಾಗ, ಮೃತನ ಪತ್ನಿಯೇ ದೂರು ಕೊಡುವಂತೆ ಒತ್ತಾಯ ಮಾಡಿದ್ದರು.

ಮೃತನ ಪತ್ನಿ ಎರಡು ತಿಂಗಳ ಬಾಣಂತಿ ಯಾಗಿದ್ದು ಆಕೆ ಠಾಣೆಗೆ ಬಂದು ದೂರು ಕೊಡಲು ಸಾಧ್ಯವಾಗಿರಲಿಲ್ಲ. ನಂತರ ಎರಡು ದಿನ ಆದ ಮೇಲೆ ಎಲ್ಲರೂ ಒತ್ತಾಯ ಮಾಡಿದಾಗ ದೂರನ್ನ ದಾಖಲು ಮಾಡಲಾಗಿದೆ. ಆಗ ಮೃತನ ಪತ್ನಿ, ಆಕೆಯ ತಂದೆ ತಾಯಿ ಪ್ರೀತಮ್ ಆತ್ಮಹತ್ಯೆಗೆ ಬ್ಲಾಕ್ ಮೇಲ್ ಕಾರಣ ಎಂದು ಹೇಳಿದ್ದಾರೆ.

*ಆರೋಪಿಗಳ ಪರ ‌ನಿಂತ ರತ್ನಾ ಕುರಿ :*
ಮಾರುಕಟ್ಟೆ ಪಿಎಸ್ಐ ಪ್ರೀತಮ್ ಆತ್ಮಹತ್ಯೆ ಮಾಡಿಕೊಂಡಿದ್ದು ಬ್ಲಾಕ್ ಮೇಲ್ ಕಾರಣವಲ್ಲ, ತಾವೇ ಸ್ವತಃ ಹೇಳಿಕೆ‌ ಬರೆದು ಒತ್ತಾಯ ಮಾಡಿ ಸಹಿ ಹಾಕಿಸುವಂತೆ ಹೇಳಿದ್ದರು. ಆದರೆ ಇದಕ್ಕೆ ಆಕೆಯ ಕುಟುಂಬದವರು ಒಪ್ಪಿಲ್ಲ.

ಮಾರುಕಟ್ಟೆ ಪಿಎಸ್ಐ ರತ್ನಾ ಕುರಿ ತಾವೇ ಹೇಳಿಕೆಯನ್ನ ಬರೆದು ಸಹಿ ಹಾಕಿಸುವಂತೆ ಒತ್ತಾಯ ಮಾಡಿದ್ದು ಇದಕ್ಕೆ ಎಲ್ಲಾ ಸಾಕ್ಷಿ ಇದೆ. ಈ ಬಗ್ಗೆ ಹಿರಿಯ ಅಧಿಕಾರಿಗಳ ಬಳಿ ದೂರು ನೀಡಿದ್ದು ಪಿಎಸ್ಐ ವಿರುದ್ದ ಕ್ರಮ ಕೈಗೊಂಡಿಲ್ಲ. ತನಿಖಾಧಿಕಾರಿಯಾಗಿದ್ದ ರತ್ನಾ ಕುರಿ ಅವರನ್ನು ಬದಲಿಸಲಾಗಿದೆ. ಆದರೆ ಇವರ ವಿರುದ್ಧ ಕ್ರಮವಾಗಿಲ್ಲ‌ . ನಕಲಿ ಪತ್ರಕರ್ತರು, ಎಫ್. ಬಿ‌
ಬರಹಗಾರ, ಮಾಹಿತಿ ಹಕ್ಕು ಅಡಿ ಬ್ಲಾಕ್ ಮೇಲ್ ಮಾಡುವವನ ಜೊತೆ‌ ಪಿ ಎಸ್ ಐ ಕುರಿ ಅವರಿಗೆ
ಯಾವ ರೀತಿಯ ನಂಟು ಎಂದು ಅರ್ಥವಾಗುತ್ತಿಲ್ಲ. ಇಂಥವರಿಂದ ಸರ್ಕಾರಕ್ಕೆ, ನಮ್ಮ ಕಾಂಗ್ರೆಸ್ ಸಚಿವರಿಗೆ ಗೌರವ ತರುವಂಥದ್ದಲ್ಲ ಎಂದು ಎಐಸಿಸಿ ಓಬಿಸಿ ಸೆಲ್ ಕಾರ್ಯದರ್ಶಿ ಬೇಸರ ವ್ಯಕ್ತಪಡಿಸಿದರು.
ಈ ಪ್ರಕರಣದಲ್ಲಿ ಆರೋಪಿತರಾದ ಓಂ ಹೆಗಡೆ, ರವೀಶ್ ಹೆಗಡೆ ಹಾಗೂ ಗಣೇಶ್ ಆಚಾರಿ ಪೊಲೀಸರ ಮೇಲೆ ಪ್ರಭಾವ ಬೀರಿದ್ದು ಮೇಲ್ನೋಟಕ್ಕೆ ಕಂಡು ಬಂದಿದೆ.‌ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ ಪೊಲೀಸರ ಮೇಲೆ ಕ್ರಮ ಆಗಬೇಕಾಗಿದೆ. ಅಲ್ಲದೇ‌ ಆರೋಪಿಗಳನ್ನ ಬಂಧಿಸಿ, ಕಾನೂನು ಪ್ರಕಾರ ಕ್ರಮವಾಗಬೇಕಿದೆ ಎಂದರು.

ಮೃತನ ಸಹೋದರ ಪವನ್ ಮಾತನಾಡಿ, ಮೂವರು ಆಗಾಗ ಬ್ಲಾಕ್ ಮೇಲ್ ಮಾಡುತ್ತಿದ್ದ ಬಗ್ಗೆ ಕುಟುಂಬದ ಬಳಿ ಪ್ರೀತಮ್ ತಿಳಿಸಿದ್ದ. ಒಮ್ಮೆ ನಾಲ್ಕು ಲಕ್ಷ ಹಣ ಸಹ ಆರೋಪಿಗಳಿಗೆ ಕೊಟ್ಟಿದ್ದೆವು. ಆದರೂ ಅವರ ಕಿರುಕುಳ ನಿಂತಿರಲಿಲ್ಲ.‌ನಮ್ಮ ಆಭರಣ ಮಳಿಗೆ ವ್ಯಾಪಾರ ಹಾಳಾಗುವಂತೆ ಎಫ್ .ಬಿ. ಯಲ್ಲಿ ಆಗಾಗ ಬರೆಯುತ್ತಿದ್ದರು. ಇದರಿಂದಾಗಿ ಪ್ರೀತಮ್ ಮಾನಸಿಕ ನೆಮ್ಮದಿ ಕಳದುಕೊಂಡಿದ್ದ. ಆತನ ಸಾವಿಗೆ ಕಾರಣರಾದವರನ್ನು ಬಂಧಿಸಬೇಕು ಎಂದರು . ಈ ಸಂಬಂಧ ಜಿಲ್ಲಾಧಿಕಾರಿ ಹಾಗೂ ಎಸ್ಪಿ ಅವರನ್ನು ಭೇಟಿ ಮಾಡಿ ದೂರು ನೀಡುತ್ತಿದ್ದೇವೆ. ಡಿಐಜಿಗೆ ಸಹ ದೂರು ಕೊಟ್ಟಿದ್ದೇವೆ. ಸಹೋದರನ ಆತ್ಮಹತ್ಯೆ ನಂತರ ಬ್ಲಾಕ್ ಮೇಲ್ ಮಾಡಿದವರು ತಲೆಮರೆಸಿಕೊಂಡಿದ್ದು, ಅವರನ್ನು ಹಿಡಿದು ತರಬೇಕು ಎಂದು ಪೊಲೀಸರನ್ನು ಒತ್ತಾಯಿಸಿದರು.
……

Latest Indian news

Popular Stories