ಸಂವಿಧಾನ ಬದಲಾಯಿಸುವ ಇಂಗಿತ ಬಹಿರಂಗ ಮಾಡಿದ‌ ಕೆನರಾ ಸಂಸದ ಅನಂತ ಕುಮಾರ್ ಹೆಗಡೆ : ಕಾಂಗ್ರೆಸ್ಸ್ ಕೆಂಡಾಮಂಡಲ

ಕಾರವಾರ: ದೇಶದ ಸಂವಿಧಾನ ಬದಲಾಯಿಸಲು ನಮಗೆ ನಾಲ್ಕು ನೂರುಸಂಸತ್ ಸದಸ್ಯರ ಅವಶ್ಯಕತೆ ಇದೆ ,ಅದನ್ನು ಮತದಾರರು ಪೂರೈಸಿ ಕೊಡಿ ಎಂದು ಕೆನರಾ ಸಂಸತ್ ಸದಸ್ಯ ಅನಂತಕುಮಾರ್ ಹೆಗಡೆ ಹೇಳಿಕೆಗೆ ಕಾಂಗ್ರೆಸ್ ಕೆಂಡಾಮಂಡಲವಾಗಿದೆ. ಶೋಷಿತ ವರ್ಗವನ್ನು ಮತ್ತಷ್ಟು ಶೋಷಣೆ ಮಾಡುವ ಹುನ್ನಾರದಿಂದ ಸಂಸದ ಹೆಗಡೆ ಬಾಯಿಗೆ ಬಂದಂತೆ ಮಾತಾಡುತ್ತಿದ್ದಾರೆಂದು ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ಶಂಭು ಶೆಟ್ಟಿ ಸಂಸತ್ ಸದಸ್ಯರ ಹೆಗಡೆಯನ್ನು ಟೀಕಿಸಿದ್ದಾರೆ.

ಸಂವಿಧಾನ ಶಿಲ್ಪಿ ಡಾ . ಬಿ .ಆರ್. ಅಂಬೇಡ್ಕರ್ ರವರು ನಮ್ಮ ದೇಶದ ಸಂವಿಧಾನ ರಚನೆ ಮಾಡುವಾಗ, ಈ ದೇಶದಲ್ಲಿ ಸಾವಿರ ಸಾವಿರ ವರ್ಷಗಳಿಂದ ತುಳಿತಕ್ಕೊಳಗಾದವರ ರಕ್ಷಣೆ ಮತ್ತು ಅವರ ಅಭಿವೃದ್ದಿಗಾಗಿ ಸಂವಿಧಾನದಲ್ಲಿ ನಾನಾ ರೀತಿಯ ಸೌಲಭ್ಯಗಳನ್ನು ನೀಡಿದ್ದು,  ಅದರ ಫಲವಾಗಿ ಇಂದು ಈ ಶೋಷಿತ ವರ್ಗ ಗೌರವಯುತ ವಾದ ಜೀವನ ನಡೆಸುತ್ತಿದ್ದಾರೆ. ಈ ಹಿಂದೆ ಸಾಮಾಜಿಕವಾಗಿ ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಉಳ್ಳವರ ತುಳಿತಕ್ಕೆ ಒಳಗಾಗುತ್ತಿದ್ದ ಈ ವರ್ಗ ಇಂದು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ ಎಂದರೆ ಅದಕ್ಕೆ ನಮ್ಮ ದೇಶದ ಸಂವಿಧಾನ ಕಾರಣ ಎಂದು ಶೆಟ್ಟಿ ಹೇಳಿದ್ದಾರೆ.
    
ಆದರೆ ಪುರೋಗಾಮಿ ಸಂಸತ್ ಸದಸ್ಯ ಅನಂತಕುಮಾರ ಹೆಗಡೆ ಮತ್ತವರ ಬಿಜೆಪಿ ಪಕ್ಷಕ್ಕೆ ಈ ಶೋಷಿತ ವರ್ಗ ಸಂವಿಧಾನದಲ್ಲಿರುವ ಹಕ್ಕನ್ನು ಅನುಭವಿಸುತ್ತಿರುವುದು ಸಹಿಸಲಾಗುತ್ತಿಲ್ಲ.ಹೇಗಾದರೂ ಮಾಡಿ ಈ ಶೋಷಿತ ವರ್ಗವನ್ನು ತಮ್ಮ ಹಿರಿಯರ ಕಾಲದಲ್ಲಿ ಇದ್ದಂತೆ ಅಡಿಯಾಳನ್ನಾಗಿ ಪರಿವರ್ತಿಸಿ ಜೀತದಾಳಿನಂತೆ ದುಡಿಸಿಕೊಳ್ಳ ಬೇಕೆಂಬ ಹೆಬ್ಬಯಸೆ ಅವರಿಗಿದೆ.   

ಅದಕ್ಕಾಗಿಯೇ ಹಿಂದೊಮ್ಮೆ ಸಂಸದ ಹೆಗಡೆಯವರು ಸಂವಿಧಾನ ಬದಲಾವಣೆ ಮಾಡಲಿಕ್ಕಾಗಿಯೇ ನಾವು ಅಧಿಕಾರಕ್ಕೆ ಬಂದಿದ್ದೇವೆ ಎಂದು ಹೇಳಿ ಸಂಸತ್ತಿನಲ್ಲಿ ಕೂಡಾ ಮಜುಗರಕ್ಕೆ ಒಳಗಾಗಿದ್ದರು.ಇದೀಗ ಮತ್ತೊಮ್ಮೆ ನಮಗೆ ಸಂವಿಧಾನ ಬದಲಾಯಿಸಲು 400 ಸಂಸತ್ ಸದಸ್ಯರನ್ನು  ಗೆಲ್ಲಿಸಿಕೊಡಿ ಎಂದು ಕರೆ ಕೊಟ್ಟು ಬಿಜೆಪಿ ಪಕ್ಷದ ರಹಸ್ಯ ಕಾರ್ಯ ಸೂಚಿಯನ್ನು ಬಹಿರಂಗ ಪಡಿಸಿದ್ದಾರೆ.

ಆದ್ದರಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ  ಶೋಷಿತ ಸಮಾಜದ ವರ್ಗಗಳು ಒಗ್ಗಟ್ಟಾಗಿ ಬಿಜೆಪಿ ಪಕ್ಷವನ್ನು ಸೋಲಿಸಿ ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಉಳಿಸಿಕೊಂಡು ತಮ್ಮ ತಮ್ಮ ಸಂವಿಧಾನ ಬದ್ದ ಹಕ್ಕುಗಳನ್ನು ರಕ್ಷಣೆ ಮಾಡಿ ಕೊಳ್ಳಬೇಕೆಂದು ಕಾಂಗ್ರೆಸ್ಸ್ ಜಿಲ್ಲಾ ವಕ್ತಾರ ಕೆ. ಶಂಭು ಶೆಟ್ಟಿ ಜಿಲ್ಲೆಯ ಜನತೆಗೆ ಕರೆ ಕೊಟ್ಟಿದ್ದಾರೆ.

Latest Indian news

Popular Stories