ಕಾರವಾರ : ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಹೊನ್ನಾವರ ಸಮೀಪದ ಹೊಳಗದ್ದೆ ಟೋಲ್ ನಲ್ಲಿ ಮಂಗಳೂರು ಮೂಲದ ಕಾರ್ ಪ್ರಯಾಣಿಕರ ಮೇಲೆ ಹಲ್ಲೆ ಮಾಡಿದ ಘಟನೆ ನಡೆದಿದೆ.
ಟೋಲ್ ಗೇಟ್ ( ವಾಹನ ಶುಕ್ಕ ಸಂಗ್ರಹ ಕೇಂದ್ರ) ನಲ್ಲಿ
ಫಾಸ್ಟ್ ಟ್ಯಾಗ್ ತಾಂತ್ರಿಕ ಸಮಸ್ಯೆ ಉಂಟಾದ ಕಾರಣಕ್ಕೆ ಟೋಲ್ ಸಿಬ್ಬಂದಿಗಳು ರೌಡಿಗಳಂತೆ ಪ್ರಯಾಣಿಕರ ಮೇಲೆ ಹಲ್ಲೆ ಮಾಡಿ ಕಾರಿನ ಗಾಜು ಪುಡಿಗೈದಿರುವ ಘಟನೆ ನಡೆದಿದೆ.
ಮಂಗಳೂರು ಫಳ್ನೀರ್ ನಿವಾಸಿಗಳಾದ ಆಯಿಷಾ ರಾಮಲತ್ , ಫಾತಿಮಾ ಜೊಹಾರ, ಕೆ.ಮುಜೀಬ್ ಸೈಯ್ಯದ್ ಹಾಗೂ ಇನ್ನೂ ಕೆಲವರು ಮಂಗಳೂರಿನಿಂದ ಕಾರನಲ್ಲಿ ಕುಮಟಾ ಮಾರ್ಗವಾಗಿ ಗದಗದ ಲಕ್ಷ್ಮೀಶ್ವರಕ್ಕೆ ಹೋಗುತ್ತಿದ್ದರು ಎನ್ನಲಾಗಿದೆ.
ಈ ವೇಳೆ ಹೊನ್ನಾವರ ಸನಿಹದ ಹೊಳೆಗದ್ದೆ ಬಳಿ ಇರುವ ಟೋಲ್ ಗೇಟ್ ಗೆ ಕಾರು ಬಂದ ಸಂದರ್ಭದಲ್ಲಿ ಫಾಸ್ಟ್ ಟ್ಯಾಗ್ ನಿಂದ ಹಣ ಕಡಿತವಾಗಿಲ್ಲ ಎನ್ನಲಾಗಿದೆ. ಇದೆ ಕಾರಣಕ್ಕೆ ಅಲ್ಲಿರುವ ಟೋಲ್ ಸಿಬ್ಬಂದಿಗಳು ಏಕಾಏಕಿ ಕಾರನಲ್ಲಿದ್ದ ಪ್ರಯಾಣಿಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ.
ಟೋಲ್ ಸಿಬ್ಬಂದಿಗಳಾಗಿರುವ ಕಿರಣ್, ಸತೀಶ್, ಮಂಜುನಾಥ್ ಸೇರಿದಂತೆ ಐದಕ್ಕೂ ಹೆಚ್ಚು ಮಂದಿ ಸೇರಿ ಮುಜೀಬ್ ಎಂಬುವವರ ಮೇಲೆ ಹಲ್ಲೆ ನಡೆಸಿ ಅವರ ಪುತ್ರಿಯ ಕುತ್ತಿಗೆಗೆ ಕೈ ಹಾಕಿ, ಚಿನ್ನಾಭರಣ ಎಳೆದು ಜೀವ ಬೆದರಿಕೆ ಹಾಕಿದ್ದಾರೆನ್ನಲಾಗಿದೆ. ಹಲ್ಲೆಗೊಳಗಾದ ಆಯಿಷಾ, ಫಾತಿಮಾ, ಮುಜೀಬ್ ಸೈಯದ್ ಕುಮಟಾ ಸರ್ಕಾರಿ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಘಟನೆ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.