ಸಣ್ಣ ನೀರಾವರಿ ಇಲಾಖೆ ವಿಭಾಗ ಕಚೇರಿಯಲ್ಲಿ ಅಕೌಂಟೆಂಟ್ ಹಾಗೂ ಗುತ್ತಿಗೆದಾರನ ನಡುವೆ ಜಟಾಪಟಿ

ಕಾರವಾರ : ಹಳಿಯಾಳ ಪಟ್ಟಣದ ಸಣ್ಣ ನೀರಾವರಿ ಇಲಾಖೆ ವಿಭಾಗ ಕಚೇರಿಯ ಅಕೌಂಟೆಂಟ್ ಜೇಷ್ಠತಾ ಆಧಾರದ ಮೇಲೆ ಕಾಮಗಾರಿಯ ಮೊತ್ತವನ್ನು ಜಮೆ ಮಾಡುತ್ತಿಲ್ಲ ಎಂದು ಅಂಕೋಲಾ ಮೂಲದ ಗುತ್ತಿಗೆದಾರ ಪ್ರಶಾಂತ್ ನಾಯಕ ಕಚೇರಿ ಆಕೌಂಟೆಂಟ್ ಮಂಜುನಾಥ ಬೆಟದೂರು ಜೊತೆ ಜಗಳವಾಡಿದ ಘಟನೆ ನಡೆದಿದೆ‌ . ಇಬ್ಬರ ನಡುವೆ ಬಿರುಸಿನ ಮಾತುಕತೆ ಸಹ ನಡೆಯಿತು.

ಬುಧವಾರ ವಿಭಾಗ ಕಚೇರಿಗೆ ಆಗಮಿಸಿದ ಪ್ರಶಾಂತ್ ನಾಯಕ ಅವರು 2023 ರ ಫೆಬ್ರುವರಿಯಲ್ಲಿ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಅಕೌಂಟೆಂಟ್ ಮಂಜುನಾಥ ಬೆಟದೂರ ಅವರು ಇಲ್ಲಿಯವರೆಗೂ ಕಾಮಗಾರಿಯ ಮೊತ್ತವನ್ನು ನನ್ನ ಖಾತೆಗೆ ಜಮೆ ಮಾಡದೆ ಸತಾಯಿಸುತ್ತಿದ್ದಾರೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.

ನಬಾರ್ಡ್ ಯೋಜನೆ ಮೂಲಕ ನಾನು ಮುಂಡಗೋಡ ತಾಲೂಕಿನಲ್ಲಿ 15 ಲಕ್ಷ ರೂಪಾಯಿ ಮೊತ್ತದ ಕಾಮಗಾರಿಯನ್ನು ಟೆಂಡರ್ ಮೂಲಕ ಪಡೆದುಕೊಂಡು, ಮುಕ್ತಾಯಗೊಳಿಸಿದ್ದೇನೆ. ಆದರೆ ಕಾಮಗಾರಿ ಮುಕ್ತಾಯಗೊಂಡು ಒಂದು ವರ್ಷ ಕಳೆದರೂ ಸಹ ಅಕೌಂಟೆಂಟ್ ಅವರು ನನಗೆ ಮೊತ್ತವನ್ನು ಜಮೆ ಮಾಡಿಲ್ಲ. ಅಲ್ಲದೆ ಕಾಮಗಾರಿ ಪೂರ್ಣಗೊಳ್ಳದ ಬೇರೆ ಗುತ್ತಿಗೆದಾರರಿಗೆ ಮೊತ್ತ ಜಮೆ ಮಾಡಿ ಕಾನೂನಿನ ಸ್ಪಷ್ಟ ಉಲ್ಲಂಘನೆ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.

ಒಂದು ವೇಳೆ ಕಾಮಗಾರಿಯ ಮೊತ್ತವನ್ನು ಪಾವತಿಸದಿದ್ದಲ್ಲಿ ಕುಟುಂಬ ಸಮೇತರಾಗಿ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸುತ್ತೇನೆ. ಬ್ಯಾಂಕ್ ಹಾಗೂ ಇನ್ನಿತರ ಕಡೆ ಸಾಲ ಮಾಡಿ ಕಾಮಗಾರಿಯನ್ನು ಪೂರ್ಣಗೊಳಿಸುತ್ತೇವೆ. ಆದರೆ ಇಂಥಹ ಅಧಿಕಾರಿಗಳಿಂದ ನಮಗೆ ತೀವ್ರ ತೊಂದರೆ ಉಂಟಾಗುತ್ತಿದೆ. ಕಾಮಗಾರಿಯ ಮೊತ್ತವನ್ನು ಸಕಾಲದಲ್ಲಿ ಜಮೆ ಮಾಡದಿದ್ದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಪ್ರಶಾಂತ್ ನಾಯಕ ಎಚ್ಚರಿಕೆ ನೀಡಿದರು.

ಕಾಮಗಾರಿಯ ಮೊತ್ತವನ್ನು ಗುತ್ತಿಗೆದಾರರಿಗೆ ಪಾವತಿಸುವ ಸಂದರ್ಭದಲ್ಲಿ ಶಾಸಕ ಆರ್. ವಿ. ದೇಶಪಾಂಡೆ ಅವರ ಹೆಸರನ್ನು ಸಹ ಎಳೆದು ತರುತ್ತಿದ್ದಾರೆ. ಇದರಿಂದಾಗಿ ಪ್ರಾಮಾಣಿಕ ಶಾಸಕ ದೇಶಪಾಂಡೆ ಅವರ ಗೌರವಕ್ಕೆ ಧಕ್ಕೆ ಉಂಟಾಗುತ್ತಿದೆ ಎಂದರು.

ಬಳಿಕ ಮಧ್ಯಪ್ರವೇಶಿಸಿದ ಎಕ್ಸಿಕ್ಯೂಟಿವ್ ಇಂಜಿನಿಯರ್ ಬಸವರಾಜ ಪಾಟೀಲ್ ಅವರು ಎಲ್ಲ ಗುತ್ತಿಗೆದಾರರಿಗೆ ಒಂದೇ ಸಮಯದಲ್ಲಿ ಕಾಮಗಾರಿಯ ಮೊತ್ತವನ್ನು ಪಾವತಿಸಲು ಆಗುವುದಿಲ್ಲ. ಸರಕಾರ ಹಣ ಬಿಡುಗಡೆ ಮಾಡಿದ ಬಳಿಕ ಹಂತ ಹಂತವಾಗಿ ಜಮೆ ಮಾಡಲಾಗುತ್ತದೆ ಎಂದು ತಿಳಿಸಿ ವಾತಾವರಣವನ್ನು ತಿಳಿಗೊಳಿಸಲು ಪ್ರಯತ್ನಿಸಿದರು.

ಗುತ್ತಿಗೆದಾರ ಮತ್ತು ಅಕೌಂಟೆಂಟ್ ನಡುವೆ ತೀವ್ರ ಮಾತಿನ ಚಕಮಕಿ ನಡುವೆ ಗುತ್ತಿದೆಗಾರ ಶಾಸಕ ಆರ್. ವಿ. ದೇಶಪಾಂಡೆ ಅವರನ್ನು ಫೋನ್ ಮೂಲಕ ಸಂಪರ್ಕಿಸಿ ಅಕೌಂಟೆಂಟ್ ವಿರುದ್ಧ ದೂರು ನೀಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ವಿನಂತಿಸಿದರು.

“ಹಿರಿಯ ಅಧಿಕಾರಿಗಳ ನಿರ್ದೇಶನ ಹಾಗೂ ಮಾರ್ಗದರ್ಶನದಂತೆ ನಾವು ಕರ್ತವ್ಯ ನಿರ್ವಹಿಸುತ್ತೇವೆ. ಕಾನೂನು ಉಲ್ಲಂಘಿಸಿ ಯಾರಿಗೂ ಮೊತ್ತವನ್ನು ಜಮೆ ಮಾಡಿಲ್ಲ.”

– ಮಂಜುನಾಥ ಬೆಟದೂರ.
ಸಣ್ಣ ನೀರಾವರಿ ಇಲಾಖೆ. ವಿಭಾಗ ಕಚೇರಿ , ಅಕೌಂಟೆಂಟ್.

Latest Indian news

Popular Stories