ಕಾರವಾರ ಕಡಲ ತೀರದಲ್ಲಿ ಸಾಂಪ್ರದಾಯಿಕ ದಡದ ಮೀನುಗಾರಿಕೆ ಪ್ರಾರಂಭ

ಕಾರವಾರ : ಮಳೆಗಾಲದಲ್ಲಿ ಯಾಂತ್ರಿಕ ಮೀನುಗಾರಿಕೆ ನಿಷೇಧವಾಗುತ್ತಿದ್ದಂತೆ , ಸಮುದ್ರದ ದಡದಲ್ಲಿ ಬಲೆ ಹಾಕಿ ಮಾಡುವ ಸಾಂಪ್ರದಾಯಿಕ ಮೀನುಗಾರಿಕೆ ಪ್ರಾರಂಭವಾಗಿದೆ. ಜಿಲ್ಲೆಯ ಎಲ್ಲಾ ಕಡಲ ತೀರದಲ್ಲಿ ಸಣ್ಣ ಪ್ರಮಾಣದಲ್ಲಿ ಸಾಂಪ್ರದಾಯಿಕ ಮೀನುಗಾರಿಕೆ ಕಾಣ ಬರುತ್ತಿದ್ದು, ಟ್ರಡಿಶನಲ್ ಫಿಶ್ಶಿಂಗ್ ಪೂರ್ಣ ಕಣ್ಮರೆಯಾಗಿಲ್ಲ. ಇದು ಹೆಚ್ಚು ಲಾಭದಾಯಕ ಉದ್ಯಮವಲ್ಲ. ಒಂದು ಕುಟುಂಬ ಒಂದು ದಿನದ ಹೊಟ್ಟೆ ತುಂಬಲು ತೊಂದರೆ ಇಲ್ಲದ ಮೀನುಗಾರಿಕೆ ಇದು . ಅಬ್ಬರದ ಅಲೆ ಕಡಿಮೆಯಾದಾಗ, ಪ್ರಶಾಂತ ಸಮುದ್ರದಲ್ಲಿ 8 ರಿಂದ 10 ಜನರ ಗುಂಪು ಏಂಡಿ ಬಲೆಯನ್ನು ಸಮುದ್ರದಲ್ಲಿ 35 ರಿಂದ 40 ಮೀಟರ್ ಉದ್ದಗಲಕ್ಕೆ ಎಳೆದು , ಸಮುದ್ರದ ಆಳಕ್ಕೆ ಬಲೆ ಮುಳುಗಿಸಿ, ಗಂಟೆಕಾಲ ಬಿಟ್ಟು, ಮತ್ತೆ ಬಲೆ ಎಳೆಯುವರು. ಸಮುದ್ರದ ಈಜು ಬಲ್ಲ ನುರಿತ ಕಾರ್ಮಿಕರು ಸಾಂಪ್ರದಾಯಿಕ ಮೀನುಗಾರಿಕೆಗೆ ಬೇಕು. ಹಾಗೆ ನುರಿತ ಮೀನುಗಾರರು ಸಮುದ್ರದ ಸ್ವಭಾವ ಅರಿತು , ಪಾತಿ ದೋಣಿಗಳ ಮೂಲಕ ಬಲೆ ಹಿಡಿದು ಸಮುದ್ರದ ಕಣ್ಣಳತೆಯ ಅನತಿ ದೂರಕ್ಕೆ ( 400 ರಿಂದ 900 ಮೀಟರ್ ) ಸಾಗಿ ಏಂಡಿ ಬಲೆ ಬಿಡುತ್ತಾರೆ. ಬಕೆ ಸಿಕ್ಕಷ್ಟು ಮೀನು ಬಾಚುತ್ತಾರೆ. ಮೀನುಗಳಿಗೆ ಸಂತಾನೋತ್ಪತ್ತಿ ಕಾಲವಾಗಿದ್ದರೂ, ಗಾಳಿ ಮಳೆಗೆ ದಿಕ್ಕು ತಪ್ಪಿ ದಡಕ್ಕೆ ಬಂದ ಚಿಕ್ಕಪುಟ್ಟ ಜಾತಿಯ ಮೀನುಗಳು ಬಲೆಗೆ ಬೀಳುತ್ತವೆ.
ಕೆಲವೊಮ್ಮೆ ಬರಪೂರ ಮೀನು ಸಿಕ್ಕರೆ,‌ಕೆಲವೊಮ್ಮೆ ಕುಟುಂಬಕ್ಕೆ ಬೇಕಾಗುವಷ್ಟು ಮೀನು ಸಿಕ್ಕೇ ಸಿಗುತ್ತದೆ.

ಪಂಚರಾಶಿ ಮೀನು ಹೆಚ್ಚು:

ಬಂಗಡೆ, ಶೆಟ್ಲಿ,‌ ತರಲೆ, ಪೇಡೆ,‌ದೋಡಿ, ನೊಗ್ಲೆ ಜಾತಿಯ ಮೀನು ಸಿಗುವುದು ಹೆಚ್ಚು. ನುಚ್ಕಿ ಸೇರಿದಂತೆ, ಸಮುದ್ರ ಏಡಿ, ಸಣ್ಣ ಸಣ್ಣ ಗುಂಪುಗಳ ಮೀನು ಸಿಗುವುದು ಸಾಮಾನ್ಯ. ಹಲವು ಜಾತಿಯ ಮೀನು ಸಿಗುವ ಕಾರಣಕ್ಕಾಗಿ ಈ ಮೀನಿನ ರಾಶಿಯನ್ನು ಪಂಚರಾಶಿ ಎಂದು ಕರೆಯುವುದು ವಾಡಿಕೆ. ಮನೆಯ ಆಹಾರಕ್ಕೆ ಬೇಕಾಗುವಷ್ಟು ಉಳಿಸಿಕೊಂಡು, ದಡದಲ್ಲೇ ಬಂದ ಗ್ರಾಹಕರಿಗೆ ಮೀನು ಮಾರುವ ಪದ್ಧತಿ ಸಹ ಇದೆ. ಅತ್ಯಂತ ಸೇಫ್ಟಿ ಮೀನುಗಾರಿಕೆ ಸಹ ಇದಾಗಿದ್ದು , ಒಮ್ಮೊಮ್ಮೆ ಅಪಾಯ ಘಟಿಸಿದ ಉದಾಹರಣೆಗಳಿವೆ. ಸಾಂಪ್ರದಾಯಿಕ ಮೀನುಗಾರಿಕೆ ಸಹ ಒಂದು ಕಲೆಯಾಗಿದ್ದು, ಮಳೆಗಾಲದಲ್ಲಿ ಆಹಾರದ ಕೊರತೆ ನೀಗಲು ದುಡಿವ ಮೀನುಗಾರರು ಇದರ ಮೊರೆ ಹೋಗುತ್ತಾರೆ‌ .

ಬಲೆಯಲ್ಲಿ ಚಿಮ್ಮುವ ಮೀನು :
ಸಾಂಪ್ರದಾಯಿಕ ಮೀನುಗಾರಿಕೆಯಲ್ಲಿ ಬಳಸುವ ಏಂಡಿ ಬಲೆಗೆ ಸಿಕ್ಕು ಚಿಮ್ಮುವ ಮೀನನ್ನು ದಡಕ್ಕೆ ಬಂದ ಪ್ರವಾಸಿಗರು ನೋಡಲು ನೆರೆಯುವುದುಂಟು‌ .ಅಲ್ಲದೇ ಕೆಲ ಸ್ಥಳೀಯರು ತಾಜಾ ಮೀನನ್ನು ಖರೀದಿಸಲು ಸಾಂಪ್ರದಾಯಿಕ ಮೀನುಗಾರಿಕೆ ನೋಡಲು ಬರುವವರು ಸಹ ಇದ್ದಾರೆ.
ಸಂಪ್ರದಾಯಿಕ ಮೀನುಗಾರಿಕೆ ಮೊದಲಿನಷ್ಟು ದೊಡ್ಡ ಪ್ರಮಾಣದಲ್ಲಿ ನಡೆಯದಿದ್ದರೂ,‌ ಸಂಪ್ರದಾಯಿಕ ಮೀನುಗಾರಿಕೆ ಮಾಡುವವರು ಈಗಲೂ ಬೆರಳೀಣಿಕೆಯಷ್ಟು ಉಳಿದಿದ್ದಾರೆಂಬುದು ಸಮಾಧಾನಕರ.
…..

Latest Indian news

Popular Stories