ಉ.ಕ |ರಾಷ್ಟಿಯ ಹೆದ್ದಾರಿ ಕಾಮಗಾರಿಗಳನ್ನು ನಿಗಧಿತ ಯೋಜನೆಯಂತೆ ಪೂರ್ಣಗೊಳಿಸಿ – ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

ಕಾರವಾರ : ಜಿಲ್ಲೆಯಲ್ಲಿ ಹಾದು ಹೋಗಿರುವ ಚತುಷ್ಪತ ರಾಷ್ಟಿಯ ಹೆದ್ದಾರಿಯ ಕಾಮಗಾರಿಯಲ್ಲಿ , ಉದ್ದೇಶಿತ ಯೋಜನೆಯಲ್ಲಿ ತಿಳಿಸಿರುವ ಎಲ್ಲಾ ಕಾಮಗಾರಿಗಳನ್ನು ಸಂಪೂರ್ಣವಾಗಿ ಮುಕ್ತಾಯಗೊಳಿಸುವಂತೆ, ಕಾಮಗಾರಿಯ ನೇತೃತ್ವ ವಹಿಸಿಕೊಂಡಿರುವ ರಾಷ್ಟಿಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಸೂಚನೆ ನೀಡಿದರು.

ಅವರು ಗುರುವಾರ ಕುಮಟಾದ ಸಹಾಯಕ ಕಮಿಷನರ್ ಕಛೇರಿಯಲ್ಲಿ ರಾಷ್ಟಿಯ ಹೆದ್ದಾರಿ ಪ್ರಾಧಿಕಾರದ ರಸ್ತೆ ಕಾಮಗಾರಿಗಳು ಹಾಗೂ ಸಮಸ್ಯೆಗಳ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಸ್ತುತ ರಾಷ್ಟಿಯ ಹೆದ್ದಾರಿಯ ಕಾಮಗಾರಿ ನಿರ್ವಹಿಸುತ್ತಿರುವ ಸಂಸ್ಥೆಯವರು ಕಾರವಾರದಿಂಧ ಭಟ್ಕಳದವರೆಗೆ ಕೇವಲ 7.8 ಕಿಮೀ ಮಾತ್ರ ಕಾಮಗಾರಿ ಬಾಕಿ ಎಂದು ತಿಳಿಸಿದ್ದು, ಈ ಬಾಕಿ ಕಾಮಗಾರಿಯ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ವರದಿ ನೀಡುವಂತೆ ಲೋಕೊಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.

ರಾಷ್ಟಿಯ ಹೆದ್ದಾರಿಯ ಹಲವು ಕಡೆಗಳಲ್ಲಿ ಅವೈಜ್ಞಾನಿಕ ಕಾಮಗಾರಿ ಹಾಗೂ ಸೂಕ್ತ ಚರಂಡಿ ವ್ಯವಸ್ಥೆ ನಿರ್ಮಿಸದೇ ಇರುವುದರಿಂದ ಕಾರವಾರ, ಮಾಜಾಳಿ ಮತ್ತು ನೌಕಾ ನೆಲೆ ಬಳಿ ಮಳೆಗಾಲದಲ್ಲಿ ತಗ್ಗು ಪ್ರದೇಶಗಳಲ್ಲಿನ ಸಾರ್ವಜನಿಕರ ಮನೆಗಳಿಗೆ ನೀರು ನುಗ್ಗಿ ತೀವ್ರ ತೊಂದರೆಯಾಗುತ್ತಿದ್ದು, ಈ ಸಮಸ್ಯೆಗೆ ಸೂಕ್ತ ಪರಿಹಾರ ಒದಗಿಸುವಂತೆ ಸೂಚನೆ ನೀಡಿದರು.

ಚತುಷ್ಪತ ರಾಷ್ಟಿಯ ಹೆದ್ದಾರಿಯ ಕಾಮಗಾರಿಯಲ್ಲಿ, ಅಪಘಾತ ಸ್ಥಳಗಳನ್ನು ಗುರುತಿಸಿ ಸೂಕ್ತ ಸೂಚನಾ ಫಲಕಗಳನ್ನು ಅಳವಡಿಸದಿರುವುದು, ರಸ್ತೆಯಲ್ಲಿ ಬೀದಿದೀಪಗಳನ್ನು ಅಳವಡಿಸದೇ ಇರುವುದು, ಸರ್ವಿಸ್ ರಸ್ತೆ ನಿರ್ಮಿಸದೇ ಇರುವುದು, ವಾಹನಗಳಿಗೆ ಅಂಡರ್ ಪಾಸ್ ನಿರ್ಮಾಣ, ಪಾದಚಾರಿಗಳಿಗೆ ಅಂಡರ್ ಪಾಸ್ ನಿರ್ಮಾಣ, ಬಸ್ ಶೆಲ್ಟರ್ ಗಳ ನಿರ್ಮಾಣ ಕಾಮಗಾರಿಗಳು ಇನ್ನು ಹಲವು ಕಡೆಗಳಲ್ಲಿ ಬಾಕಿ ಇದ್ದು, ಜಿಲ್ಲೆಯ ಸಾರ್ವಜನಿಕರ ಸುರಕ್ಷತೆ ಮತ್ತು ಹಿತರಕ್ಷಣೆಯೇ ತಮ್ಮ ಮುಖ್ಯ ಉದ್ದೇಶವಾಗಿದ್ದು, ಇವುಗಳನ್ನು ಪೂರ್ಣಗೊಳಿಸಿದ್ದಲ್ಲಿ ಈಗಾಗಲೇ ತಡೆಹಿಡಿದಿರುವ ಅನುಮತಿಗಳನ್ನು ನೀಡುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟವಾಗಿ ತಿಳಿಸಿದರು.

ಈಗಾಗಲೇ ಹಲವು ಕಡೆಗಳಲ್ಲಿ ಬಸ್ ಶೆಲ್ಟರ್ ಗಳ ನಿರ್ಮಾಣ ಹಾಗೂ ರಸ್ತೆ ಬದಿಯಲ್ಲಿ ಬೀದಿ ದೀಪಗಳನ್ನು ಅಳವಡಿಸಲಾಗಿದೆ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದರು. ಬೀದಿ ದೀಪಗಳನ್ನು ಅಳವಡಿಸಿದ್ದಲ್ಲಿ ಅವುಗಳನ್ನು ಸಂಬಂಧಪಟ್ಟ ಗ್ರಾಮ ಪಂಚಾಯತ್ ಗಳಿಗೆ ಹಸ್ತಾಂತರಿಸುವ0ತೆ ತಿಳಿಸಿದ ಜಿಲ್ಲಾಧಿಕಾರಿಗಳು, ಬಸ್ ಶೆಲ್ಟರ್ ಗಳು ಮತ್ತು ಬೀದಿದೀಪಗಳು ನಿಮಾರ್ಣವಾಗಿರುವ ಬಗ್ಗೆ ಪರಿಶೀಲಿಸಿ ವರದಿ ನಿಡುವಂತೆ ಸಂಬಂಧಪಟ್ಟ ಗ್ರಾ.ಪಂ. ಗಳ ಪಿಡಿಓ ಗಳಿಗೆ ಸೂಚಿಸಿದರು.

ವಾಹನಗಳ ಅಂಡರ್ ಪಾಸ್,ಪಾದಚಾರಿಗಳ ಅಂಡರ್ ಪಾಸ್ ಮತ್ತಿತರ ಕಾಮಗಾರಿಗಳು ಯೋಜನೆಯ ಮೂಲದಲ್ಲಿ ಇಲ್ಲವಾಗಿದ್ದರಿಂದ ಕಾಮಗಾರಿಗಳನ್ನು ಐ.ಆರ್.ಬಿ. ಸಂಸ್ಥೆಯಯವರು ನಿರ್ವಹಿಸಿಲ್ಲ, ಈ ಕಾಮಗಾರಿಗಳಿಗೆ ಅಂದಾಜು 172 ಕೋಟಿ ರೂ ವೆಚ್ಚವಾಗಲಿದ್ದು, ಇದನ್ನು ರಾಷ್ಟಿಯ ಹೆದ್ದಾರಿ ಪ್ರಾಧಿಕಾರದ ಮೂಲಕ ನಿರ್ವಹಿಸಲಾಗುವುದು ಎಂದು ರಾಷ್ಟಿಯ ಹೆದ್ದಾರಿ ಅಧಿಕಾರಿಗಳು ತಿಳಿಸಿದರು. ಈ ಕಾಮಗಾರಿಗಳನ್ನು ರಾಷ್ಟಿಯ ಹೆದ್ದಾರಿ ಪ್ರಾಧಿಕಾರ ನಿರ್ಮಿಸುವ ಬಗ್ಗೆ ಇರುವ ಆದೇಶ ಪತ್ರ ಮತ್ತು ಸೂಕ್ತ ದಾಖಲೆಗಳನ್ನು ನೀಡುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.

ಈ ಬಾರಿಯ ಮಳೆಗಾಲದಲ್ಲಿ ಚತುಷ್ಪತ ರಾಷ್ಟಿಯ ಹೆದ್ದಾರಿಯ ಕಾಮಗಾರಿಗಳಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ಯಾವುದೇ ರೀತಿಯ ತೊಂದರೆಗಳಾಗದ0ತೆ ತಕ್ಷಣದಿಂದಲೇ ಅಗತ್ಯವಿರುವ ಸುರಕ್ಷಾ ಕ್ರಮಳನ್ನು ಕೈಗೊಳ್ಳುವಂಎತ ಕಟ್ಟುನಿಟ್ಟಿನ ಸೂಚನೆ ನೀಡಿದ ಜಿಲ್ಲಾಧಿಕಾರಿಗಳು, ಆದಷ್ಟು ಶೀಘ್ರದಲ್ಲಿ ಸಂಪೂರ್ಣ ಕಾಮಗಾರಿಯನ್ನು ಸಂಪೂರ್ಣಗೊಳಿಸುವ0ತೆ ನಿರ್ದೇಶನ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ್, ಸಹಾಯಕ ಕಮಿಷನರ್ ಗಳಾದ ಕನಿಷ್ಕ, ಕಲ್ಯಾಣಿ ಕಾಂಬ್ಳೆ, ಡಾ.ನಯನಾ, ಸೀಬರ್ಡ್ ಅಧಿಕಾರಿಗಳು ,ಎನ್ ಎಚ್ ಎ ಐ ಅಧಿಕಾರಿಗಳು, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳದ ತಹಸೀಲ್ದಾರಗಳು, ಲೋಕೋಪಯೋಗಿ,, ಹೆಸ್ಕಾಂ , ಕರ್ನಾಟಕ ನಗರ ನೀರು ಸರಬರಾಜು ಹಾಗೂ ನಗರ ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ಉಪಸ್ಥಿತರಿದ್ದರು.
……

Latest Indian news

Popular Stories