ಮತ ಎಣಿಕೆಗೆ ಸಂಪೂರ್ಣ ಸಿದ್ದತೆ; ಜಿಲ್ಲಾ ಚುನಾವಣಾಧಿಕಾರಿ ಗಂಗೂಬಾಯಿ

.

ಕಾರವಾರ :  ಜೂನ್ 4 ರಂದು ನಡೆಯುವ ಮತ ಎಣಿಕೆಗೆ ಕುಮಟಾದ ಡಾ.ಎ.ವಿ.ಬಾಳಿಗಾ ಕಾಲೇಜಿನಲ್ಲಿ ಸಕಲ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಲ್ಲಾಧಿಕಾರಿ ಗಂಗೂಬಾಯಿ ಮಾನಕರ ಹೇಳಿದರು.

ಅವರು   ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ನಡೆದ ಪತ್ರಿಕಗೋಷ್ಟಿಯಲ್ಲಿ ಮಾತನಾಡಿದರು.
 ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ

ಒಟ್ಟು 8 ಮತ ಎಣಿಕೆಗೆ ಕೊಠಡಿಗಳನ್ನು ಗುರುತಿಸಲಾಗಿದ್ದು, ಪ್ರತೀ ಕೊಠಡಿಯಲ್ಲಿ 14 ಟೇಬಲ್‌ಗಳನ್ನು ಅಳವಡಿಸಲಾಗಿದೆ. ಮತ ಎಣಿಕೆ ಕಾರ್ಯಕ್ಕೆ 112 ಮತ ಎಣಿಕಾ ಮೇಲ್ವಿಚಾರಕರು, 112 ಮತ ಎಣಿಕೆ ಸಹಾಯಕರು ಹಾಗೂ 112 ಮೈಕ್ರೋ ಅಬ್ಸರ್‌ವರ್ ಗಳನ್ನು ನೇಮಿಸಲಾಗಿದ್ದು, ಮತ ಎಣಿಕೆ ಸಿಬ್ಬಂದಿಗೆ 2 ಹಂತದಲ್ಲಿ ತರಬೇತಿಯನ್ನು ನೀಡಲಾಗಿದೆ ಎಂದರು.
ಅಂಚೆ ಮತಪತ್ರಗಳ ಎಣಿಕೆಗಾಗಿ 20 ಟೇಬಲ್‌ಗಳನ್ನು ಹಾಕಲಾಗಿದ್ದು, 20 ಮಂದಿ ಸಹಾಯಕ ಎಣಿಕಾ ಅಧಿಕಾರಿಗಳು, 20 ಮಂದಿ ಎಣಿಕಾ ಮೇಲ್ವಿಚಾರಕರು, 40 ಮಂದಿ ಎಣಿಕೆ ಸಹಾಯಕರು ಹಾಗೂ 20 ಮಂದಿ ಮೈಕ್ರೋ ಅಬ್ಸರ್‌ವರ್‌ಗಳನ್ನು ನೇಮಿಸಲಾಗಿದೆ.

ಇಟಿಪಿಬಿಎಸ್ ಮತಗಳ ಎಣಿಕೆಗಾಗಿ ಪ್ರತ್ಯೇಕ ಕೊಠಡಿಯನ್ನು ತೆರೆಯಲಾಗಿದ್ದು, 2 ಮಂದಿ ಸಹಾಯಕ ಎಣಿಕಾ ಆಧಿಕಾರಿಗಳು, 20 ಮಂದಿ ಎಣಿಕಾ ಮೇಲ್ವಿಚಾರಕರು, 40 ಮಂದಿ ಎಣಿಕೆ ಸಹಾಯಕರನ್ನು ನೇಮಿಸಲಾಗಿದ್ದು, ಮತ ಎಣಿಕೆ ಕಾರ್ಯಕ್ಕಾಗಿ ಒಟ್ಟು 562 ಅಧಿಕಾರಿ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ ಎಂದರು.


ಮತ ಎಣಿಕೆ ಕಾರ್ಯವನ್ನು ಬೆಳಗ್ಗೆ 8 ಗಂಟೆಗೆ ಆರಂಭಿಸಲಾಗುವುದು. ಎಣಿಕಾ ಅಬ್ಸರ್‌ವರ್, ಜಿಲ್ಲಾ ಚುನಾವಣಾಧಿಕಾರಿ ಮತ್ತು ಸಹಾಯಕ ಚುನಾವಣಾಧಿಕಾರಿಗಳು ಮತ್ತು ಅಭ್ಯರ್ಥಿ ಅಥವಾ ಅಭ್ಯರ್ಥಿಗಳ ಏಜೆಂಟರ್ ರವರ ಸಮ್ಮುಖರದಲ್ಲಿ ಭದ್ರತಾ ಕೊಠಡಿಯನ್ನು ತೆರೆಯಲಾಗುವುದು. ಮೊದಲಿಗೆ ಅಂಚೆ ಮತ ಪತ್ರಗಳ ಎಣಿಕೆಯ ಕಾರ್ಯ ಆರಂಭಿಸಲಾಗುವುದು ಎಂದರು.


ಜಿಲ್ಲೆಯಲ್ಲಿ ಮನೆಯಿಂದಲೇ ನಡೆದ ಮತದಾನದಲ್ಲಿ 85 ವರ್ಷ ಮೇಲ್ಪಟ್ಟ 2985 ಮಂದಿ, 1924 ವಿಕಲಚೇತನರು , 253 ಅಗತ್ಯ ಸೇವೆಯ ನೌಕರರು ಹಾಗೂ 1164 ಚುನಾವಣಾ ಕರ್ತವ್ಯದಲ್ಲಿದ್ದ ಸಿಬ್ಬಂದಿಗಳ ಮತದಾನ ಸೇರಿದಂತೆ ಒಟ್ಟು 6236 ಮತದಾನವಾಗಿದೆ ಎಂದರು.
ಗರಿಷ್ಠ 23 ಸುತ್ತಿನ ಮತ ಎಣಿಕೆ ನಡೆಯಲಿದ್ದು, ಮಧ್ಯಾಹ್ನ 12 ಗಂಟೆಯ ವೇಳೆಗೆ ಸಂಪೂರ್ಣ ಫಲಿತಾಂಶ ಘೋಷಣೆಯಾಗುವ ಸಾಧ್ಯತೆಯಿದೆ. ಖಾನಾಪುರ ವಿಧನಸಭಾ ಕ್ಷೆತ್ರದಲ್ಲಿ 23, ಕಿತ್ತೂರು 17, ಹಳಿಯಾಳ 16, ಕರವಾರ 19, ಕುಮಟಾ 16, ಭಟ್ಕಳ 18, ಶಿರಸಿ 19, ಯಲ್ಲಾಪುರ ದಲ್ಲಿ 17 ಸುತ್ತಿನ ಮತ ಎಣಿಕೆ ನಡೆಯಲಿದೆ ಎಂದರು.
ಮತ ಎಣಿಕೆ ಆವರಣದಲ್ಲಿ ಮೊಬೈಲ್ ಬಳಕೆಯನ್ನು ಕಡ್ಡಾಯವಾಗಿ ನಿಸೇಧಿಸಲಾಗಿದ್ದು, ವಿವಿಧ ರಾಜಕೀಯ ಪಕ್ಷಗಳ ಮತ್ತು ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಮತ್ತು ಅವರ ಏಜೆಂಟರ್ ಗೆ ಒಟ್ಟು 318 ಮತ ಎಣಿಕಾ ಕೊಠಡಿಯ ಪಾಸ್ ಗಳನ್ನು ವಿತರಿಸಲಾಗಿದೆ ಎಂದರು.
ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ್ ಉಪಸ್ಥಿತರಿದ್ದರು.
……

Latest Indian news

Popular Stories