ಕಾರವಾರ: ಏಳನೇ ವೇತನ ಆಯೋಗದ ವರದಿ ಅನುಷ್ಠಾನ ಮಾಡಬೇಕು ಎಂದು ಮುಖ್ಯಮಂತ್ರಿಗಳನ್ನು ಉತ್ತರ ಕನ್ನಡ ಜಿಲ್ಲಾ ಸರ್ಕಾರಿ ನೌಕರರ ಸಂಘದಿಂದ ಒತ್ತಾಯಿಸಿತು.
ಗುರುವಾರ ಕಾರವಾರದಲ್ಲಿ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ ಅವರನ್ನು ಭೇಟಿಯಾದ ಜಿಲ್ಲಾ ನೌಕರರ ಸಂಘದ ಪದಾಧಿಕಾರಿಗಳು ತಮ್ಮ ಬೇಡಿಕೆ ಗಳ ಲಿಖಿತ ಮನವಿಯನ್ನು ನೀಡಿತಲ್ಲದೆ,
ಮುಖ್ಯಮಂತ್ರಿಗಳಿಗೆ ನೌಕರರ ಬೇಡಿಕೆಗಳ ಮನವಿ ಕಳುಹಸಿ ಕೊಡಲು ಜಿಲ್ಲಾಧಿಕಾರಿಗಳಿಗೆ ವಿನಂತಿಸಿತು.
ಏಳನೇ ವೇತನ ಆಯೋಗದ ವರದಿ ಅನುಷ್ಠಾನಕ್ಕೆ ಸಿದ್ದರಾಮಯ್ಯನವರ ಸರ್ಕಾರ ಶೀಘ್ರ ಸಮ್ಮತಿ ನೀಡಬೇಕು . ರಾಜ್ಯ ಸರ್ಕಾರಿ ನೌಕರರು 2.5 ಲಕ್ಷದಷ್ಟಿದ್ದಾರೆ. ಅಲ್ಲದೆ 2.5 ಲಕ್ಷ ಸರ್ಕಾರಿ ನೌಕರರ ಹುದ್ದೆ ಖಾಲಿ ಇವೆ. ಇವರ ಕಾರ್ಯಾಭಾರ ನಮ್ಮ ಮೇಲಿದೆ. ನಾವು ಒತ್ತಡದಲ್ಲಿ ಕೆಲಸಮಾಡುತ್ತಿದ್ದೇವೆ.
ಖಾಲಿ ಹುದ್ದೆ ಭರ್ತಿ ಮಾಡದ ಕಾರಣ ಸರ್ಕಾರಕ್ಕೆ 8500 ಕೋಟಿ ರೂ.ಉಳಿತಾಯವಾಗುತ್ತಿದೆ ಎಂದು ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಸಂಜೀವ ಕುಮಾರ್ ನಂತರ ಮಾಧ್ಯಮಗಳಿಗೆ ವಿವರಿಸಿದರು. ಹೊರ ಗುತ್ತಿಗೆ ಮೇಲೆ ಕೆಲಸ ನಿರ್ವಹಿಸಲಾಗುತ್ತಿದೆ. ಸರ್ಕಾರಿ ನೌಕರರು ಆರನೇ ವೇತನ ಆಯೋಗದ ನಂತರ ಏಳನೇ ವೇತನ ಆಯೋಗದ ಶಿಫಾರಸುಗಳ ಜಾರಿಗೆ ಕಾಯುತ್ತಿದ್ದಾರೆ.ಇದರಿಂದ 2.5 ಲಕ್ಷ ನೌಕರರು ನೆಮ್ಮದಿ ಸಾಧ್ಯವಾಗುತ್ತದೆ ಎಂದರು.
ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ್ ಕುಮಾರ್ ಮಾತನಾಡಿ ರಾಜ್ಯ 7ನೇ ವೇತನ ಆಯೋಗವು ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನು ಯಥಾವತ್ತಾಗಿ ಅನುಷ್ಠಾನಗೊಳಿಸಿ ಸರ್ಕಾರ ಆದೇಶ ಹೊರಡಿಸಬೇಕು.
ವೇತನ ಆಯೋಗವು ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ಶಿಫಾರಸ್ಸು ವರದಿಯಲ್ಲಿನ ಫಿಟ್‌ಮೆಂಟ್ ಸೌಲಭ್ಯವನ್ನು ಕನಿಷ್ಠ ಶೇ. 27.50 ಕ್ಕೆ ಹೆಚ್ಚಿಸಿ ಕಾಲ್ಪನಿಕವಾಗಿ 1-7-22 ರಿಂದ ಅನ್ವಯವಾಗುವಂತೆ ವೇತನ ನಿಗಧಿಪಡಿಸಿ, ದಿ: 1-4-24 ರಿಂದ ಆರ್ಥಿಕ ಸೌಲಭ್ಯವನ್ನು ನೀಡಿ ಸರ್ಕಾರಿ ಆದೇಶ ಹೊರಡಿಸಬೇಕು ಎಂದರು. ಎನ್.ಪಿ.ಎಸ್. ರದ್ದುಪಡಿಸಿ ಹಳೇ ಪಿಂಚಣೆ ಯೋಜನೆಯನ್ನು ಮರು ಜಾರಿಗೊಳಿಸಬೇಕು.
ರಾಜ್ಯದ ಎನ್.ಪಿ.ಎಸ್. ನೌಕರರ ಜೀವನ ನಿರ್ವಹಣೆ ಹಾಗೂ ಸಂಧ್ಯಾಕಾಲದ ಬದುಕು ಅತ್ಯಂತ ಕಷ್ಟಕರವಾಗಿರುವುದರಿಂದ ಎನ್.ಪಿ.ಎಸ್. ನೌಕರರನ್ನು ಓ.ಪಿ.ಎಸ್. ವ್ಯಾಪ್ತಿಗೆ ತರುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ವಿನಂತಿಸಿದರು .ಹಿಂದೆ ಅಧಿಕಾರದಲ್ಲಿದ್ದವರು ರಾಜ್ಯ ಸರಕಾರಿ ನೌಕರರ ಹಿತ ಕಾಯಲಿಲ್ಲ. ಸಿದ್ದರಾಮಯ್ಯ ಅವರ ಮೇಲೆ ಹೆಚ್ಚಿನ ಭರವಸೆ ಇದೆ ಎಂದು ರಮೇಶ್ ಹೇಳಿದರು.
ಈಗಾಗಲೇ ಪಂಜಾಬ್, ರಾಜಸ್ಥಾನ, ಚತ್ತಿಸ್‌ಘಡ, ಜಾರ್ಖಂಡ್ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿರುವಂತೆ ಹಾಗೂ ಕಾಂಗ್ರೆಸ್ ಸರ್ಕಾರ
ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯಂತೆ ಕರ್ನಾಟಕದಲ್ಲೂ ಸಹ ಎನ್.ಪಿ.ಎಸ್. ಯೋಜನೆಯನ್ನು ರದ್ದುಪಡಿಸಿ ಹಳೇ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವುದು ಎಂಬ ಭರವಸೆಯಿದೆ ಎಂದರು. ಕರ್ನಾಟಕ ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆ (ಕೆ.ಎ.ಎಸ್.ಎಸ್) ಅನುಷ್ಠಾನಗೊಳಿಸಬೇಕು.
ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ನಗದುರಹಿತ ಚಿಕಿತ್ಸೆ ನೀಡುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ (ಕೆ.ಎ.ಎಸ್.ಎಸ್)ಗೆ ಈ ಹಿಂದಿನ ರಾಜ್ಯ ಸರ್ಕಾರವು 21-22 ರ ಆಯವ್ಯದಲ್ಲಿ ಘೋಷಿಸಿತ್ತು. ಈಗಾಗಲೇ ಸಚಿವ ಸಂಪುಟದ ಅನುಮೋದನೆ ಪಡೆದು 5 – 9 – 22 ರಂದು ಸರ್ಕಾರಿ ಆದೇಶ ಹೊರಡಿಸಿದೆ.
ಈ ಯೋಜನೆಗೆ ರಾಜ್ಯ ಸರ್ಕಾರಿ ನೌಕರರ ವೇತನದಿಂದ ಪ್ರತಿ ತಿಂಗಳು ವೃಂದವಾರು ವಂತಿಗೆ ಕಡತವಾಗುತ್ತಿದೆ.ಹಾಗಾಗಿ ಸರ್ಕಾರಕ್ಕೆ ಹೆಚ್ಚಿನ ಆರ್ಥಿಕ ಹೊರೆಯಾಗುವುದಿಲ್ಲ. ಯೋಜನೆಯ ಅನುಷ್ಟಾನಾಧಿಕಾರಿಗಳು ತಾಂತ್ರಿಕ ಹಾಗೂ ಇನ್ನಿತರ ಕಾರಣಗಳನ್ನು ನೀಡಿ ಈ ಯೋಜನೆಯನ್ನು ಜಾರಿಗೊಳಿಸಲು ಅನಗತ್ಯ ವಿಳಂಬ ಮಾಡುತ್ತಿದ್ದಾರೆ. ನೌಕರರಿಗೆ ಆರ್ಥಿಕ ಹೊರೆಯಾಗುತ್ತಿರುವುದರಿಂದ ಶೀಘ್ರವಾಗಿ ಈ ಯೋಜನೆಯನ್ನು ಲೋಕಾರ್ಪಣೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ರಾಜ್ಯ ಸರ್ಕಾರಿ ನೌಕರರ ಮೇಲ್ಕಂಡ 3 ನ್ಯಾಯಯುತ ಬೇಡಿಕೆಗಳನ್ನು ಜಾರಿಗೊಳಿಸುವಲ್ಲಿ ಈಗಾಗಲೇ ತುಂಬಾ ವಿಳಂಬವಾಗಿದೆ. ಈ ಸಂಬಂಧ ಶೀಘ್ರ ಸರ್ಕಾರಿ ಆದೇಶ ಹೊರಡಿಸಲು ವಿನಂತಿಸಿದರು. ನೌಕರರ ಸಂಘದ ಪದಾಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.
…..