ಕೃತಕ ಬಂಡೆಸಾಲು ಮೂಲಕ ಸಾಂಪ್ರದಾಯಿಕ ಮೀನುಗಾರರ ಅಭಿವೃದ್ಧಿ : ಸಚಿವ ಮಂಕಾಳ ವೈದ್ಯ

ಕಾರವಾರ:ಮೀನುಗಾರಿಕ ವಲಯದ ಪುನಾಶ್ಚೇತನದ ಜೊತೆಗೆ ಸಾಗರ ಪರಿಸರ ಸಂರಕ್ಷಣೆಯ ಮೂಲಕ ಮೀನುಗಾರರಲ್ಲಿ ಹೊಸ ಆಶಾಕಿರಣ ಮತ್ತು ಸಮೃದ್ಧ ಸಾಗರ ಸಬಲೀಕರಣ ಮಾಡುವ ಉದ್ದೇಶದಿಂದ ಕೃತಕ‌ ಬಂಡೆಸಾಲುಗಳನ್ನು ಸ್ಥಾಪಿಸಿ ಮೀನುಗಾರರ ಆರ್ಥಿಕ ಸ್ಥಿತಿ ಉತ್ತಮ ಪಡಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ ಎಸ್. ವೈದ್ಯ ಹೇಳಿದರು.

ಅವರು ಶನಿವಾರ ಭಟ್ಕಳ ತಾಲೂಕಿನ ಬೆಳಕೆ‌ ಗ್ರಾಮದಲ್ಲಿ ಮೀನುಗಾರಿಕೆ‌ ಇಲಾಖೆ ವತಿಯಿಂದ‌ ಆಯೋಜಿಸಿದ ಸಾಂಪ್ರದಾಯಿಕ ಮೀನುಗಾರರ ಜೀವನೋಪಾಯವನ್ನು ಉತ್ತಮ ಪಡಿಸಲು ಉತ್ತರ ಕನ್ನಡ ಜಿಲ್ಲೆಯ ಸಮುದ್ರದ 25 ಸ್ಥಳಗಳಲ್ಲಿ ರಾಜ್ಯ ಮತ್ತು ಕೇಂದ್ರ‌ ಸರ್ಕಾರದ‌ ಅನುದಾನದಡಿ ಕೃತಕ ಬಂಡೆಸಾಲುಗಳ ಅಳವಡಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸುಸ್ಥಿರ ಮೀನುಗಾರಿಕೆ ನಿರ್ವಹಣೆಗಾಗಿ, ಸಮುದ್ರ ಮೀನುಗಾರಿಕೆಯನ್ನು ಮುಂದಿನ‌‌ ಪೀಳಿಗೆಗೆ ಉಳಿಸಿ ಆಹಾರ ಭದ್ರತೆ ಕಲ್ಪಿಸಲು ಹಾಗೂ ಸಾಂಪ್ರದಾಯಿಕ ಮೀನುಗಾರರ‌ ಜೀವನೋಪಾಯಕ್ಕಾಗಿ ರಾಜ್ಯದ‌ ಕರಾವಳಿಯ ಮೂರು ಜಿಲ್ಲೆಗಳ 56 ಆಯ್ದ ಸೂಕ್ತ ಸ್ಥಳಗಳಲ್ಲಿ 17.37 ಕೋಟಿ ರೂ ವೆಚ್ಚದಲ್ಲಿ ಕೃತಕ‌ ಬಂಡೆಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಇದರ ಮೊದಲ ಭಾಗವಾಗಿ ಭಟ್ಕಳ ತಾಲೂಕಿನ‌ ಬೆಳಕೆಯಲ್ಲಿ 180 ಕೃತಕ ಬಂಡೆಗಳನ್ನು ಅಳವಡಿಸಲಾಗುತ್ತಿದೆ ಎಂದರು.

ಮೀನುಗಾರರ ಅನುಕೂಲಕ್ಕಾಗಿ ಮುಂದಿನ ದಿನಗಳಲ್ಲಿ ಬೆಳಕೆಯಲ್ಲಿ ರೂ. 200 ಕೋಟಿ ವೆಚ್ವದಲ್ಲಿ ಬಂದರು ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಹಾಗೂ ಬೆಳಕೆಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದರು.

ರಾಜ್ಯದ ಈ ವರ್ಷದ ಬಜೆಟ್ ನಲ್ಲಿ ಮೀನುಗಾರಿಕೆ ಮತ್ತು ಬಂದರು ಇಲಾಖೆಗೆ 5000 ಕೋಟಿ ರೂ ಮೀಸಲಿಡುವ ಮೂಲಕ ರಾಜ್ಯದ ಸಮಸ್ತ ಮೀನುಗಾರರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.

ಮೀನುಗಾರಿಕೆ ಇಲಾಖೆ ವತಿಯಿಂದ ಮೀನು ಉತ್ಪಾದನೆ‌ ಹೆಚ್ಚಿಸಲ, ಮೀನುಗಾರಿಕೆಗೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಮೀನುಗಾರರ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿ ಉತ್ತಮಪಡಿಸಲು ಮತ್ತು ಹೊಸ ತಾಂತ್ರಿಕತೆಗಳನ್ನು ಬಳಕೆಗೆ ತರಲು ಹತ್ತು ಹಲವಾರು ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿದೆ‌ ಎಂದರು.
ಮೀನುಗಾರಿಕೆ ಇಲಾಖೆ ನಿರ್ದೇಶಕ ದಿನೇಶ ಕುಮಾರ್ ಕಳ್ಳೇರ್ ಪ್ರಾಸ್ತಾವಿಕವಾಗಿ ಮಾತನಾಡಿ, ಕರ್ನಾಟಕದಲ್ಲೇ ಪ್ರಥಮ ಬಾರಿಗೆ ಸಾಂಪ್ರದಾಯಕ ಮತ್ತು ನಾಡುದೋಣಿ‌ ಮೀನುಗಾರಿಕೆ ಮಾಡಲು ಅನುಕೂಲವಾಗುವ ದೃಷ್ಟಿಯಿಂದ 5 ನಾಟಿಕಲ ಮೈಲು ಒಳಗೆ ಕೃತಕ ಬಂಡೆ ಸಾಲುಗಳನ್ನು ಅಳವಡಿಸಲಾಗುತ್ತಿದ್ದು, ವರ್ಷಕೊಮ್ಮೆ ಇದರ ನಿರ್ವಹಣೆ ಮಾಡಲಾಗುತ್ತದೆ‌ ಎಂದರು.
..

Latest Indian news

Popular Stories