ಕಾರವಾರ: ಕಾರವಾರ ನಗರಸಭೆ ಸಭಾಂಗಣದಲ್ಲಿ ನಗರಸಭೆಯ ಬಜೆಟ್ ನ್ನು ಸೋಮವಾರ ಸಂಜೆ ಆರು ಗಂಟೆಗೆ ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಮಂಡಿಸಿದರು.
ವಿಶೇಷ ಅನುದಾನ ಸೇರಿದಂತೆ ರೂ. 38,65,09,100 ಗಾತ್ರದ ಬಜೆಟ್ ಮಂಡಿಸಿದ ಅವರು
10.92 ಲಕ್ಷ ರೂ. ಗಳ ಉಳಿತಾಯ ಬಜೆಟ್ ಇದಾಗಿದೆ ಎಂದರು. ಬರುವ ಆರ್ಥಿಕ ವರ್ಷವಾದ
2024-25ನೇ ಸಾಲಿಗೆ ನಗರಸಭೆಗೆ ತೆರಿಗೆ, ಎಸ್.ಎಫ್.ಸಿ, ವಿಶೇಷ ಅನುದಾನ ಸೇರಿದಂತೆ 38,65,09,100 ರೂ. ಆದಾಯ ಸಂಗ್ರಹವಾಗಲಿದೆ. ಈ ಪೈಕಿ ರೂ. 38,54,16,500 ಗಳನ್ನು ವಿವಿಧ ಕಾರ್ಯಕ್ರಮಗಳಿಗೆ ವೆಚ್ಚ ಮಾಡಲಾಗುತ್ತಿದೆ. ಹೊಸ ರಸ್ತೆಗೆ 327 ಲಕ್ಷ ರೂ. ಚರಂಡಿ ನಿರ್ಮಾಣಕ್ಕೆ 234 ಲಕ್ಷ, ಯಂತ್ರೋಪಕರಣ ಖರೀದಿಗೆ 115 ಲಕ್ಷ ರೂ.ಸೇರಿದಂತೆ ನಗರದ ಮೂಲಸೌಕರ್ಯಕ್ಕೆ ಗರಿಷ್ಠಕ್ಕೆ ವೆಚ್ಚ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸಭೆಗೆ ವಿವರಿಸಿದರು.
ಬಜೆಟ್ ಮಂಡಿಸಿದಂತೆ ಕಾಮಗಾರಿಗಳು ಬೇಗನೆ ಅನುಷ್ಠಾನವಾಗಬೇಕು. ಹಿಂದೆ 2023-24 ರ ಬಜೆಟ್‍ನಲ್ಲಿ ಅನುಷ್ಠಾನ ಸರಿಯಾಗಿರಲಿಲ್ಲ ಎಂದು ಸದಸ್ಯ ಸಂದೀಪ ತಳೇಕರ ಹೇಳಿದರು.
ನಿಯಮ ಉಲ್ಲಂಘಿಸಿ ಕೈಗೊಳ್ಳಲಾಗಿದ ಕಾಮಗಾರಿ ಬಗ್ಗೆ ಲೋಕಾಯುಕ್ತ ತನಿಖೆ :*
ಕಳೆದ ಮೂರು ವರ್ಷಗಳ ಅವಧಿಯಲ್ಲಿ ನಗರಸಭೆಯಲ್ಲಿ ನಡೆದ ಕೆಲ ಅಭಿವೃದ್ಧಿ ಕಾಮಗಾರಿಗಳನ್ನು ನಿಯಮ ಉಲ್ಲಂಘಿಸಿ ಕೈಗೊಳ್ಳಲಾಗಿದ್ದು, ಅವುಗಳನ್ನು ಲೋಕಾಯುಕ್ತ ತನಿಖೆಗೆ ನೀಡಲಾಗುವುದು ಎಂದು ನಗರಸಭೆಯ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಹೇಳಿದರು.
ನಗರಸಭೆಯ ಬಜೆಟ್ ಮಂಡನೆಯ ಸಭೆಯಲ್ಲಿ ಕೆ.ಎಂ.ಸಿ.ಎ ಅಧ್ಯಕ್ಷರೂ ಆಗಿರುವ ಶಾಸಕ ಸತೀಶ ಸೈಲ್, ಈಚೆಗೆ ಹಬ್ಬುವಾಡಾ ರಸ್ತೆ ಕಾಮಗಾರಿ ವಿಚಾರವನ್ನು ಪ್ರಸ್ತಾಪಿಸಿ ತನ್ನ ವಿರುದ್ಧ ಪ್ರತಿಭಟನೆ ನಡೆಯಿತು.
ಮಾಜಿ ಶಾಸಕರು ನನ್ನ ಮೇಲೆ ಅನಗತ್ಯವಾಗಿ ಆರೋಪ ಹೊರಿಸಿದ್ದಾರೆ. ಅವರದೇ ಅವಧಿಯಲ್ಲಿ ಕೈಗೊಂಡ ಕಾಮಗಾರಿ ಅದು. ಅದು ಪೂರ್ಣವಾಗುವ ಮುನ್ನ ಉದ್ಘಾಟನೆ ಮಾಡಬಾರದಿತ್ತು ಎಂದರು.
ಇದಕ್ಕೆ ಆಕ್ಷೇಪಿ ಎತ್ತಿದ ನಗರಸಭೆ ಬಿಜೆಪಿ ಸದಸ್ಯ ರವಿರಾಜ್ ಅಂಕೋಲೇಕರ, ರಸ್ತೆ ಪಕ್ಕ ಚರಂಡಿ ನಿರ್ಮಿಸಲಾಗಿದೆ . ಅದಕ್ಕೆ ಕಾಂಕ್ರೀಟ್ ಸ್ಲ್ಯಾಬ್ ಅಳವಡಿಕೆಗೆ ಒಂದು ಕೋಟಿ ಮೀಸಲಿಡಲಾಗಿದೆ. ಇನ್ನೂ ಕಾಮಗಾರಿ ಕೈಗೊಂಡಿಲ್ಲ ಎಂದರು.
ಇದಕ್ಕೆ ಉತ್ತರಿಸಿದ ಶಾಸಕ ಸೈಲ್, ಕಳೆದ ಅವಧಿಯಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ಟೆಂಡರ್ ಕರೆಯದೆ ಹಲವು ಕಾಮಗಾರಿಗಳು ನಡೆದಿದ್ದವು. ಸರಿಯಾಗಿ ಪೂರ್ಣಗೊಳ್ಳದ ಹಲವು ಕಾಮಗಾರಿಗಳು ಇವೆ. ಅವುಗಳ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು.
2022 -24 ಸಮಯದ ಕಾಮಗಾರಿಗಳ ಪಟ್ಟಿ ಸಿದ್ಧಪಡಿಸಲಾಗಿದೆ. ಕೆಲವು ನಿಯಮ ಮೀರಿ ನಡೆಸಿದ್ದೂ ಇವೆ. ಅವುಗಳನ್ನು ತನಿಖೆಗೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಪಂಚರಿಷಿ ವಾಡಾದಲ್ಲಿ ಆವರಣ ಗೋಡೆ ನಿರ್ಮಾಣಕ್ಕೆ ಒಂದೂವರೆ ವರ್ಷದ ಹಿಂದೆಯೇ ಮಂಜೂರಾತಿ ದೊರೆತಿದ್ದರೂ ಕಾಮಗಾರಿ ಆರಂಭಿಸಿಲ್ಲ ಎಂದು ಸದಸ್ಯೆ ಸ್ನೇಹಾ ಮಾಂಜ್ರೇಕರ ಆರೋಪಿಸಿದರು.
ಬೀದಿದೀಪಗಳ ನಿರ್ವಹಣೆಗೆ ಎಲ್.ಇ.ಡಿ ಅಳವಡಿಕೆಯಾಗುತ್ತಿದೆ. ಪುನಃ 5.5 ರೂ. ಕೋಟಿ ಮೀಸಲಿಟ್ಟಿರುವುದು ನಗರಸಭೆಗೆ ಹೊರೆಯಾಗಲಿದೆ ಎಂದು ಸದಸ್ಯ ಮಕ್ಬುಲ್ ಶೇಖ್ ಅಭಿಪ್ರಾಯಪಟ್ಟರು.
ಸ್ಥಾಯಿ ಸಮಿತಿ ಅಧ್ಯಕ್ಷ ಮನೋಜ ಬಾಂದೇಕರ, ಪೌರಾಯುಕ್ತ ಕೆ.ಚಂದ್ರಮೌಳಿ , ಆಡಳಿತ ಮತ್ತು ವಿರೋಧಪಕ್ಷದ ಸದಸ್ಯರು ಉಪಸ್ಥಿತರಿದ್ದರು.
……