ಉ.ಕ | ಊಹಾಪೂಹಗಳಿಗೆ ಕಿವಿಗೊಡಬೇಡಿ :ಕಾಸರಕೋಡು ವಾಣಿಜ್ಯ ಬಂದರು ನಿರ್ಮಾಣಕ್ಕೆ ಸಹಕರಿಸಿ :ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ : ಹೊನ್ನಾವರದ ಕಾಸರಕೋಡುನಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಬಂದರು ಕಾಮಗಾರಿಗೆ ಅಗತ್ಯವಿರುವ ಸರ್ವೇ ಕಾರ್ಯವನ್ನು ಈ ತಿಂಗಳಲ್ಲಿ ನಡೆಸಲಾಗುತ್ತಿದ್ದು, ಸ್ಥಳೀಯರು ಅಗತ್ಯ ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾರ್ವಜನಿಕರ ಸಂಶಯ ನಿವಾರಣಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸರ್ಕಾರವು ಸಾರ್ವಜನಿಕ ಉದ್ದೇಶದಿಂದ ನಿರ್ಮಿಸಲಾಗುತ್ತಿರುವ ಕಾಸರಕೋಡು ಬಂದರು ನಿರ್ಮಾಣ ಕಾಮಗಾರಿಗೆ ಸ್ಥಳೀಯ ಜನತೆ ಸಂಪೂರ್ಣ ಸಹಕಾರ ನೀಡುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಊಹಾಪೂಹ ಮತ್ತು ಕಲ್ಪಿತ ಸಂಶಯಗಳಿಗೆ ಕಿವಿಗೊಡಬೇಡಿ ಎಂದರು‌ .
ವಾಣಿಜ್ಯ ಬಂದರು ಯೋಜನೆಯ ಕುರಿತ ಸಾರ್ವಜನಿಕರ ಅಹವಾಲು ಮತ್ತು ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತರಲಾಗುವುದು. ಇದೇ ತಿಂಗಳಲ್ಲಿ ಯೋಜನೆಯ ಕಾಮಗಾರಿ ಕುರಿತಂತೆ ಸರ್ವೆ ಕಾರ್ಯ ಆರಂಭಿಸಲಾಗುವುದು ಹಾಗೂ ಈ ಬಗ್ಗೆ ಸಾರ್ವಜನಿಕರಿಗೆ ದಿನಪತ್ರಿಕೆಗಳ ಮೂಲಕ ಮಾಹಿತಿ ನೀಡಲಾಗುವುದು ಎಂದರು.
ಯೋಜನೆಯಿಂದ ಭೂಮಿ ಕಳೆದುಕೊಳ್ಳುವ ಸಾರ್ವಜನಿಕರಿಗೆ ಗರಿಷ್ಠ ಪ್ರಮಾಣದ ಪರಿಹಾರ ಮೊತ್ತ , ಪರ್ಯಾಯ ಜಮೀನು ಅಲ್ಲದೇ ಕುಟುಂಬದ ಸದಸ್ಯರಿಗೆ ಉದ್ಯೋಗ ಒದಗಿಸಲಾಗುವುದು ಎಂದ ಜಿಲ್ಲಾಧಿಕಾರಿಗಳು, ಗ್ರಾಮಸ್ಥರ ಎಲ್ಲಾ ಬೇಡಿಕೆಗಳ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಲಾಗುವುದು ಹಾಗೂ ನ್ಯಾಯಯುತವಾಗಿ ಈಡೇರಿಸಲಾಗುವುದು.
ಮೊದಲ ಹಂತದಲ್ಲಿ ಸರ್ಕಾರ ಬಂದರು ಇಲಾಖೆಗೆ ಸೇರಿದ ಜಾಗದಲ್ಲಿ ಜಟ್ಟಿ ನಿರ್ಮಾಣಕ್ಕೆ ಅವಕಾಶ ನೀಡಿದೆ. ಮೊದಲ ಹಂತದಲ್ಲಿ 93 ಎಕರೆ ಜಮೀನು ನೀಡುವ ಒಡಂಬಡಿಕೆ 2014 ರಲ್ಲೇ ಆಗಿದೆ. ಎರಡನಸೆ ಹಂತದಲ್ಲಿ ಬಂದರು ನಿರ್ಮಿಸುವ ಕಂಪನಿಯ ಅವಶ್ಯಕತೆಗಳನ್ನು ನೋಡಿ, ಶರತ್ತು ವಿಧಿಸಿ ಮತ್ತೆ 100 ಎಕರೆ ನೀಡುವ ಬಗ್ಗೆ ಬಹಳ ಹಿಂದೆಯೇ ಸರ್ಕಾರಿ ಆದೇಶವಾಗಿದೆ. ದಾಖಲೆ ಬೇಕಾದವರು ಅರ್ಜಿ ಸಲ್ಲಿಸಿ ಮಾಹಿತಿ ಪಡೆಯಬಹುದು ಎಂದರು. ಅಪೂರ್ಣ ಮಾಹಿತಿ ಇಟ್ಟುಕೊಂಡು ವಾದಿಸಿದ ಓರ್ವರನ್ನು ಜಿಲ್ಲಾಧಿಕಾರಿ ಝಾಡಿಸಿದರು. ಕಾಸರಕೋಡು ಗ್ರಾಮಕ್ಕೆ , ಅಲ್ಲಿನ ನಿವಾಸಿಗಳಿಗೆ ಯಾವುದೇ ತೊಂದರೆ ಇಲ್ಲ. ಅವರ ಭೂಮಿಯೂ ಯೋಜನೆಗೆ ಹೋಗುವುದಿಲ್ಲ.
ರಸ್ತೆ ಅಂಚಿನ ಮನೆಗಳ ಸರ್ವೆ ಮಾಡಲಾಗುವುದು. ನಂತರ ದಾಖಲೆ ಪರಿಶೀಲಿಸಿ ಸರ್ಕಾರದ ಅನುದಾನಕ್ಕೆ ಜಿಲ್ಲಾಡಳಿತ ಬರೆಯಲಿದೆ ಎಂದರು.

ಮತ ಹಾಕದಿದ್ದರೆ ನನಗೇನು ನಷ್ಟವಿಲ್ಲ :
ಮತದಾನ ಬಹಿಷ್ಕಾರದ ಬಗ್ಗೆ ಸಭೆಯಲ್ಲಿ ಒಬ್ಬರು ಪ್ರಸ್ತಾಪಿಸಿದಾಗ, ನೀವು ಮತದಾನ ಮಾಡದಿದ್ದರೆ ನನಗೇನೂ ನಷ್ಟವಿಲ್ಲ. ನೀವು ಮತ ಹಾಕದಿದ್ದರೆ
ಚುನಾವಣಾ ಆಯೋಗ ನನ್ನನ್ನು ಗಲ್ಲಿಗೇರಿಸುವುದಿಲ್ಲ. ನಾವು ಜಿಲ್ಲಾ ಮಟ್ಟದ ಸರ್ಕಾರ. ನಿಮ್ಮ ಸಂಶಯ ನಿವಾರಣೆಗೆ ಸಭೆ ಕರೆದು ಮಾತಾಡುತ್ತಿದ್ದೇನೆ ಎಂದು ಜಿಲ್ಲಾಧಿಕಾರಿ ಖಡಕ್ ಪ್ರತಿಕ್ರಿಯೆ ನೀಡಿದರು.

ಬಂದರಿಗೆ ರಸ್ತೆಯನ್ನು ಭಾರತ ಮಾಲಾ ಯೋಜನೆಯಲ್ಲಿ ಮಾಡಲಾಗುತ್ತಿದೆ. ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನ ಇದೆ ಎಂದು ಬಂದರು ಇಲಾಖೆಯ ನಿರ್ದೇಶಕ ಕ್ಯಾಪ್ಟನ್ ಸ್ವಾಮಿ ಹೇಳಿದರು.

ಸ್ಥಳೀಯರ ವಿರುದ್ದ ಪ್ರಕರಣ ಹಿಂಪಡೆಯುವ ಚಿಂತನೆ :

ಅಲ್ಲದೇ ಈ ಹಿಂದೆ ಸ್ಥಳೀಯರ ವಿರುದ್ದ ಹೊನ್ನಾವರದಲ್ಲಿ ಬಂದರು ವಿಷಯದಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯುವ ಬಗ್ಗೆ ಕೂಡಾ ಪೊಲೀಸ್ ಇಲಾಖೆಯೊಂದಿಗೆ ಚರ್ಚಿಸಲಾಗುತ್ತಿದೆ ಎಂದರು.

ಈಗಾಗಲೇ ಯೋಜನೆಯ ಸಾಕಷ್ಟು ವಿಳಂಬವಾಗಿದ್ದು, ಯೋಜನೆ ಕಾಮಗಾರಿಗಳ ಸಮರ್ಪಕ ಅನುಷ್ಠಾನಕ್ಕೆ ಸಹಕಾರ ನೀಡುವಂತೆ ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಾಜಪೂತ್, ಭಟ್ಕಳ ಉಪ ವಿಭಾಗಾಧಿಕಾರಿ ಡಾ.ನಯನಾ, ಬಂದರು ಇಲಾಖೆಯ ಕ್ಯಾ.ಸ್ವಾಮಿ ಹಾಗೂ ಕಾಸರಕೋಡು ಗ್ರಾಮದ ಗ್ರಾಮಸ್ಥರು ಉಪಸ್ಥಿತರಿದ್ದರು.
…….

Latest Indian news

Popular Stories