ಉ.ಕ: ಜಿಲ್ಲೆಯ ಕರಾವಳಿಗೆ ಕಾಲಿಟ್ಟ ಮುಂಗಾರು : ಅಂಕೋಲಾ, ಕಾರವಾರದಲ್ಲಿ ಭರ್ಜರಿ ಮಳೆ‌

ಕಾರವಾರ : ಉತ್ತರಕನ್ನಡ ಕರಾವಳಿಯಲ್ಲಿ ವರುಣಾರ್ಭಟ ಶುಕ್ರವಾರ ದಿಂದ ಆರಂಭವಾಗಿದೆ. ಜಿಲ್ಲೆಗೆ ಇಂದು ಅಧಿಕೃತವಾಗಿ ಮುಂಗಾರು ಕಾಲಿಟ್ಟಂತಾಗಿದೆ.

ಕಾರವಾರ, ಅಂಕೋಲಾ, ಕುಮಟಾ ಸೇರಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಯಿತು. ಮಧ್ಯಾಹ್ನ ಆರಂಭವಾದ ಮಳೆ ಸಂಜೆಯಾದರೂ ಸಹ ಕಾರವಾರದಲ್ಲಿ ಸುರಿಯುತ್ತಲೇ ಇದೆ.‌
ಅಂಕೋಲಾದಲ್ಲಿ ಪಟ್ಟಣದ ರಸ್ತೆಯಲ್ಲೆಲ್ಲಾ ನೀರು ಆವರಿಸಿ, ಬೊಳೆ ಗ್ರಾಮದ ಅಂಗನವಾಡಿಗೆ ನೀರು ನುಗ್ಗಿತ್ತು. ಆ ವೇಳೆ ಅಂಗನವಾಡಿಯಲ್ಲಿ ಮಕ್ಕಳು ಇರಲಿಲ್ಲ .ಧಾರಾಕಾರ ಸುರಿದ ಮಳೆಗೆ ಕರಾವಳಿ ನಗರ , ಪಟ್ಟಣಗಳ ರಸ್ತೆಯ ಮೇಲೆ ಮಳೆಯ ನೀರು ಹರಿಯಿತು.


ಧಾರಾಕಾರ ಮಳೆ ಕಾರಣ ಪಟ್ಟಣಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿತ್ತು. ಕೊಡೆ ಹಾಗೂ ರೇನ್ ಕೋಟ್ ಬಳಸಿ ಮಳೆಯಲ್ಲೇ ಕೆಲಸ ಕಾರ್ಯಗಳಿಗೆ ನಡೆದರು.
ಭಾರೀ ಮಳೆಯಿಂದಾಗಿ ರಸ್ತೆ ಬದಿ ವ್ಯಾಪಾರಸ್ಥರು, ಸಾಮಾಗ್ರಿ ರಕ್ಷಣೆಗೆ ಪರದಾಡಿದರು.

ನೀರು ತುಂಬಿಕೊಂಡ ರಸ್ತೆಯಲ್ಲೇ ವಾಹನಗಳ ಓಡಾಟ ಕಂಡು ಬಂತು.ಕರಾವಳಿಯಲ್ಲಿ ಮುಂದಿನ 5 ದಿನ ಭಾರೀ ಗಾಳಿ ಸಹಿತ ಮಳೆ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಹಾಗೂ ಸಮುದ್ರದಲ್ಲಿ ಗಂಟೆಗೆ 45 ರಿಂದ 50 ಕಿಮೀ ವೇಗದಲ್ಲಿ ಗಾಳಿ ಬೀಸುವ ಮುನ್ಸೂಚನೆ ಇದೆ. ಮುಂದಿನ
5 ದಿನ ಮೀನುಗಾರರು ಸಮುದ್ರಕ್ಕಿಳಿಯದಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ. ಮರದ ಕೆಳಗೆ ನಿಲ್ಲದಂತೆ ಹಾಗೂ ಮಳೆ ಇರುವಾಗ ಮನೆಯಲ್ಲಿ ಸುರಕ್ಷಿತ ವಾಗಿರುವಂತೆ ಜಿಲ್ಲಾಡಳಿತ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

Latest Indian news

Popular Stories