ಕಾರವಾರ : ಅರಣ್ಯ ಇಲಾಖೆ ಕೆನರಾ ವೃತ್ತ ಶಿರಸಿ, ಹಳಿಯಾಳ ಅರಣ್ಯ ವಿಭಾಗ ವತಿಯಿಂದ ಹಾರ್ನ್ ಬಿಲ್ ಹಬ್ಬ-2024 ಕಾರ್ಯಕ್ರಮವು ಫೆಬ್ರವರಿ 17 ಮತ್ತು 18 ರಂದು , ಹಾರ್ನ್ ಬಿಲ್ ಭವನ, ಸರಕಾರಿ ಮರಮುಟ್ಟುಗಳ ಕೋಠಿ ಆವರಣ ದಾಂಡೇಲಿಯಲ್ಲಿ ನಡಯಲಿದೆ.
ಕಾರ್ಯಕ್ರಮವನ್ನು ಮೀನುಗಾರಿಕೆ, ಬಂದರು ಸಚಿವ ಮಂಕಾಳ ಎಸ್. ವೈದ್ಯ ಉದ್ಘಾಟಿಸಲಿದ್ದಾರೆ. , ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರು ಹಾಗೂ ಶಾಸಕ ಆರ್.ವಿ.ದೇಶಪಾಂಡೆ ಅಧ್ಯಕ್ಷತೆ ವಹಿಸಲಿದ್ದಾರೆ.
ಅರಣ್ಯ, ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.
ದಾಂಡೇಲಿಯು ತನ್ನ ಪ್ರಾಕೃತಿಕ ಸೌಂದರ್ಯದಿಂದ ಸಮೃದ್ಧವಾಗಿದೆ. ಎಲೆ ಉದುರುವ ಅರಣ್ಯದಿಂದ ನಿತ್ಯ ಹರಿದ್ವರ್ಣ ಅರಣ್ಯದರೆಗಿನ ನೈಸರ್ಗಿಕ ಸಂಪತ್ತನ್ನು ಹೊಂದಿದೆ. ಇಲ್ಲಿರುವ ಜೀವ ವೈವಿಧ್ಯತೆಯು ಪರಿಸರ ಪ್ರೇಮಿಗಳನ್ನು ಕೈಬೀಸಿ ಆಯಸ್ಕಾಂತದಂತೆ ತನ್ನತ್ತ ಸೆಳೆಯುತ್ತದೆ. ದಾಂಡೇಲಿ ಪ್ರಾಕೃತಿಕ ಶ್ರೇಣಿಯ ಪ್ರತೀಕವಾಗಿರುವ ಮುಕುಟ ಪ್ರಾಯ ಪಕ್ಷಿಯೇ ಹಾರ್ನ ಬಿಲ್ ಅರ್ಥಾತ್ ಮಂಗಟ್ಟೆ ಪಕ್ಷಿ. ಪ್ರತಿ ವರ್ಷ ಕರ್ನಾಟಕ ಅರಣ್ಯ ಇಲಾಖೆ ಹಳಿಯಾಳ ಪ್ರಾದೇಶಿಕ ಅರಣ್ಯ ವಿಭಾಗವು ಈ ಪಕ್ಷಿಯ ಮಹತ್ವವನ್ನು ಹಾಗೂ ಪ್ರಾತಿನಿಧ್ಯವನ್ನು ಪ್ರಚುರಪಡಿಸಲು ಹಾರ್ನಬಿಲ್ ಹಬ್ಬವನ್ನು ವಿದ್ಯುಕ್ತವಾಗಿ ಆಚರಿಸುತ್ತದೆ. ದಾಂಡೇಲಿ ಹಾಗೂ ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ಒಟ್ಟು ನಾಲ್ಕು ಬಗೆಯ ಹಾರ್ನಬಿಲ್ ಪಕ್ಷಿಗಳಿದ್ದು ಅವುಗಳ ಹೆಸರು ಮಲಬಾರ್ ಗ್ರೇ ಹಾರ್ನಬಿಲ್, ಮಲಬಾರ್ ಪೈಡ್ ಹಾರ್ನಬಿಲ್, ಗ್ರೇಟ್ ಹಾರ್ನಬಿಲ್, ಇಂಡಿಯನ್ ಗ್ರೇ ಹಾರ್ನಬಿಲ್. ಇವುಗಳ ಸ್ವರ್ಗ ತಾಣವೇ ದಾಂಡೇಲಿಯಾಗಿದೆ. ಈ ಹಕ್ಕಿಹಬ್ಬದಲ್ಲಿ ನೊಂದಣಿ ಮೂಲಕ ಭಾಗವಹಿಸುವ ಎಲ್ಲರಿಗೂ ಚರ್ಚೆಗಳು, ಸಫಾರಿ, ಪಕ್ಷಿ ವೀಕ್ಷಣೆ, ಚಾರಣವನ್ನು ಹಮಿಕೊಳ್ಳಲಾಗುತ್ತದೆ. ಹಳಿಯಾಳ ಅರಣ್ಯ ವಿಭಾಗವು ಹಾರ್ನಬಿಲ್ ಹಕ್ಕಿಹಬ್ಬಕ್ಕೆ ಎಲ್ಲರನ್ನೂ ಮುಕ್ತವಾಗಿ ಸ್ವಾಗತಿಸುತ್ತಿದ್ದು, ಹೆಮ್ಮೆಯ ಹಾರ್ನಬಿಲ್ ಹಬ್ಬದಲ್ಲಿ ಎಲ್ಲರೂ ಭಾಗವಹಿಸುವಂತೆ ಹಳಿಯಾಳ ವಿಭಾಗದ ಉಪ ಅರಣ್ಯಧಿಕಾರಿ ವಿನಂತಿಸಿದ್ದಾರೆ.
…..