ಅಭ್ಯರ್ಥಿ ಯಾರೆಂಬುದೇ ಪಕ್ಷದೊಳಗಿನ ಭಾರೀ ಚರ್ಚೆ | ಈ ಸಲ ಕಾಂಗ್ರೆಸ್ – ಬಿಜೆಪಿ ಜಿದ್ದಾಜಿದ್ದಿ | ಹತ್ತು ಸಲ ಉತ್ತರ ಕನ್ನಡ ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್ ಗೆದ್ದಿದೆ

ಜೋಕಿಂ ದಾದಾ ಆಳ್ವ ಮೂರು ಸಲ, ದೇವರಾಯ ನಾಯ್ಕ ನಾಲ್ಕು ಸಲ, ಮಾರ್ಗರೆಟ್ ಆಳ್ವಾ, ಬಿ.ಪಿ. ಕದಂ, ಬಿ.ವಿ.ನಾಯ್ಕ ತಲಾ ಒಂದೊಂದು ಸಲ ಉತ್ತರ ಕನ್ನಡದಿಂದ ಲೋಕಸಭೆ ಪ್ರತಿನಿಧಿಸಿದ್ದಾರೆ.

ದಿನಕರ ದೇಸಾಯಿ ಒಮ್ಮೆ ಸ್ವತಂತ್ರ ಅಭ್ಯರ್ಥಿಯಾಗಿ ಲೋಕಸಭೆ ಪ್ರತಿನಿಧಿಸಿದ್ದರು

…………………

ಕಾರವಾರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳು ಹಾಗೂ ಬೆಳಗಾವಿ ಜಿಲ್ಲೆಯ 2 ವಿಧಾನಸಭಾ ಕ್ಷೇತ್ರ ಒಳಗೊಂಡಿದೆ. ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಾದ ಕಾರವಾರ, ಭಟ್ಕಳ, ಶಿರಸಿ, ಹಳಿಯಾಳ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿದೆ‌ . ಕುಮಟಾ, ಯಲ್ಲಾಪುರ ಈ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು ಇದ್ದಾರೆ‌ . ಕಿತ್ತೂರು ಕಾಂಗ್ರೆಸ್ ಪಾಲಾಗಿದ್ದರೆ, ಖಾನಾಪುರ ಬಿಜೆಪಿ ತೆಕ್ಕೆಯಲ್ಲಿದೆ. ಇಂತಹ ಸನ್ನಿವೇಶದಲ್ಲಿ ಕಾಂಗ್ರೆಸ್ ಕಾದು ನೋಡಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ಚಿಂತನೆ ನಡೆಸಿದೆ. ಅಂತರಿಕ ಸರ್ವೆಗಳು ಸಹ ನಡೆದಿವೆ . ಬಿಜೆಪಿ ಸಹ ಹಾಲಿ ಸಂಸದ ಅನಂತಕುಮಾರ್ ಹೆಗಡೆ ಅಥವಾ ವಿಶ್ವೇಶ್ವರ ಹೆಗಡೆ ಕಾಗೇರಿಯನ್ನು ಕಣಕ್ಕೆ ಇಳಿಸುವುದೊ ಎಂಬ ಯೋಚನೆಯಲ್ಲಿದೆ. ಸಂಘ ಪರಿವಾರದಿಂದ ಅನಂತ ಕುಮಾರ್ ಮತ್ತೆ ಅಭ್ಯರ್ಥಿ ಆಗಲಿ ಎಂಬ ಪ್ರಯತ್ನ ನಡೆದಿದ್ದವು. ಹಾಲಿ ಸಂಸದ ಅನಂತಕುಮಾರ್ ಕಳೆದ ೩ ವರ್ಷಗಳಲ್ಲಿ ದಿಶಾ ಮೀಟಿಂಗ್ ಹೊರತು ಪಡಿಸಿ ಪಕ್ಷ ರಾಜಕೀಯ ಚಟುವಟಿಕೆಗಳು ಮತ್ತು ರಾಜಕೀಯ ದಿಂದ ದೂರ ಇದ್ದರು‌ . ಕಳೆದ ವಿಧಾನಪರಿಷತ್, ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಸಹ ಮಾಡಿರಲಿಲ್ಲ. ಅಲ್ಲದೆ ಪ್ರಧಾನಿ ಮೋದಿ ಜಿಲ್ಲೆಗೆ ಬಂದಾಗಲೂ ವೇದಿಕೆ ಹಂಚಿಕೊಂಡಿರಲಿಲ್ಲ. ಹಾಗಾಗಿ ಬರುವ ಲೋಕಸಭೆಗೆ ಅವರು ಸ್ಪರ್ಧಿಸುವುದಿಲ್ಲ ಎಂಬ ಮಾತಿತ್ತು. ೨೫ ವರ್ಷ ಸಂಸದನಾಗಿ ರಾಜಕೀಯ ಸಾಕು ಎಂದು ಅವರು ನಿರ್ಧರಿಸಿದ್ದರಂತೆ. ಅವರೇ ಇದನ್ನು ಈಚಿಗೆ ಮಾಧ್ಯಮಗಳ ಎದುರು ಹೇಳಿಕೊಂಡಿದ್ದರು. ಈಗ ಅವರ ಕಟ್ಟಾ ಬೆಂಬಲಿಗರ ಒತ್ತಾಸೆಯ ಮೇರೆಗೆ ತಮ್ಮ ನಿರ್ಧಾರ ಬದಲಿಸಿರುವ ಅನಂತ ಕುಮಾರ್ ಹೆಗಡೆ ಚುನಾವಣಾ ಕಣಕ್ಕೆ ಧುಮುಕಲು ನಿರ್ಧರಿಸಿದಂತಿದೆ. ಆದರೆ ಪಕ್ಷ ಟಿಕೆಟ್ ಕೊಡಬೇಕಲ್ಲ ? . ಮಧ್ಯಪ್ರದೇಶ, ಛತ್ತಿಸಗಡ, ರಾಜಸ್ಥಾನ ಮುಖ್ಯಮಂತ್ರಿಗಳ ಆಯ್ಕೆಯ ಸಮಯದಲ್ಲಿ ಬಿಜೆಪಿ ಅನುಸರಿಸಿದ ಹೊಸ ಹೆಜ್ಜೆಗಳನ್ನು ನೋಡಿದರೆ, ವಿಶ್ವೇಶ್ವರ ಹೆಗಡೆ ಕಾಗೇರಿ ಬಹುತೇಕ ಕೆನರಾ ಲೋಕಸಭೆಗೆ ಅಭ್ಯರ್ಥಿಯಾಗುವ ಲಕ್ಷಣಗಳಿವೆ. ಇನ್ನೂ ಹೊಸ ಪ್ರಯೋಗ ಮಾಡಿದರೆ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಅಭ್ಯರ್ಥಿ ಆಗಬಹುದು. ಪತ್ರಕರ್ತನನ್ನು ಕಣಕ್ಕೆ ಇಳಿಸಿದರೆ ಯಲ್ಲಾಪುರ ಭಾಗದ ಟಿಕೆಟ್ ಆಕಾಂಕ್ಷಿ ಪತ್ರಕರ್ತರೊಬ್ಬರು ಅಭ್ಯರ್ಥಿ ಆಗಬಹುದು. ಆದರೆ ಪತ್ರಕರ್ತರು ಚುನಾವಣೆಗೆ ನಿಂತು ಗೆಲ್ಲುವುದು ಕಷ್ಟ ಎಂದು ಬಿಜೆಪಿ ಒಳಮರ್ಮ ಬಲ್ಲವರು ಬಹಿರಂಗವಾಗಿಯೇ ಹೇಳುತ್ತಾರೆ. ಈಗ ಭಾವನಾತ್ಮಕ ವಿಷಯ ಉತ್ತರ ಕನ್ನಡದಲ್ಲಿ ವರ್ಕೌಟ್ ಆಗಲ್ಲ ಎಂಬುದು ಬಿಜೆಪಿಗೆ ಉತ್ತರ ಕನ್ನಡದ ಮಟ್ಟಿಗೆ ಗೊತ್ತಿದೆ. ದಕ್ಷಿಣ ಕನ್ನಡ, ಉಡುಪಿಯ ಗುಣವೇ ಬೇರೆ.

ಉತ್ತರ ಕನ್ನಡದ ಜನರ ಸ್ವಾಭಾವವೇ ಬೇರೆ. ಭಟ್ಕಳದಲ್ಲಿ ಸಹ ಗಾಳಿ, ಹವಾಮಾನ ಬದಲಾಗಿದೆ. ಅಲ್ಲಿ ಮೊದಲಿದ್ದ ದ್ವೇಷಮಯ ವಾತಾವರಣ ಬದಲಾಗಿದೆ. ಕರಾವಳಿ ,ಮಲೆನಾಡು ,ಅರೆ ಮಲೆನಾಡು, ಬಯಲು ಸೀಮೆ ಹೊಂದಿರುವ ಕೆನರಾ ಕ್ಷೇತ್ರದಲ್ಲಿ ಅಭಿವೃದ್ಧಿ ಪರ ರಾಜಕೀಯ ಹೆಚ್ಚು ಚಾಲ್ತಿಯಲ್ಲಿದೆ.

ಹಾಗೂ ಭಾವನಾತ್ಮಕ ರಾಜಕೀಯ ನಡೆಯಲ್ಲ ಎಂಬುದು ಸ್ಪಷ್ಟ ‌. ಹಾಗಾಗಿ ಬಿಜೆಪಿಯಲ್ಲಿ ಅಭ್ಯರ್ಥಿ ಯಾರು ಎಂಬುದು ಇನ್ನೂ ಸ್ಪಷ್ಟತೆ ಇಲ್ಲ‌ .ಹಾಗಾಗಿ ಬುಧುವಾರ (ಜ.3 ರಂದು) ದಿಶಾ ಸಭೆಗೆ ಬಂದಿದ್ದ ಸಂಸದ ಅನಂತಕುಮಾರ್ ಹೆಗಡೆ ಮಾಧ್ಯಮಗಳಿಂದ ಅಂತರ ಕಾಯ್ದುಕೊಂಡರು‌ . ಬಿಜೆಪಿ ಯಿಂದ ವಕೀಲ ನಾಗರಾಜ ನಾಯಕ, ಕಾರವಾರದ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ,ಮಾಜಿ ಶಾಸಕಿ ರೂಪಾಲಿ ನಾಯ್ಕ ಕೆನರಾ ಸಂಸದ ಸ್ಥಾನಕ್ಕೆ ಟಿಕೆಟ್ ಕೇಳಿದ್ದಾರೆ‌ . ಅನೇಕ ಹಿರಿಯರಿಂದ ಸಹ ಟಿಕೆಟ್ ಕೊಡುವಂತೆ ಹೈಕಮಾಂಡ್ ಮೇಲೆ ಒತ್ತಡ ಹಾಕುತ್ತಿದ್ದಾರೆ. ಹಿಂದುಳಿದ ವರ್ಗಕ್ಕೆ ಬಿಜೆಪಿ ಟಿಕೆಟ್ ಕೊಡಬೇಕು ಎಂಬ ಧ್ವನಿ ಸಹ ಇದೆ. ಅಲ್ಲದೆ ಕಾಂಗ್ರೆಸ್ ಈ ಸಲ ನಾಮಧಾರಿಗಳಿಗೆ ಟಿಕೆಟ್ ನೀಡಿದರೆ, ರೂಪಾಲಿ ನಾಯ್ಕ ಸಹ ಹಿಂದುಳಿದ ವರ್ಗಕ್ಕೆ ಸೇರಿದವರು ಎಂಬ ಕಾರ್ಡ ಬಳಸಲು ಸಾಧ್ಯ ಎಂಬ ಅಂಶವನ್ನು ತೇಲಿಬಿಡಲಾಗಿದೆ.

ಕಾಂಗ್ರೆಸ್ ನಲ್ಲಿ ಹಲವು ಲೆಕ್ಕಾಚಾರ :
ಕಾಂಗ್ರೆಸ್ ಪಕ್ಷದಲ್ಲಿ ಹಲವು ಲೆಕ್ಕಾಚಾರಗಳಿದ್ದು ಮೊದಲ ಹಂತದಲ್ಲಿ ಬಿ.ಕೆ.ಹರಿಪ್ರಸಾದ್ ಅಥವಾ ಶಿವರಾಮ ಹೆಬ್ಬಾರರನ್ನು ಕಣಕ್ಕೆ ಇಳಿಸುವ ಚಿಂತನೆ ನಡೆದಿದೆ. ಶಿವರಾಮ ಹೆಬ್ಬಾರ್ ಇನ್ನೂ ಕಾಂಗ್ರೆಸ್ ಸೇರಿಲ್ಲ. ಆದರೆ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹಾಗೂ ಸಿಎಂ ಜೊತೆ ನಿಕಟ ಸಂಪರ್ಕದಲ್ಲಿದ್ದಾರೆ‌ . ಹೆಬ್ಬಾರ ಕಾಂಗ್ರೆಸ್ ಸೇರುವುದಕ್ಕೆ ಹಿರಿಯರಾದ ಆರ್.ವಿ. ದೇಶಪಾಂಡೆ, ಶಿರಸಿ ಶಾಸಕ ಭೀಮಣ್ಣ ನಾಯ್ಕ ಆರಂಭದಲ್ಲಿ ವಿರೋಧಿಸಿದರೂ, ಅಂತಿಮವಾಗಿ ಅವರು ಪಕ್ಷದ ನಿರ್ಣಯದ ವಿರುದ್ಧ ಹೋಗಲಾರರು.

ಬಿಜೆಪಿಯಿಂದ ಅನಂತಕುಮಾರ್ ಹೆಗಡೆ ಅಥವಾ ಕಾಗೇರಿ ಅಭ್ಯರ್ಥಿ ಯಾದರೆ ಅವರನ್ನು ಕಟ್ಟಿಹಾಕುವ ಸಾಮರ್ಥ್ಯ ಇರುವುದು ಶಿವರಾಮ ಹೆಬ್ಬಾರ್ ಗೆ ಸಾಧ್ಯ ಎಂಬುದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಲೆಕ್ಕಾಚಾರ. ದೇಶಪಾಂಡೆ ಅವರಿಗೆ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಶಾಸಕ ಭೀಮಣ್ಣ ನಾಯ್ಕ ಪಕ್ಷದ ನಿರ್ಣಯಕ್ಕೆ ವಿರುದ್ಧ ಹೋಗುವವರಲ್ಲ. ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಹೊಸ ಮುಖ ಖ್ಯಾತ ನ್ಯಾಯವಾದಿ ಸಿದ್ದಾಪುರ ಮೂಲದ ಜಿ.ಟಿ.ನಾಯ್ಕ , ಅಂಜಲಿ ನಿಂಬಾಳ್ಕರ್ ಹೆಸರು ಪಕ್ಷದ ಹೈಕಮಾಂಡ್ ತನಕ ತಲುಪಿದೆ. ಜಿ.ಟಿ.ನಾಯ್ಕ ಅವರು ಕಾರವಾರದಲ್ಲಿ ಪ್ರಸಿದ್ಧಿ ಪಡೆದವರು. ಅವರು ಜಿಲ್ಲೆಯಲ್ಲಿ ಪರಿಚಿತರು. ಕಿತ್ತೂರು ,ಖಾನಾಪುರದಲ್ಲಿ ಸ್ವಲ್ಪ ಶಕ್ತಿ ಹಾಕಿದರೆ , ಗೆಲುವು ಸಾಧ್ಯ ಎಂದು ಎಚ್.ಕೆ.ಪಾಟೀಲ್ ರಂತಹ ಹಿರಿಯರ ಲೆಕ್ಕಾಚಾರ. ಕಾನೂನು ತಿಳುವಳಿಕೆ, ಒಳ್ಳೆಯ ವ್ಯಕ್ತಿತ್ವ , ಹಿಂದುಳಿದ ವರ್ಗದ ಪ್ರತಿಭೆ ಎಂಬುದು ಗಣನೆಗೆ ಬರುತ್ತದೆ ಎಂಬ ಆಲೋಚನೆ ಕಾಂಗ್ರೆಸಗೆ ಇದೆ. ಅಲ್ಲದೆ ನಾಮಧಾರಿ ಸಮುದಾಯಕ್ಕೆ ಸಂಸದ ಪ್ರಾತಿನಿಧ್ಯ ತಪ್ಪಿ 25 ವರ್ಷಗಳಾಗಿವೆ. ದೇವರಾಯ ನಾಯ್ಕ ನಾಲ್ಕು ಸಲ ಲೋಕಸಭೆಗೆ ಉತ್ತರ ಕನ್ನಡ ದಿಂದ ಆಯ್ಕೆಯಾಗಿ ಹೋದವರು. ಅವರ ನಂತರ ನಾಮಧಾರಿಗಳು ರಾಜಕೀಯ ಪ್ರಾತಿನಿಧ್ಯ ಇಲ್ಲದೆ ಸ್ವರಗಿದ್ದಾರೆ. ಇದನ್ನು ತುಂಬಿಕೊಡಲು ವಕೀಲ ಜಿ.ಟಿ.ನಾಯ್ಕರನ್ನು ಮುನ್ನೆಲೆಗೆ ತರುವ ಸಾಧ್ಯತೆಗಳು ಹೆಚ್ಚಿವೆ.

ಇನ್ನು ಅರಣ್ಯ ಹಕ್ಕು ಅತಿಕ್ರಮಣ ಸಕ್ರಮ ಹೋರಾಟಗಾರ ವಕೀಲ ರವೀಂದ್ರ ನಾಯ್ಕ, ಆರ್.ಎಚ್ .ನಾಯ್ಕ ಹೆಸರು ಚರ್ಚೆಗೆ ಬಂದು ಹೋಗಿವೆ.

ಖಾನಾಪುರ ಕ್ಷೇತ್ರದ ಮಾಜಿ ಶಾಸಕಿ ,ಕಾಂಗ್ರೆಸ್ ನಾಯಕಿ
ಅಂಜಲಿ ನಿಂಬಾಳಕರ್ ಹೆಸರು ಸಹ ಹೆಚ್ಚು ಚಾಲ್ತಿಯಲ್ಲಿದೆ.
11 ಲಕ್ಷ ಮತದಾರರಲ್ಲಿ 5.43 ಲಕ್ಷ ಮಹಿಳಾ ಮತದಾರರೇ ಇದ್ದು, ಇವರ ಮತಗಳ ಮೇಲೆ ಕಾಂಗ್ರೆಸ್ ಕಣ್ಣಿಟ್ಟಿದೆ. ಮರಾಠ ಸಮುದಾಯದ ಮತಗಳು ಕಿತ್ತೂರು, ಖಾನಾಪುರ, ಹಳಿಯಾಳ, ದಾಂಡೇಲಿ, ಜೊಯಿಡಾ , ಕಾರವಾರ ಭಾಗದಲ್ಲಿ ಹೆಚ್ಚಿವೆ. ಈ ಅಂಶವನ್ನು ಕಾಂಗ್ರೆಸ್ ಗಣನೆಗೆ ತೆಗೆದುಕೊಂಡಿದೆ.

ಗ್ಯಾರಂಟಿ ಯೋಜನೆಯ ಜಾರಿಯೇ ಕಾಂಗ್ರೆಸ್ ಯಶಸ್ವಿನ ಗಟ್ಟಿ ನೆಲೆ ಎಂದು ಕಾಂಗ್ರೆಸ್ ನಾಯಕರು ಭಾವಿಸಿದ್ದಾರೆ.ಅಹಿಂದ ಮತಗಳು ಕಾಂಗ್ರೆಸ್ ಪಾಲು ಎಂಬ ಸಮೀಕರಣ ಕಾಂಗ್ರೆಸ್ಸಿಗರದ್ದು. ಹಾಗಾಗಿ ಅವರು ಗೆಲುವಿನ ಬಗ್ಗೆ ಹೆಚ್ಚು ವಿಶ್ವಾಸ ಹೊಂದಿದ್ದಾರೆ.

ಮತ್ತೊಂದು ಆಯಾಮದಲ್ಲಿ ಮಂಕಾಳು ವೈದ್ಯರನ್ನೇ ಕಾಂಗ್ರೆಸ್ ಕೆನರಾ ಕ್ಷೇತ್ರಕ್ಕೆ ನಿಲ್ಲಿಸಲಿದೆ ಎಂಬ ಮಾತಿದೆ. ಅವರು ಲೋಕಸಭೆಗೆ ನಿಂತರೆ ಕಾಂಗ್ರೆಸ್ ನವರು ಒಗ್ಗಟ್ಟಿನಿಂದ‌ ಕೆಲಸ ಮಾಡ್ತಾರೆ ಎಂಬ ಮಾತು ಸಹ ಬರುತ್ತಿದೆ. ಈ ಬೆಳವಣಿಗೆ ಅಚ್ಚರಿಯದ್ದಾದರೂ , ಧಾರ್ಮಿಕ ಮನಸ್ಸಿನ , ಬಡವರ ಧ್ವನಿಯಂತೆ ಮಾತಾಡುವ ವೈದ್ಯರು ಸಂಸದರಾಗಿ ಯಶಸ್ಸು ಕಾಣಬಲ್ಲರು ಎಂಬ ಲೆಕ್ಕಾಚಾರವೂ ಇದೆ.

ಇನ್ನು 90 ದಿನಗಳಲ್ಲಿ ಕೆನರಾ ಲೋಕಸಭೆ ಪ್ರತಿನಿಧಿಸುವ ಸ್ಪರ್ಧಿ ಗಳಾರು ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ‌ .ಎಪ್ರಿಲ್‌ನಲ್ಲಿ ನಡೆಯುವ ಕದನದ ನಂತರ ಲೋಕಸಭೆಯಲ್ಲಿ ಜಿಲ್ಲೆಯ ಪ್ರತಿನಿಧಿ ಯಾರೆಂಬುದು ಸ್ಪಷ್ಟವಾಗಲಿದೆ.
……

Latest Indian news

Popular Stories