ಕಾರವಾರ : ಅಳಿವಿನಂಚಿನಲ್ಲಿರುವ ಹಾರ್ನಬಿಲ್ ಪಕ್ಷಿಗಳ ಪ್ರಬೇಧವನ್ನು ಸಂರಕ್ಷಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದು ಪ್ರಚಾರ ಮತ್ತು ಐಸಿಟಿ ವಿಭಾಗದ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸ್ಮಿತಾ ಬಿಜ್ಜೂರ್ ಹೇಳಿದರು.
ಅರಣ್ಯ ಇಲಾಖೆ ಕೆನರಾ ವೃತ್ತ ಶಿರಸಿ, ಹಳಿಯಾಳ ಅರಣ್ಯ ವಿಭಾಗ ವತಿಯಿಂದ ಶನಿವಾರ ದಾಂಡೇಲಿಯಲ್ಲಿರುವ ಹಾರ್ನ ಬಿಲ್ ಭವನದಲ್ಲಿ ನಡೆದ ಹಾರ್ನ್ ಬಿಲ್ ಹಬ್ಬ-2024 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಹಾರ್ನ ಬಿಲ್‌ನ 9 ಪ್ರಬೇಧಗಳಿದ್ದು, ಅದರಲ್ಲಿ 4 ಪ್ರಬೇಧಗಳು ದಾಂಡೇಲಿಯಲ್ಲಿರುವುದು ವಿಶೇಷ. ಈ ಮುಂಗಟ್ಟಿ ಪಕ್ಷಿಯು ಅಳಿವಿನಂಚಿನಲ್ಲಿರುವುದರಿಂದ ಈ ಪ್ರಬೇಧದ ಸಂರಕ್ಷಣೆಯ ಜತೆಗೆ ವಿವಿಧ ಪಕ್ಷಿ ಸಂಕುಲವನ್ನು ಸಂರಕ್ಷಿಸಲು ಅರಣ್ಯ ಇಲಾಖೆ ವತಿಯಿಂದ ಅನೇಕ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ.
ಮುಂಗಟ್ಟು ಪಕ್ಷಿಯ ಸಂರಕ್ಷಣೆಗಾಗಿ ದಾಂಡೇಲಿಯ ಸುತ್ತಮುತ್ತ 50 ಕಿ.ಮೀ ಪ್ರದೇಶವನ್ನು ಸಂರಕ್ಷಿತ ಅರಣ್ಯ ಪ್ರದೇಶ ಎಂದು ಗುರುತಿಸಲಾಗಿದೆ. ಈ ಪಕ್ಷಿಯು ಅರಣ್ಯ ವೃದ್ಧಿಸಲು ಸಹಕಾರಿಯಾಗಿದ್ದು, ಆದ್ದರಿಂದ ಹಾರ್ನ ಬಿಲ್ ಪಕ್ಷಿಯನ್ನು ಅರಣ್ಯದ ರೈತ ಎಂದು ಕರೆಯಾಲುಗತ್ತದೆ. ಜನಸಂಖ್ಯೆ ಹೆಚ್ಚಳದಿಂದ ಕಾಡು ನಾಶವಾಗುತ್ತಿದೆ. ಇದರಿಂದ ವನ್ಯಜೀವಿಗಳ ಸಂತತಿ ನಶಿಸುತ್ತಿದ್ದು, ಅರಣ್ಯ ಸಂರಕ್ಷಣೆ ಜತೆಗೆ ವನ್ಯ ಜೀವಿಗಳ ಸಂರಕ್ಷಣೆಯನ್ನು ಮಾಡಬೇಕಾಗಿದೆ ಎಂದರು.
ಕೆನರಾ ಅರಣ್ಯ ವೃತ್ತದ ಸಿಸಿಎಫ್ ವಸಂತ ರೆಡ್ಡಿ ಮಾತನಾಡಿ ದಾಂಡೇಲಿಯಲ್ಲಿ 2018 ರಿಂದ ಸತತವಾಗಿ ಹಾರ್ನ ಬಿಲ್ ಹಬ್ಬವನ್ನು ಆಚರಿಸುತ್ತಾ ಬರಲಾಗಿದೆ.
ರಾಜ್ಯ ಮತ್ತು ದೇಶದ ವಿವಿಧ ರಾಜ್ಯಗಳಿಂದ ಪಕ್ಷಿ ಪ್ರಿಯರು ಆಗಮಿಸಿದ್ದು ಈಗಾಗಲೇ 120 ಕ್ಕೂ ಹೆಚ್ಚು ಪಕ್ಷಿ ಪ್ರಿಯರು ಆನ್ ಲೈನ್ ಮತ್ತು ಆಪ್ ಲೈನ್ ಮೂಲಕ ನೋಂದಣಿ ಮಾಡಿಕೊಂಡಿದ್ದಾರೆ. ಇಂದು ಮತ್ತೆ ನಾಳೆ ಸಂಪನ್ಮೂಲ ವ್ಯಕ್ತಿಗಳಿಂದ ವಿಚಾರ ಗೋಷ್ಠಿ ನಡೆಯಲಿದ್ದು ಅದರಲ್ಲಿ ಪಕ್ಷಿ ವಾಸ ಸ್ಥಳಗಳ ಸಂರಕ್ಷಣೆ ಬಗ್ಗೆ, ಪಕ್ಷಿಗಳ ಸಂತಾನೋತ್ಪತ್ತಿ ಹೆಚ್ಚಿಸುವು ಬಗ್ಗೆ ಮತ್ತು ಅರಣ್ಯಕ್ಕೆ ತೊಂದರೆಯಾಗದ ರೀತಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೊಳಿಸುವುದು ಹೇಗೆ ಎಂಬುವುದರ ಬಗ್ಗೆ ವಿಚಾರ ವಿನಿಮಯವಾಗಲಿದೆ ಎಂದರು.
ಹಳಿಯಾಳ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಪ್ರಶಾಂತ್ ಕುಮಾರ್ ಕೆ.ಸಿ. ಪ್ರಾಸ್ತಾವಿಕವಾಗಿ ಮಾತನಾಡಿ, ದಾಂಡೇಲಿ ಪ್ರಾಕೃತಿಕ ಶ್ರೇಣಿಯ ಪ್ರತೀಕವಾಗಿರುವ ಮುಕುಟ ಪ್ರಾಯ ಪಕ್ಷಿಯೇ ಹಾರ್ನ ಬಿಲ್ ಪಕ್ಷಿ. ದಾಂಡೇಲಿ ಹಾಗೂ ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ಒಟ್ಟು ನಾಲ್ಕು ಬಗೆಯ ಹಾರ್ನಬಿಲ್ ಪಕ್ಷಿಗಳಿದ್ದು ಅವುಗಳ ಹೆಸರು ಮಲಬಾರ್ ಗ್ರೇ ಹಾರ್ನಬಿಲ್, ಮಲಬಾರ್ ಪೈಡ್ ಹಾರ್ನಬಿಲ್, ಗ್ರೇಟ್ ಹಾರ್ನಬಿಲ್, ಇಂಡಿಯನ್ ಗ್ರೇ ಹಾರ್ನಬಿಲ್. ಇವುಗಳ ಸ್ವರ್ಗ ತಾಣವೇ ದಾಂಡೇಲಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿ.ಪಿ. ಹರ್ಷಬಾನು, ಯೋಗೀಶ ಸಿ.ಕೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಶಿಂದೆ ನಿಲೇಶ ದೆವಬಾ ,ಮತ್ತಿತರರು ಉಪಸ್ಥಿತರಿದ್ದರು.
…….